

ನವದೆಹಲಿ: ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸುವ ಸಲುವಾಗಿ ಹೋರಾಡಿದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖದೇವ್ ಗಲ್ಲಿಗೇರಿದ ದಿನವಿದು. 1931ರಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೂರು ವೀರರ ಸ್ಮರಣಾರ್ಥ ಪ್ರತಿ ವರ್ಷ ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಿಕೊಂಡು ಬಂದಿದ್ದು, ಇಂದು ಪ್ರಧಾನಿ ಮೋದಿ ಸೇರಿದಂತೆ ಕೆಲ ರಾಜಕೀಯ ಮುಖಂಡರು ಈ ವೀರರ ಸ್ಮರಣೆ ಮಾಡಿದ್ದಾರೆ.
ಟ್ವಿಟ್ಟರ್ನಲ್ಲಿ ಹುತಾತ್ಮರ ಸ್ಮರಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ತಾಯಿ ಭಾರತೀಯ ವೀರ ಮಕ್ಕಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು ಅವರನ್ನು ಸ್ಮರಿಸುತ್ತೇನೆ. ಅವರಿಗೆ ಕೃತಜ್ಞರಾಗಿರುವ ರಾಷ್ಟ್ರವು ಅವರು ಮಾಡಿರುವ ತ್ಯಾಗವನ್ನು ಯಾವಾಗಲೂ ಸ್ಮರಿಸುತ್ತದೆ. ಜೈ ಹಿಂದ್!" ಎಂದು ಟ್ವೀಟ್ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, "ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು ಕೇವಲ ಸ್ವಾತಂತ್ರ್ಯ ಹೋರಾಟದಿಂದ ಮಾತ್ರವಲ್ಲ ತ್ಯಾಗದಿಂದಲೂ ಸಹ ಭಾರತದ ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ಮೂವರು ರಾಷ್ಟ್ರೀಯವಾದಿಗಳು ಸ್ವಾತಂತ್ರ್ಯ ಚಳವಳಿಯ ಅಮರ ಸಂಕೇತಗಳಾಗಿದ್ದಾರೆ. ರಾಷ್ಟ್ರದ ಸೇವೆ ಮತ್ತು ಐಕ್ಯತೆಗೆ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಾರೆ." ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಕೂಡ ಹುತಾತ್ಮರ ದಿನದಂದು ದೇಶಭಕ್ತರನ್ನು ನೆನಪಿಸಿಕೊಂಡಿದ್ದು, "ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರುಗೆ ನಮನಗಳು" ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)