

ಸೊರಬ: ತಾಲೂಕಿನ ಮಂಚಿ ಗ್ರಾಮದ ಹನುಮಂತದೇವರ ಜಾತ್ರೆ ವಿಶೇಷವಾಗಿ ಮರಗಳನ್ನು ಬೆರುಸಹಿತ ಕಿತ್ತು ತರುವ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಸೋಮವಾರ ನೆರವೇರಿತು.
ಮಂಚಿ ಮರಗಳು ಬುಡಸಹಿತ ಹೇಗೆ ಕಿತ್ತುತರಲಾಗುತ್ತೋ ಅದರ ಆಧಾರದ ಮೇಲೆ ಮುಂಗಾರು ಮಳೆ ಆಗುತ್ತದೆ ಎಂಬ ನಂಬಿಕೆ ಇದೆ. ಇದನ್ನು ನೋಡುವುದಕ್ಕಾಗಿಯೇ ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತಾರೆ. ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಹನುಮಂತ ದೇವರ ಜಾತ್ರಾ ಮಹೋತ್ಸವದ ಮರುದಿನ ನಡೆಯುವ ಬೇರು ಸಹಿತ ಬಿಲ್ವಪತ್ರೆ ಮರ ಕಿತ್ತು ತರುವ ಸಂಪ್ರದಾಯ ಅತ್ಯಂತ ವಿಶೇಷ ಹಾಗೂ ಮಹತ್ವ ಪಡೆದಿದೆ.
ರಥೋತ್ಸವದ ಮರುದಿನ ನಡೆಯುವ ಬೇರು ಸಹಿತ ಮರ ಕಿತ್ತುತರುವ ದೃಶ್ಯವನ್ನು ನೋಡಿ ಮಳೆ-ಬೆಳೆ ಬಗ್ಗೆ ವಿಶ್ಲೇಷಿಸಲಾಗುತ್ತದೆ. ಅದರಂತೆ ಎಲ್ಲ 6 ಮರಗಳು ಚಿಗುರು ಹಂತದಲ್ಲಿವೆ. ಎಲ್ಲವೂ ಒಟ್ಟಾಗಿ ಇರುವುದರಿಂದ ಈ ಬಾರಿಯೂ ಮುಂಗಾರು ಉತ್ತಮವಾಗಿ ಮಳೆ-ಬೆಳೆ ಚೆನ್ನಾಗಿ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಗ್ರಾಮದ ದಾಸ ಮನೆತನದ ಆರು ಮಂದಿ ಹನುಮಂತ ದೇವರ ಭಕ್ತರು ಮರವನ್ನು ಕಿತ್ತು ತರಲು ತೆರಳುವ ಮುನ್ನ ಬೆಳಗ್ಗೆ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೈಯಲ್ಲಿ ಕತ್ತಿ ಹಿಡಿದು 6 ಜನರು ಪ್ರತ್ಯೇಕವಾಗಿ ವಿವಿಧ ದಿಕ್ಕುಗಳಿಗೆ ಗ್ರಾಮದಿಂದ ತೆರಳಿದರು. ನಂತರ ಬೇರು ಸಹಿತ ಮರ ಕಿತ್ತು ಹೊತ್ತುಕೊಂಡು ಒಂದೇ ದಿಕ್ಕಿನಲ್ಲಿ ಸಾಲಾಗಿ ಬಂದರು. ಇವರನ್ನು ನೋಡಲು ಗ್ರಾಮದ ಕೆರೆ ಅಂಗಳದ ಸುತ್ತಮುತ್ತ ಸಾವಿರಾರು ಜನರು ಜಮಾಯಿಸಿದ್ದರು. ಸಂಜೆ ಹೊತ್ತಿಗೆ ಪ್ರತ್ಯಕ್ಷವಾಗುತ್ತಿದ್ದಂತೆ ಗ್ರಾಮಸ್ಥರು ಹರ್ಷೋದ್ಗಾರದಿಂದ ಸ್ವಾಗತಿಸಿದರು. ಮರಗಳಿಗೆ ನಮಸ್ಕರಿಸುತ್ತ ಅರಳಿಕಟ್ಟೆವರೆಗೆ ಸಾಗಿ ಅಲ್ಲಿ ಪೂಜೆ ಸಲ್ಲಿಸಿದರು.