

ಪಿರಿಯಾಪಟ್ಟಣ: ಆಷಾಢ ಮಾಸ ಕಡೆಯ ಶುಕ್ರವಾರದ ವಿಶೇಷ ಪೂಜೆಯ ಅಂಗವಾಗಿ ಪಟ್ಟಣದಲ್ಲಿರುವ ಶಕ್ತಿ ದೇವತೆ ಶ್ರೀ ಮಸಣಿಕಮ್ಮನ ದೇವಾಲಯದಲ್ಲಿ ಭಕ್ತರ ದಂಡೇ ಹರಿದಿತ್ತು. ಮುಂಜಾನೆಯಿಂದಲೇ ಪೂಜಾ ಸಾಮಗ್ರಿಗಳೊಂದಿಗೆ ಸಾಲು ಸಾಲಾಗಿ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಆಷಾಢ ಮಾಸದಲ್ಲಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಶ್ರೀ ಮಸಣಿಕಮ್ಮನ ದರ್ಶನಕ್ಕೆ ಬರುವ ಸಂಖ್ಯೆ ಹೆಚ್ಚಿದ್ದು ಕಡೆಯ ಶುಕ್ರವಾರ ಮತ್ತಷ್ಟು ಹೆಚ್ಚಬಹುದೆಂಬ ನಿರೀಕ್ಷೆಯೊಂದಿಗೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು, ಪುರುಷರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸಾವಧಾನವಾಗಿ ದೇವಿಯ ದರ್ಶನ ಪಡೆದು ಸಾಗುತ್ತಿದ್ದದ್ದು ಕಂಡುಬಂತು.
ಪಟ್ಟಣದ ವರ್ತಕರ ಸಂಘದ ವತಿಯಿಂದ ಇಂದು ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು ವಾಂಗಿಬಾತ್, ಕೇಸರಿ ಬಾತ್, ಜಿಲೇಬಿ ಜತೆಗೆ ಕುಡಿಯುವ ನೀರಿನ ಬಾಟಲಿ ನೀಡಲಾಯಿತು.