ತನಿ ಎರೆದು ಸಂಭ್ರಮಿಸಿದ ಭಕ್ತರು

21ckm3- nagara panchami
ನಾಗಪಂಚಮಿ ಅಂಗವಾಗಿ ಚಿಕ್ಕಮಗಳೂರಲ್ಲಿ ಭಕ್ತರು ನಾಗರ ಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದರು.
Published on

ಚಿಕ್ಕಮಗಳೂರು: ಜಿಲ್ಲಾದ್ಯಂತ ಸಾರ್ವಜನಿಕರು ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿಯನ್ನು ಆಚರಿಸಿದರು. ಅರಳಿಕಟ್ಟೆಗಳು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಶ್ರಾವಣ ಶುದ್ಧ ಪಂಚಮಿ ದಿನ ಬರುವ ನಾಗರ ಪಂಚಮಿಯಂದು ನಾಗನಕಲ್ಲು, ಹುತ್ತ, ಹುತ್ತದ ಮಣ್ಣು, ರಂಗೋಲಿ, ಅಕ್ಕಿ ಹಿಟ್ಟಿನಿಂದ ತಯಾರಿಸಿದ ನಾಗರ ಮೂರ್ತಿಗಳಿಗೆ ಹಾಲೆರೆದರು. ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ಸಿಹಿತಿಂಡಿಗಳನ್ನು ತಯಾರಿಸಿ ನೈವೇದ್ಯ ಮಾಡಿದರು.
ಹುತ್ತಕ್ಕೆ ಹಾಲೆರೆಯುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ನಂಬಿಕೆ. ಸಾಮಾನ್ಯವಾಗಿ ಜ್ಯೇಷ್ಠ-ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಇದೇ ವೇಳೆ ಬೆಳೆದ ಪೈರುಗಳನ್ನು ಇಲಿಗಳು ತಿಂದು, ಹಾನಿ ಮಾಡುತ್ತಿವೆ. ಹಾವುಗಳು ಈ ಇಲಿಗಳನ್ನು ತಿನ್ನುವ ಮೂಲಕ ರೈತನಿಗೆ ನೆರವಾಗುತ್ತವೆ ಎನ್ನುವ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ನಗರದ ಶ್ರೀಬೋಳ ರಾಮೇಶ್ವರ ದೇವಾಲಯ ಆವರಣದಲ್ಲಿರುವ ನಾಗಕಲ್ಲು, ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಅರಳಿಕಟ್ಟೆಯ ನಾಗನಕಲ್ಲುಗಳಿಗೆ ಗಳಿಗೆ ಮಹಿಳೆಯರು, ಮಕ್ಕಳು ತನಿ ಎರೆದು ಪೂಜೆ ಸಲ್ಲಿಸಿದರು. ರತ್ನಗಿರಿ ರಸ್ತೆಯ ಜಿಎಸ್‌ಬಿ ರಾಮ ಮಂದಿರದಲ್ಲಿ ನಾಗರ ಪಂಚಮಿ ಪ್ರಯುಕ್ತ ದೇವರಿಗೆ ಹಾಲು ಹಾಗೂ ಎಳನೀರು ಅಭಿಷೇಕ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net