ರೈತರ ಸಬಲೀಕರಣಕ್ಕೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

kvk vikasitha
ಕೋಲಾರ ಜಿಲ್ಲಾ ಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ -2025 ಹಾಗೂ ಮುಂಗಾರು ಪೂರ್ವ ಕೃಷಿ ಅಭಿಯಾನಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಏಕ ರೂಪ್​ ಕೌರ್​ ಚಾಲನೆ ನೀಡಿದರು. ಡಾ.ಎಂ.ಆರ್​.ರವಿ, ಪ್ರವಿಣ್​ ಪಿ.ಬಾಗೇವಾಡಿ, ಸುಮಾ, ಕುಮಾರಸ್ವಾಮಿ, ಡಾ.ಶಿವಾನಂದ ಹೊಂಗಲ ಇದ್ದರು.
Published on

ಕೋಲಾರ: ಭಾರತ ಕೃಷಿ ಪ್ರಧಾನ ರಾಷ್ಟ್ರ, ವಿಕಸಿತ ಅಭಿಯಾನದಲ್ಲಿ ರೈತರಿಗೆ ನೀಡುವ ತರಬೇತಿಯಿಂದ ಸಬಲೀಕರಣ ಕಾಣಬಹುದು ಎಂದು ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಏಕರೂಪ ಕೌರ್​ ಹೇಳಿದರು.

ಐಸಿಎಆರ್​- ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ. ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನಾ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ&-2025 ಹಾಗೂ ಮುಂಗಾರು ಪೂರ್ವ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯುವ ಕುರಿತು ರೈತರಿಗೆ ಜಾಗೃತಿ ಮೂಡಿಸಿದರೆ ಉತ್ತಮ ಆದಾಯ ಗಳಿಸುತ್ತಾರೆ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು ವಿವಿಧ ಇಲಾಖೆಗಳ ಮೂಲಕ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿಗೆ ತರುತ್ತವೆ. ಅವನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸಿದರೆ ಯೋಜನೆಯ ಉದ್ದೇಶ ಈಡೇರುತ್ತದೆ. ಕೇಂದ್ರದ ಸರ್ಕಾರ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಅಂಗವಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಜೂ.12 ರವರೆಗೆ ನಡೆಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಭಿಯಾನದಡಿ 1,500 ರಿಂದ 2,000 ತಂಡಗಳ ಮೂಲಕ ದೇಶದ 700 ಜಿಲ್ಲೆಗಳಲ್ಲಿನ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ, ಇದಕ್ಕೆ ಜಿಲ್ಲೆಯೂ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದರು.

ಇಲಾಖೆಯ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ಮಾತನಾಡಿ, ಮುಂಗಾರು ಬೆಳೆಗಳಿಗೆ ಸಂಬಂಧಿಸಿದ ಸುಧಾರಿತ ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು. ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಒದಗಿಸುವುದು. ಬೆಳೆ ಮತ್ತು ಕೃಷಿ ಪರಿಕರಗಳ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವುದು, ಮಣ್ಣಿನ ಆರೋಗ್ಯ ಕಾರ್ಡ್​ಗಳ ಬಳಕೆ ಉತ್ತೇಜಿಸಿವುದು ಮತ್ತು ಮಣ್ಣು ಪರೀಕ್ಷೆ ಆಧಾರಿತ ಪರಿಕರ ಮತ್ತು ಬೆಳೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ರಸಗೊಬ್ಬರಗಳ ವಿವೇಚನಾಯುಕ್ತ ಬಳಕೆಯನ್ನು ಉತ್ತೇಜಿಸಿ ಉತ್ತಮ ಕೃಷಿ ಪದ್ಧತಿಗಳ ಮೇಲೆ ಒತ್ತು ನೀಡುವುದು. ಭವಿಷ್ಯದ ಸಂಶೋಧನೆ ರೂಪಿಸಲು ರೈತರಿಂದ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್​ ಪಿ.ಬಾಗೇವಾಡಿ, ಮಹಾವಿದ್ಯಾಲಯದ ಡೀನ್​ ಡಾ.ರಾಘವೇಂದ್ರ ಮೆಸ್ತಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಸುಮಾ, ಅಭಿಯಾನದ ನೋಡಲ್​ ಅಧಿಕಾರಿ ಡಾ.ಡಿ.ವಿ.ಕೋಲೆಕರ್​, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕುಮಾರಸ್ವಾಮಿ ಇದ್ದರು.

* 100 ಗ್ರಾಪಂ ವ್ಯಾಪ್ತಿಯಲ್ಲಿ ಅಭಿಯಾನ

ಜಿಲ್ಲೆಯ 100 ಗ್ರಾಪಂ ವ್ಯಾಪ್ತಿಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೃಷಿ ವಿಶ್ವವಿದ್ಯಾಲಯ, ವಿಜ್ಞಾನ ಕೇಂದ್ರಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಆತ್ಮಯೋಜನೆ ಸಹಯೋಗದೊಂದಿಗೆ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ಹೊಸ ತಾಂತ್ರಿಕತೆಗಳು ಲಭ್ಯವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಏರ್ಪಡಿಸಲಾಗಿದೆ ಎಂದು ಇಲಾಖೆಯ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net