ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ?

Mahayuti
Published on

ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒತ್ತಾಯಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿದೆ ಎನ್ನಲಾಗಿದ್ದು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಆಗುವ ಸಾಧ್ಯತೆ ಹೆಚ್ಚು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಬಿಜೆಪಿಯಿಂದ ಸಿಎಂ ಅಭ್ಯರ್ಥಿ ಇದ್ದರೆ, ಶಿವಸೇನೆ ಮತ್ತು ಎನ್​ಸಿಪಿಗೆ ತಲಾ ಒಂದು ಡಿಸಿಎಂ ಹುದ್ದೆ ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ಇದೆ.

ಈ ನಡುವೆ, ಶಿವಸೇನೆ ನಾಯಕ, ಸಿಎಂ ಏಕನಾಥ ಶಿಂಧೆ ಕೂಡ ಹೈಕಮಾಂಡ್ ನಿಲುವಿಗೆ ಬದ್ಧ ಎಂಬ ಹೇಳಿಕೆ ನೀಡಿದ್ದಾರೆ. ಕುಟುಂಬದ ಹಿರಿಯ ಸದಸ್ಯನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವ ತೀರ್ವನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಶಿಂಧೆ ತಿಳಿಸಿದ್ದಾರೆ. ಈ ಮೂಲಕ ಶಿಂಧೆ ಶಿವಸೇನೆ ನಾಯಕರು, ಶಾಸಕರು ತಮ್ಮ ಪಟ್ಟನ್ನು ಸಡಿಲಿಸಿದ್ದಾರೆ. ಶಿಂಧೆ ಜತೆಗೆ ಶಿವಸೇನೆಯ 40 ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾಗ ಫಡ್ನವಿಸ್ ಪೂರ್ಣ ಸಹಕಾರ ನೀಡಿ, ಶಿಂಧೆೆ ಜತೆಗೆ ಕಾರ್ಯನಿರ್ವಹಿಸಿದ್ದರು. ಈಗ ಫಡ್ನವಿಸ್ ಸರದಿ, ಶಿಂಧೆಯವರ ಶಿವಸೇನೆ ಪೂರ್ಣ ಸಹಕಾರ ನೀಡಬೇಕು ಎಂದು ಬಹುತೇಕ ಬಿಜೆಪಿ ಶಾಸಕರು ಪ್ರತಿಪಾದಿಸಿದ್ದಾರೆ.

ನಾನು ಯಾವುದೇ ನಿರ್ಧಾರಕ್ಕೂ ಅಡ್ಡಿ ಆಗುವುದಿಲ್ಲ ಎಂದು ಪ್ರಧಾನಿ ಮೋದಿಗೆ ಹೇಳಿದ್ದೇನೆ. ಅವರು ಏನು ನಿರ್ಧರಿಸುತ್ತಾರೋ ಅದರೊಂದಿಗೆ ಮುಂದುವರಿಯಲಿದ್ದೇವೆ. ನಮ್ಮಲ್ಲಿ ಯಾರೂ ಅಸಮಾಧಾನ ಹೊಂದಿಲ್ಲ. ಯಾವುದೇ ಸ್ಥಾನಕ್ಕಾಗಿ ದುರಾಸೆ ಪಟ್ಟಿಲ್ಲ

| ಏಕನಾಥ ಶಿಂಧೆ ಮಹಾರಾಷ್ಟ್ರ ಸಿಎಂ

ಫಡ್ನವಿಸ್ ರಾಜ್ಯದ ಮುಖ್ಯಮಂತ್ರಿ ಯಾಗಬೇಕು ಎನ್ನುವುದು ನಮ್ಮ ಆಶಯ. ಆದರೆ, ಬಿಜೆಪಿ ಹೈಕಮಾಂಡ್ ಏಕನಾಥ್ ಶಿಂಧ ಅವರಿಗೇ ಸಿಎಂ ಸ್ಥಾನ ನೀಡಿದರೆ, ನಾವು ಅದನ್ನು ಬೆಂಬಲಿಸಲಿದ್ದೇವೆ.

| ರಾಮದಾಸ್ ಅಠಾವಳೆ ಕೇಂದ್ರ ಸಚಿವ, ಆರ್​ಪಿಐ ಪಕ್ಷದ ನಾಯಕ

ನಾವು ಮೂವರೂ (ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್) ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಸಿಎಂ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳ ನೇಮಕದೊಂದಿಗೆ ಸರ್ಕಾರ ರಚನೆ ಕುರಿತು ಚರ್ಚೆ ಆಗಲಿದೆ.

| ಅಜಿತ್ ಪವಾರ್ ಎನ್​ಸಿಪಿ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net