ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ

kalenahalli (2)
ಕಾಳೇನಹಳ್ಳಿ ಶಿವಯೋಗಾಶ್ರಮಕ್ಕೆ ಭೇಟಿ ನೀಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಗೆ ಡಾ. ಸಿದ್ದಲಿಂಗ ಮಹಾಸ್ವಾಮೀಜಿ ಆಶೀರ್ವದಿಸಿದರು. ಎನ್.ವಿ.ಈರೇಶ್, ಕುಮಾರಸ್ವಾಮಿ, ವೀರನ ಗೌಡ ಇತರರಿದ್ದರು.
Published on

ಶಿಕಾರಿಪುರ: ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಆಶಯಗಳು ಅನುಷ್ಠಾನವಾಗಲು ಗುರುಗಳ ಆಶೀರ್ವಾದ, ಭಗವಂತನ ಅನುಗ್ರಹ ಮತ್ತು ಜಿಲ್ಲೆಯ ಜನರ ಶ್ರೀರಕ್ಷೆ ಕಾರಣ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮಕ್ಕೆ ಸೋಮವಾರ ಭೇಟಿ ನೀಡಿ ಲಿಂಗೈಕ್ಯ ಗುರುದ್ವಯರ ಕರ್ತೃ ಗದ್ದುಗೆ ದರ್ಶನ ಮಾಡಿದ ನಂತರ ಈಗಿನ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದರು.
ನನಗೆ ರಾಜಕೀಯವಾಗಿ ಯಶಸ್ಸು, ಅಧಿಕಾರ ತಂದುಕೊಟ್ಟ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದು ನನಗೆ ತೃಪ್ತಿ ತಂದಿದೆ. ಗುರುಗಳ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸೇವೆ ಮಾಡುವ ಭಾಗ್ಯ ದೊರೆಯುವ ವಿಶ್ವಾಸವಿದೆ. ನಾನು ಶಾಸಕ, ಸಂಸದನಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ನನ್ನ ಕಾರ್ಯತತ್ಪರತೆಯನ್ನು ಸಾರುತ್ತಿವೆ ಎಂದರು.
ಕೇಂದ್ರದಿಂದ ಅತಿಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ನನ್ನ ತಂದೆ ಅಧಿಕಾರದಲ್ಲಿದ್ದಾಗ ಯಾವುದೇ ಜಾತಿ, ಧರ್ಮ ಭೇದ ತೋರದೆ ಎಲ್ಲ ಸಮಾಜಗಳ ಮಠ, ಮಂದಿರಗಳಿಗೆ ಅನುದಾನ ನೀಡಿದ್ದರು. ರಾಜ್ಯದಲ್ಲಿ ನೂರಾರು ದೇವಾಲಯಗಳು ಜೀರ್ಣೋದ್ಧಾರ ಕಂಡಿವೆ. ಅದೇ ಪುಣ್ಯ ನಮಗೆ ರಕ್ಷೆಯಾಗಿ ಕಾಯುತ್ತಿದೆ. ಜಿಲ್ಲೆಯ ಮತದಾರರು ಅತ್ಯಂತ ಪ್ರಜ್ಞಾವಂತರು. ಅವರಿಗೆ ದೇಶದ ಭದ್ರತೆ, ಸಮಗ್ರತೆಯ ಅರಿವಿದೆ ಎಂದು ಹೇಳಿದರು.
ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ವಿ.ಈರೇಶ್, ಕುಮಾರಸ್ವಾಮಿ ಹಿರೇಮಠ, ವೀರನಗೌಡ, ರಾಘವೇಂದ್ರ, ವಸಂತಗೌಡ, ರುದ್ರಪ್ಪ, ನಾರಾಯಣಪ್ಪ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net