ಜಲಮೂಲ ಸಂರಕ್ಷಿಸುವ ಉದ್ದೇಶದಿಂದ ಅಭಿವೃದ್ಧಿ

ಜಲಮೂಲ ಸಂರಕ್ಷಿಸುವ ಉದ್ದೇಶದಿಂದ ಅಭಿವೃದ್ಧಿ
Published on

ಹನಗೋಡು: ಹೋಬಳಿಯ ಯಮಗುಂಬದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ 6.37 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿರುವ ಕೆರೆಯನ್ನು ಗ್ರಾಮಸ್ಥರಿಗೆ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಹಸ್ತಾಂತರಿಸಿದರು.

ತುಂಬಿದ ಕೆರೆಗೆ ಬಾಗಿನ ಅರ್ಪಿಸಿ, ನಾಮಫಲಕ ಅನಾವರಣಗೊಳಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಯೋಜನೆಯಡಿ 3.62ಲಕ್ಷ ರೂ., ಗ್ರಾಮಸ್ಥರ ಪಾಲು 2.75 ಲಕ್ಷ ರೂ. ಸೇರಿದಂತೆ 6.37ಲಕ್ಷ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧ್ದಿಗೊಳಿಸಲಾಗಿದೆ. ರಾಜ್ಯಾದ್ಯಂತ ಈವರೆಗೆ 770 ಕೆರೆಗಳನ್ನು 55 ಕೋಟಿ ರೂ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗಿದೆ ಎಂದರು.

ಜಲ ಮೂಲ ಸಂರಕ್ಷಿಸುವ ಉದ್ದೇಶದಿಂದ 2016ರಲ್ಲಿ ಯೋಜನೆ ರೂಪಿಸಿದ್ದು, ಅಂದಿನಿಂದ ನಿರಂತರವಾಗಿ ಅಭಿವೃದ್ಧಿಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಜೀವ ಜಲ ಉಳಿಸುವುದರ ಜತೆಗೆ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಲಿದೆ. ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು, ಅನೆೇಕ ಕಡೆ ಅತಿಕ್ರಮಣಗೊಂಡಿದೆ. ಕೆಲವೆಡೆ ಕಲುಷಿತಗೊಂಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿದ್ಯಾನಿಧಿ ಯೋಜನೆಯಡಿ 97 ಸಾವಿರ ಮಕ್ಕಳಿಗೆ ವಿದ್ಯಾರ್ಥಿ ವೇತನ, 18 ಸಾವಿರ ಅನಾಥರಿಗೆ ಮಾಶಾಸನ, 500ಕ್ಕೂ ಹೆಚ್ಚು ನಿರ್ಗತಿಕರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಡೇರಿ ಕಟ್ಟಡ, ದೇವಾಲಯ, ಸಮುದಾಯ ಭವನ ನಿರ್ಮಾಣಕ್ಕೆ ನೆರವು ಸೇರಿದಂತೆ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೊತ್ತೇಗಾಲ ಗ್ರಾ.ಪಂ. ಕಾರ್ಯದರ್ಶಿ ಆನಂದ್, ನಿವೃತ್ತ ಶಿಕ್ಷಕ ಎಸ್.ಎಲ್.ಮಹದೇವಪ್ಪ, ಕೆರೆ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ್, ಶಿವಾನಂದ ಆಚಾರ್ಯ, ಇಂಜಿನಿಯರ್ ಪುಷ್ಪರಾಜ್, ತಾಲೂಕು ಯೋಜನಾಧಿಕಾರಿ ನಾರಾಯಣಶೆಟ್ಟಿ, ಗ್ರಾ.ಪಂ. ಸದಸ್ಯ ಸುಂದರಾಚಾರ್ಯ, ಮಹದೇವಶೆಟ್ಟಿ, ಯಜಮಾನ್ ಚಂದ್ರಶೆಟ್ಟಿ, ಕೃಷಿ ಮೇಲ್ವಿಚಾರಕ ಅಣ್ಣಪ್ಪ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರೂಪಾ, ಸೇವಾ ಪ್ರತಿನಿಧಿ ಮಂಜುಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net