

ಸೊರಬ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಹೊಂದಲು ಮೂಲ ಸೌಲಭ್ಯ ಮುಖ್ಯ. ಸರ್ಕಾರದ ಜತೆಗೆ ಸಮಾಜದಲ್ಲಿ ಸೇವಾ ಭಾವನೆ ಹೊಂದಿದವರು ವಿವಿಧ ಕೊಡುಗೆಗಳನ್ನು ನೀಡಿದಾಗ ಶಾಲೆ ಪ್ರಗತಿ ಹೊಂದಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಬಸವಣ್ಯಪ್ಪ ಮೂಲೇರ್ ಹೇಳಿದರು.
ತಾಲೂಕಿನ ಕುಮ್ಮೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಸ್ವಾಗತ ಕೋರುವ ಮತ್ತು ಎರಡು ವರ್ಷ ಶಿಕ್ಷಣದಲ್ಲಿ ಹರುಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ಸೇವಾ ಟ್ರಸ್ಟ್, ಸಂಘ ಸಂಸ್ಥೆಗಳು, ದಾನಿಗಳು ಇದ್ದಾರೆ. ಸೇವಾ ಭಾವನೆ, ಶಾಲೆ ಅಭಿವೃದ್ಧಿ ದೃಷ್ಟಿಯಿಂದ ಕೊಡುಗೆ ನೀಡಿದಾಗ ಶಾಲೆ ಅಭಿವದ್ಧಿ ಹೊಂದುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಪಾಲಕರು ಮಕ್ಕಳನ್ನು ನಮ್ಮೂರಿನ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ತಾಪಂ ಮಾಜಿ ಸದಸ್ಯ ಬಂಗಾರಪ್ಪ ಗೌಡ ಕುಡಿಗೇರಿ ಮಾತನಾಡಿ, ನನ್ನ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಆದ್ಯತೆ ಮೇಲೆ ಸದಸ್ಯರ ಅನುದಾನ ನೀಡಿದ್ದೇನೆ. 5 ಲಕ್ಷ ರೂ. ಅನುದಾನ ನೀಡಿ ಕಟ್ಟಡದ ಕಾಮಗಾರಿ ಮಾಡಲಾಗಿತ್ತು. ಉಳಿದ ಹಣದಲ್ಲಿ ಮುಂಭಾಗ ಶೀಟ್‌ಗಳನ್ನು ಹಾಕಲಾಗಿತ್ತು. ಆದರೆ ಹಣದ ಕೊರತೆ ಎದುರಾಗಿದೆ ಎಂದರು.
ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸೋಮಶೇಖರ ಮಾತನಾಡಿ, ಶಾಲೆಯ ಪ್ರಗತಿಗೆ ಶಿಕ್ಷಕರ ಜತೆಗೆ ಗ್ರಾಮಸ್ಥರು ಸಹಕರಿಸಿದಾಗ ಶಾಲೆ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ಊರಿನಲ್ಲಿ 1972 ಶಾಲೆ ಹನುಮಂತ ದೇವರ ಗುಡಿಯಲ್ಲಿ ಪ್ರಾರಂಭವಾಗಿ ಸುತ್ತಮತ್ತಲಿನ ಗ್ರಾಮದಿಂದ ಮಕ್ಕಳು ಬರುತ್ತಿದ್ದರು. ಈಗ ಹಲವರು ಉತ್ತಮ ಸ್ಥಾನದಲ್ಲಿದ್ದಾರೆ. ಅವರೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಲೆಗೆ ದೇಣಿಗೆ ನೀಡಿದ ಬಸವಣ್ಯಪ್ಪ ದಂಪತಿ, ಬಂಗಾರಪ್ಪ ಗೌಡ ಕುಡಿಕೇರಿ ಅವರನ್ನು ಸನ್ಮಾನಿಸಲಾಯತು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಕೆ.ಸುಧಾಕರ, ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾಪಂ ಸದಸ್ಯ ದಯಾನಂದ, ಹಿರಿಯ ಪತ್ರಕರ್ತ ಜಿ.ಎಂ.ತೋಟಪ್ಪ, ಬೂರ್ಯಪ್ಪ, ನೋಡಲ್ ಅಧಿಕಾರಿ ಸುಮಿತ್ರಾ, ಶಿಕ್ಷಕರಾದ ಪಾಲಾನಾಯ್ಕ, ಶ್ರೀನಿವಾಸ್, ಶೀಲಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಕುಮಾರ್, ಹನುಮಂತಪ್ಪ, ಗಣಪತಿ, ಮಂಚಪ್ಪ, ಬಸವರಾಜಪ್ಪ, ಪಲ್ಲವಿ ಇತರರಿದ್ದರು.