ಸಮೃದ್ಧ ಭಾರತಕ್ಕೆ ಅಭಿವೃದ್ಧಿ ಮಂತ್ರ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ; ಮೂಲಸೌಕರ್ಯಕ್ಕೆ 100 ಲಕ್ಷ ಕೋಟಿ ರೂಪಾಯಿ

State Modi
ದೆಹಲಿಯ ಕೆಂಪುಕೋಟೆಯಲ್ಲಿ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.
Published on

75 ವಂದೇ ಭಾರತ್ ರೈಲು

ಉಡಾನ್ ವಿಮಾನಯಾನ ಯೋಜನೆ ಮಾದರಿಯಲ್ಲೇ ದೇಶದ ಮೂಲೆ ಮೂಲೆಗೆ ತ್ವರಿತ ರೈಲು ಸಂಪರ್ಕ ಕಲ್ಪಿಸಲು 75 ವಂದೇ ಭಾರತ್ ರೈಲುಗಳನ್ನು ಘೋಷಿಸಿದ ಪ್ರಧಾನಿ ಪ್ರಧಾನಿ ಮೋದಿ, 75 ವಾರಗಳಲ್ಲಿ ಇವು ಸಂಚಾರ ಆರಂಭಿಸಲಿವೆ ಎಂದರು. ‘ಆಕ್ಟ್ ಈಸ್ಟ್’ ನೀತಿಯಡಿ ಈಶಾನ್ಯ ರಾಜ್ಯಗಳ ರಾಜಧಾನಿಗಳಿಗೂ ಶೀಘ್ರದಲ್ಲೇ ರೈಲು ಸಂಪರ್ಕ ಸಾಧ್ಯವಾಗಲಿದೆ. ಬಾಂಗ್ಲಾದೇಶ, ಮ್ಯಾನ್ಮಾರ್​ಗಳಿಗೂ ರೈಲು ಮಾರ್ಗ ವಿಸ್ತರಿಸುವ ಮೂಲಕ ಆಗ್ನೇಯ ಏಷ್ಯಾದ ಜತೆ ರೈಲು ಸಂಪರ್ಕ ಸಾಧಿಸಲಾಗುವುದು ಎಂದರು.

ಪಾಕ್, ಚೀನಾಗಳಿಗೆ ಪರೋಕ್ಷ ಎಚ್ಚರಿಕೆ

ಉಗ್ರವಾದ ಮತ್ತು ವಿಸ್ತರಣಾವಾದಕ್ಕೆ ಕೆಚ್ಚೆದೆಯ ಉತ್ತರ ನೀಡುವುದು ಭಾರತಕ್ಕೆ ಗೊತ್ತಿದೆ. ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ನೀಡಲಾಗಿದೆ. ದೇಶಕ್ಕೆ ಸವಾಲು ಎಸೆದವರಿಗೆ ಸರ್ಜಿಕಲ್ ಸ್ಟೈ ›ಕ್ ಮತ್ತು ವೈಮಾನಿಕ ಕಾರ್ಯಾಚರಣೆ ಮೂಲಕ ತಕ್ಕ ಉತ್ತರವನ್ನು ನೀಡಲಾಗಿದೆ ಎಂದು ಪಾಕಿಸ್ತಾನ ಮತ್ತು ಚೀನಾಗಳಿಗೆ ಮೋದಿ ಪರೋಕ್ಷ ಎಚ್ಚರಿಕೆ ನೀಡಿದರು. ಎರಡನೇ ವಿಶ್ವಯುದ್ಧವು ಅಂತಾರಾಷ್ಟ್ರೀಯ ಸಂಬಂಧದಲ್ಲಿ ಬದಲಾವಣೆ ಉಂಟುಮಾಡಿತು. ಇದೇ ರೀತಿ ಕರೊನಾ ಸಾಂಕ್ರಾಮಿಕವು ಜಾಗತಿಕ ಸಮುದಾಯದಲ್ಲಿ ಹೊಸ ಪರಿವರ್ತನೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದರು.

ಬಾಲಕಿಯರಿಗೆ ಸೈನಿಕ ಶಾಲೆ: ಹೆಣ್ಮಕ್ಕಳಿಗೂ ಸೈನಿಕ ಶಾಲೆಗಳ ಬಾಗಿಲು ತೆರೆಯಲಿದೆ. ಇದರಿಂದ ಹೆಣ್ಮಕ್ಕಳು ಬಹುದಿನ ಕನಸು ನನಸಾಗಲಿದೆ ಎಂದ ಮೋದಿ, ಪೈಲಟ್ ಯೋಜನೆಯಡಿ ಮಿಜೋರಾಂನಲ್ಲಿ ಎರಡು ವರ್ಷದಿಂದ ಇಂಥ ಶಾಲೆಯೊಂದು ನಡೆಯುತ್ತಿದೆ ಎಂದರು. ಶಿಕ್ಷಣ ಅಥವಾ ಕ್ರೀಡೆಯಲ್ಲಿ ಹೆಣ್ಮಕ್ಕಳ ಸಾಧನೆ ಕಡಿಮೆ ಏನೂ ಇಲ್ಲ. ಬೋರ್ಡ್ ಪರೀಕ್ಷೆಗಳಲ್ಲಿ ಬಾಲಕಿಯರದ್ದೇ ಮೇಲುಗೈ. ಈ ಸಾರಿ ಒಲಿಂಪಿಕ್ಸ್​ನಲ್ಲೂ ಮಹಿಳೆಯರೆ ಹೆಚ್ಚು ಪದಕ ಗೆದ್ದಿದ್ದಾರೆ ಎಂದರು.

1 ಗಂಟೆ 27 ನಿಮಿಷ ಮೋದಿ ಭಾಷಣ

  • 1 ಗಂಟೆ 27 ನಿಮಿಷ ಪ್ರಧಾನಿ ಮೋದಿ ಮಾತನಾಡಿದರು. ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಿ ಭಾಷಣ ಆರಂಭಿಸಿದ ಅವರು, 9ಗಂಟೆ ಸುಮಾರಿಗೆ ಮುಕ್ತಾಯ ಮಾಡಿದರು. 2017ರ 56 ನಿಮಿಷದ ಭಾಷಣ ಅತ್ಯಂತ ಕಡಿಮೆ ಅವಧಿಯದ್ದಾಗಿದ್ದರೆ, 2019ರಲ್ಲಿ 92 ನಿಮಿಷ ಮಾತನಾಡಿದ್ದು ಅತಿ ದೀರ್ಘಾವಧಿಯ ಭಾಷಣವಾಗಿದೆ.
  • ಸ್ವಾತಂತ್ರ್ಯೋತ್ಸವದ ಭಾಷಣವನ್ನು ಪ್ರಧಾನಿ ಮೋದಿ ‘ಇದೇ ಕ್ಷಣ’ ಎಂಬುದನ್ನು ಧ್ವನಿಸುವ ಕವನದ ಮೂಲಕ ಮುಕ್ತಾಯಗೊಳಿಸಿದರು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಆಶಯದ ಈ ಕವನದ ಮೂಲಕ ಮಾಹನ್ ಪ್ರಶಸ್ತಿಗಳನ್ನು ಪಡೆಯಲು ಜನರನ್ನು ಒಗ್ಗೂಡಿಸಿ ಎಂಬ ಧ್ಯೇಯವನ್ನು ಇದು ಒಳಗೊಂಡಿದೆ.
  • ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಣ್ಣ ಬಣ್ಣದ ಮುಂಡಾಸಿನ ಮೂಲಕ ಗಮನಸೆಳೆಯುತ್ತಾರೆ. ಈ ಸಾರಿ ಕೊಲ್ಲಾಪುರಿ ಶೈಲಿಯ ಪೇಟವನ್ನು ಧರಿಸಿದ್ದರು. ತಲೆಯಿಂದ ಇಳಿಬಿಟ್ಟ ಬಿಳಿ ಮತ್ತು ಕೇಸರಿ ಮಿಶ್ರಿತ ವರ್ಣದ ಪೇಟದ ಬಾಲವು ಅವರ ಪಾದದ ತನಕ ಇದಿದ್ದು ವಿಶೇಷ.

ಪ್ರಧಾನಿ ಭಾಷಣದ ಮುಖ್ಯಾಂಶ

  • ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ಹೋರಾಡಿದ ಎಲ್ಲ ಹೋರಾಟಗಾರರಿಗೂ ನಮನ.
  • ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದ ಪದಕ ಗೆದ್ದವರೂ ಸೇರಿ 32 ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟಿ ಅಭಿನಂದನೆ.
  • ಕೋವಿಡ್ ವಿರುದ್ಧ ಹೋರಾಟ ಸ್ಮರಣೆ. 54 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಇಷ್ಟೆಲ್ಲ ಪ್ರಯತ್ನದ ಮಧ್ಯೆಯೂ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಅವರನ್ನು ರಕ್ಷಿಸಲಾಗದಿದ್ದಕ್ಕೆ ವ್ಯಥೆ ಇದೆ.
  • ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೂ ಮೀಸಲಾತಿ ಕಲ್ಪಿಸಲಾಗಿದೆ. ಈ ಮೂಲಕ ಎಲ್ಲ ಸಮುದಾಯದಲ್ಲಿ ಶೋಷಿತರ ಬೆಂಬಲಕ್ಕೆ ಸರ್ಕಾರ ನಿಂತಿದೆ. ಅಭಿವೃದ್ಧಿಯ ಓಟದಲ್ಲಿ ಯಾರೊಬ್ಬರೂ ಹಿಂದುಳಿಯಬಾರದು ಎಂಬುದು ಸರ್ಕಾರದ ಆಶಯ.
  • ಕೃಷಿ ಭೂಮಿ ಕುಗ್ಗುತ್ತಿರುವುದು ಕಳವಳಕಾರಿ. ಬೇಸಾಯಗಾರರು ಕೃಷಿಯಿಂದ ವಿಮುಖರಾಗದಂತೆ ತಡೆಯಲು ಕೃಷಿಕ ವರ್ಗದಲ್ಲಿ ಶೇ. 80 ಇರುವ ಸಣ್ಣ ರೈತರಿಗೆ ಸರ್ಕಾರಿ ಯೋಜನೆಗಳ ಲಾಭ ಸಿಗುವಂತಾಗಬೇಕು.
  • ಹೊಸ ಶಿಕ್ಷಣ ನೀತಿಯಿಂದ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಮಾತನಾಡುವ ಬಡವರಿಗೆ ಬಲ ಬರಲಿದೆ. ಬಡತನದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಸ ನೀತಿ ಒದಗಿಸ ಲಿದೆ. 21ನೇ ಶತಮಾನದ ಅಗತ್ಯತೆಯನ್ನು ಇದು ಪೂರೈಸುತ್ತದೆ.

ವಿವಿಧೆಡೆ ರಾರಾಜಿಸಿದ ತಿರಂಗಾ

  • 2016ರಲ್ಲಿ ಹತನಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್​ನಲ್ಲಿ ತಿರಂಗಾ ಹಾರಿಸಿದರು. ಮುಜಾಫರ್ ತ್ರಾಲ್​ನಲ್ಲಿ ಸರ್ಕಾರಿ ಶಾಲೆಯ ಮುಖ್ಯೋ ಪಾಧ್ಯಾಯರಾಗಿದ್ದಾರೆ.
  • ಉತ್ಪಾದನಾ ವಲಯದಲ್ಲಿ ವಿಕೇಂದ್ರೀಕರಣದಿಂದ ದೇಶದ ಆರ್ಥಿಕತೆಗೆ ನೆರವು ದೊರೆಯುತ್ತದೆ. ಇದರಿಂದ ಉದ್ಯೋಗದ ಅವಕಾಶಗಳು ಹೆಚ್ಚುತ್ತವೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ನಿಯಂತ್ರಿತ ಗ್ರಾಹಕತ್ವ ಅಗತ್ಯ ಎಂದು ಆರ್​ಎಸ್​ಎಸ್​ನ ಮುಖ್ಯಸ್ಥ ಮೋಹನ್ ಭಾಗವತ್ ಮುಂಬೈನ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿ ಹೇಳಿದರು.
  • ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವಜಾರೋಹಣ ಮಾಡಿದರು. ನಾಯಕರಾದ ರಾಹುಲ್ ಗಾಂಧಿ, ಎ.ಕೆ.ಆಂಟನಿ, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಭೂಪೀಂದರ್ ಸಿಂಗ್ ಹೂಡಾ, ಆನಂದ್ ಶರ್ಮಾ ಇತರರು ಹಾಜರಿದ್ದರು.
ಋಷಿಕೇಶದ ಚಂದ್ರೇಶ್ವರ ಮಹಾದೇವ ದೇಗುಲದಲ್ಲಿ ತ್ರಿವರ್ಣ ಪುಷ್ಪಗಳಿಂದ ಅಲಂಕಾರ.
ಋಷಿಕೇಶದ ಚಂದ್ರೇಶ್ವರ ಮಹಾದೇವ ದೇಗುಲದಲ್ಲಿ ತ್ರಿವರ್ಣ ಪುಷ್ಪಗಳಿಂದ ಅಲಂಕಾರ.

ಮೂಲಸೌಕರ್ಯಕ್ಕೆ ಗತಿ ಶಕ್ತಿ

ಉದ್ಯೋಗಾವಕಾಶ ಹೆಚ್ಚಿಸುವ, ತಯಾರಿಕಾ ವಲಯದಲ್ಲಿ ಉತ್ಪಾದನೆ ಚುರುಕುಗೊಳಿಸುವ ‘ಗತಿ ಶಕ್ತಿ’ ಹೆಸರಿನ ನೂರು ಲಕ್ಷ ಕೋಟಿ ರೂ. ಮೊತ್ತದ ಸಮಗ್ರ ಮೂಲಸೌಕರ್ಯದ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದರು. ಆಧುನಿಕ ಮೂಲಸೌಕರ್ಯ ಹೆಚ್ಚಿಸುವ ಇದರಿಂದ ನಾಲ್ಕು ಲಕ್ಷ ಯುವಜನರಿಗೆ ಉದ್ಯೋಗ ದೊರೆಯಲಿದೆ. ದೇಶದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ. ಇದರಿಂದ ಆರ್ಥಿಕತೆ ಬೆಳವಣಿಗೆ ಕಾಣಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ‘ಗತಿ ಶಕ್ತಿ’ಯಿಂದ ದೇಶದ ಸಾರಿಗೆ ವಲಯದಲ್ಲಿ ಸಾಮರಸ್ಯ ಮೂಡುತ್ತದೆ. ಪ್ರಯಾಣದ ಅವಧಿ ಕಡಿಮೆಯಾಗಿ, ಕೈಗಾರಿಕೆಗಳಲ್ಲಿ ಉತ್ಪಾದನೆ ಹೆಚ್ಚುತ್ತದೆ. ಇದರಿಂದ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಸಾಧ್ಯವಾಗುತ್ತದೆ. ಭಾರತ ಜಾಗತಿಕ ಮಾರುಕಟ್ಟೆಯ ಹಬ್ ಆಗಬೇಕು ಎಂದು ಆಶಿಸಿದರು.

ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ವಿಹಂಗಮ ನೋಟ.

ಶ್ರೇಷ್ಠ ರಾಜ್ಯದ ಸಂಕಲ್ಪ; ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾನ

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೇರವೇರಿಸಿದ ಸಿಎಂ ಬೊಮ್ಮಾಯಿ.

ಬೆಂಗಳೂರು: ಜನಪ್ರಿಯತೆಗಿಂತ ಜನಪರ, ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡುವ ಸಂಕಲ್ಪ ಮಾಡಿದ್ದು, ಜನೋಪಯೋಗಿ ಆಡಳಿತ, ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾನ ಮಾಡಿದರು. ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ವಿಧಾನ ಮಂಡಲದಿಂದ ಭಾನುವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪಾರ ನಿರೀಕ್ಷೆ, ಅಪೇಕ್ಷೆಗಳನ್ನು ಇಟ್ಟುಕೊಂಡು ಆಯ್ಕೆ ಮಾಡಿದ ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಮುಖ್ಯವಾಗಿದೆ ಎಂದರು.

ವಿಧಾನ ಸೌಧ ಪ್ರಜಾಪ್ರಭುತ್ವದ ದೇವಾಲಯ, ಸಂವಿಧಾನ ಈ ದೇವಾಲಯಕ್ಕೆ ಭಗವದ್ಗೀತೆ. ವಿಧಾನ ಮಂಡಲದ ಪರಂಪರೆ, ಸಂವಿಧಾನ ಬದ್ಧ ಆಡಳಿತವನ್ನು ಕಾಪಾಡಿಕೊಂಡು ಹೋಗಲು ಆದ್ಯತೆ ನೀಡಲಾಗುವುದು ಎನ್ನುವ ಭರವಸೆಯಿತ್ತರು. ದೇಶದ ಪ್ರಗತಿಯಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಕರ್ನಾಟಕ ವಿಧಾನ ಮಂಡಲ ಹಲವಾರು ದಶಕಗಳಿಂದ ರಾಜ್ಯದ ಬೆಳವಣಿಗೆ ಹಾಗೂ ಬದಲಾವಣೆ ತಂದಿದೆ. ರಾಜ್ಯದಲ್ಲಿ ಅನೇಕ ಚಿಂತಕರು, ಪ್ರಮುಖರು ಸಾಮಾಜಿಕ ಸಮಾನತೆ, ಸುಭಿಕ್ಷೆ, ಚರಿತ್ರಾರ್ಹ, ಆಚಾರ ಯೋಗ್ಯ ನಿರ್ದೇಶನಗಳನ್ನು ನೀಡಿದ್ದು, ನಾಡಿನ ಇತಿಹಾಸ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದರು.

ಹರೆಯದ ಹುಮ್ಮಸ್ಸು: ಅನಾಮಧೇಯರು, ರೈತರು, ದುಡಿಯುವ ವರ್ಗಗಳ ಚಳವಳಿಗಳು ಸ್ವಾತಂತ್ರ್ಯಕ್ಕೆ ಬಹು ದೊಡ್ಡ ತಿರುವು ನೀಡಿವೆ. ಧಾರ್ವಿುಕ ಚಳವಳಿ ಹಿನ್ನೆಲೆ, ತ್ಯಾಗ, ಬಲಿದಾನ, ಸಾತ್ವಿಕತೆ, ಕಾರ್ಯಾಚರಣೆ, ಸತ್ಯ ಮತ್ತು ಅಹಿಂಸೆಗಳು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿವೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಯಾವುದೇ ವ್ಯಕ್ತಿಗೆ 75 ವರ್ಷ ದೊಡ್ಡದಾದರೂ ದೇಶಕ್ಕೆ 75 ಅಂದರೆ ಬಾಲ್ಯ ಮುಗಿಸಿ ಯೌವ್ವನಕ್ಕೆ ಕಾಲಿರಿಸಿದಂತೆ. ಹರೆಯದ ನವ ಚೇತನ, ಹೊಸ ಆಸೆಗಳು, ತುಡಿತ-ಮಿಡಿತ, ಕನಸು, ಸಾಧಿಸುವ ಹಂಬಲವಿರುವ ಘಟ್ಟಕ್ಕೆ ದೇಶ ತಲುಪಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ಲೇಷಿಸಿದರು.

ರಾಜ್ಯದಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲ. ಅವುಗಳ ಸದ್ಬಳಕೆ, ಪರಿಣಾಮಕಾರಿ ಅನುಷ್ಠಾನದ ಮೂಲಕ ಶ್ರೇಷ್ಠ ರಾಜ್ಯವನ್ನಾಗಿಸೋಣ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳಾಗುತ್ತಿದ್ದು, ಘೋಷಣೆ ಮಾಡಿದ ಕಾರ್ಯಕ್ರಮಗಳ ಅನುಷ್ಠಾನದತ್ತ ಲಕ್ಷ್ಯವಹಿಸಲಾಗುವುದು. ಬದಲಾವಣೆಯ ಪರ್ವಕ್ಕೆ ತಕ್ಕಂತೆ ಜನೋಪಯೋಗಿ ಶಾಸನ ರಚನೆ, ಆಡಳಿತಯಂತ್ರ ಸನ್ನದ್ಧತೆ ಮುಖ್ಯವಾಗಿದೆ. ಇಂದು ಆಳುವವನು ಆಡಳಿತ ಮಾಡಿದರೆ, ಆಡಳಿತ ಮಾಡುವವನು ಆಳುವ ವಾತಾವರಣವಿದ್ದು, ಇದನ್ನು ಸರಿಪಡಿಸಲು ಉಭಯ ಸದನಗಳು ಪ್ರಯತ್ನಿಸಬೇಕು.| ಬಸವರಾಜ ಬೊಮ್ಮಾಯಿ ಸಿಎಂನೈತಿಕತೆ, ತತ್ವ-ಸಿದ್ಧಾಂತ, ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಸಂಸದೀಯ ವ್ಯವಸ್ಥೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ನಮ್ಮ ಸದನಗಳು ಮಾತಿನ ಮನೆಗಳಿಗಿಂತ ಗರಡಿ ಮನೆಗಳಾಗಿ ಪರಿವರ್ತನೆಯಾಗುತ್ತಿದ್ದು, ಎಲ್ಲ ಜನಪ್ರತಿನಿಧಿಗಳು, ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.| ಬಸವರಾಜ ಹೊರಟ್ಟಿ ವಿಧಾನಪರಿಷತ್ ಸಭಾಪತಿ

43 ನಿಮಿಷದಲ್ಲಿ 245 ಯೋಗಾಸನ

ಉಡುಪಿ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ತನುಶ್ರೀ ಪಿತ್ರೋಡಿ ಪ್ರದರ್ಶಿಸಿದ ಯೋಗಾಸನದ ಭಂಗಿ.

ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಮತ್ತೊಂದು ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ. 43 ನಿಮಿಷ 18 ಸೆಕೆಂಡ್​ನಲ್ಲಿ 245 ಯೋಗಾಸನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯೊತ್ಸವ ಸವಿನೆನಪಿಗಾಗಿ ಭಾನುವಾರ ಶ್ರೀಕೃಷ ್ಣುಠದ ರಾಜಾಂಗಣದಲ್ಲಿ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು. ದೇಶಾದ್ಯಂತ ಚಾಲ್ತಿಯಲ್ಲಿರುವ ಯೋಗದ 245 ಭಂಗಿಗಳನ್ನು ಒಂದೆಡೆ ಸೇರಿಸುವ ವಿಶಿಷ್ಟ ಪ್ರಯೋಗ ಇಲ್ಲಿ ನಡೆಯಿತು. 145ಕ್ಕೂ ಅಧಿಕ ಕ್ಲಿಷ್ಟಕರ ಯೋಗಾಸನ ಕ್ರಿಯೆಯನ್ನು ಲೀಲಜಾಲವಾಗಿ ಮಾಡಿದ ತನುಶ್ರೀ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯಾ ವಿಭಾಗದ ಮುಖ್ಯಸ್ಥ ಡಾ.ಮನೀಷ್ ಬಿಶ್ನೋಯ್ ವಿಶ್ವದಾಖಲೆ ಪ್ರಮಾಣಪತ್ರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net