ಅಭಿವೃದ್ಧಿ ಗುರಿ, ಜನಪ್ರೀತಿಯ ಗರಿ: ಅಂಬೇಡ್ಕರ್ ನವೋದಯ ಶಾಲೆ ಶುರು

Narayana f
Published on

ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ 3 ದಿನಗಳಿಂದ ‘ಜನಾಶೀರ್ವಾದ ಯಾತ್ರೆ’ ಮೂಲಕ ರಾಜ್ಯ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಿತ್ಯವೂ ನೂರಾರು ಕಿಮೀ ಪ್ರಯಾಣ ನಡೆಸುವುದರ ಜತೆಗೆ ರೋಡ್ ಶೋ, ವೇದಿಕೆ ಕಾರ್ಯಕ್ರಮ, ಸಂವಾದ ಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲೇ, ಮೋದಿ ಸರ್ಕಾರದ ಸಾಧನೆಗಳು ಹಾಗೂ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

# ದೇಶಕ್ಕೆ ಏನು ಕೊಡುಗೆ ನೀಡ ಬಯಸಿದ್ದೀರಿ?

ದೇಶದ 84 ಮೀಸಲು ಕ್ಷೇತ್ರಗಳಲ್ಲಿ ಅಂಬೇಡ್ಕರ್ ನವೋದಯ ಶಾಲೆಗಳನ್ನು ಪ್ರಾರಂಭಿಸಲು ಆಲೋಚನೆ ಮಾಡಿದ್ದೇನೆ. ಪರಿಶಿಷ್ಟರು, ಹಿಂದುಳಿದ ವಿದ್ಯಾರ್ಥಿಗಳ ಯುಪಿಎಸ್​ಸಿ ಕನಸು ನನಸಾಗಿಸಲು ಆಯಾ ರಾಜ್ಯಗಳ ತಲಾ ಒಂದು ಟಾಪ್ ಯೂನಿವರ್ಸಿಟಿಯಲ್ಲಿ ಕೋಚಿಂಗ್ ಕೇಂದ್ರ ತೆರೆದು 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದರ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ನಿಗಮಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ಕೊಡಿಸಲು ಪ್ರಯತ್ನಿಸಲಾಗುವುದು.

#ಜನಾಶೀರ್ವಾದ ಯಾತ್ರೆಯ ಉದ್ದೇಶ ಏನು?

ಪ್ರಧಾನಿ ಮೋದಿ ಆಶಯದಂತೆ ನನ್ನನ್ನೂ ಸೇರಿ 48 ಹೊಸ ಸಚಿವರು ಜನರ ಮಧ್ಯೆ ತೆರಳಿ ನಮ್ಮನ್ನು ಪರಿಚಯಿಸಿಕೊಳ್ಳುವ ಜತೆಗೆ ಮಂತ್ರಿಗಳ ಜವಾಬ್ದಾರಿ ಏನೆಂದು ಜನರ ಮುಂದಿಟ್ಟು ಅವರ ಆಶೀರ್ವಾದ ಬೇಡುವುದು ಯಾತ್ರೆಯ ಉದ್ದೇಶ. ಇದರೊಟ್ಟಿಗೆ ಕೇಂದ್ರದ ಏಳು ವರ್ಷದ ಸಾಧನೆ, ಜನಪರ ಯೋಜನೆಗಳನ್ನು ತಿಳಿಸಲಾಗುವುದು. ಕಾರ್ಯಕರ್ತರು ಹಾಗೂ ಸಮಾಜ ಸೇವಕರು ಕೊಂಡಿಯಾಗಿ ಕೆಲಸ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸುವ ಆಶಯ ಹೊಂದಲಾಗಿದೆ.

# ಜನಾಶೀರ್ವಾದ ಯಾತ್ರೆಯ ಫಲಿತಾಂಶ ಏನು?

ಜನರಲ್ಲಿ ಭರವಸೆಗಳನ್ನು ಬಿತ್ತುವ ಜತೆಗೆ ಬದ್ಧತೆ ಪ್ರದರ್ಶಿಸುತ್ತೇವೆ ಎಂಬ ಸಂಕಲ್ಪ ತೊಟ್ಟು ಕೆಲಸ ಮಾಡಲು ಯಾತ್ರೆ ಇನ್ನಷ್ಟು ಪ್ರೇರಣೆ ನೀಡಲಿದೆ. ಜನರು, ನಮ್ಮ ನಡುವೆ ಅಭಿವೃದ್ಧಿಯ ಬಾಂಧವ್ಯ ಬೆಸೆಯಲಿದೆ.

# ಯಾವ ಕ್ಷೇತ್ರಕ್ಕೆ ಏನು ಕೊಡುಗೆ ನೀಡಬಯಸುತ್ತೀರಿ?

ಅಪ್ಪರ್ ಭದ್ರಾ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆ ಜಾರಿಯಾದರೆ ಚಿತ್ರದುರ್ಗದ ಜನತೆ ಸದ್ಯಕ್ಕೆ ಬೇರೇನೂ ಕೇಳರು. ಈ ಎರಡರ ಅನುಷ್ಠಾನಕ್ಕೆ ಪ್ರಯತ್ನ ಜಾರಿ ಇದೆ. ಸದ್ಯದಲ್ಲೇ ಭದ್ರಾಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ಜತೆಗೆ ಹೆಚ್ಚುವರಿ ಅನುದಾನ ಲಭಿಸಲಿದೆ. ರೈಲ್ವೇ ಯೋಜನೆಗೆ 1,900 ಕೋಟಿ ರೂ. ಬಂದಿದೆ.

ಮೀಸಲು ಅಬಾಧಿತ

ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಮೀಸಲಾತಿ ಅಬಾಧಿತ. ಇದಕ್ಕೆ ಯಾವುದೇ ಧಕ್ಕೆ ಎದುರಾಗದು. ಎಲ್ಲರ ಹೃದಯ ಗೆದ್ದು ಸದಾಶಿವ ಆಯೋಗದ ವರದಿ ಜಾರಿಗೆ ಪ್ರಯತ್ನಿಸುವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net