

ಶಿವಮೊಗ್ಗ: ಪೊಲೀಸ್ ಇಲಾಖೆಯೊಂದಿಗಿನ ಒಡನಾಟ ಮತ್ತು ಕಾನೂನುಗಳ ಬಗ್ಗೆ ತಿಳಿವಳಿಕೆಯಿಂದ ಸಾರ್ವಜನಿಕವಾಗಿ ವ್ಯವಹರಿಸುವ ರೀತಿ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಜತೆಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಇತರರಿಗೆ ಮಾದರಿಯಾಗಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ.ಕಾರ್ಯಪ್ಪ ಹೇಳಿದರು.
ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಮಟ್ಟದ ಸ್ಪೆಲ್ಪ್ (ಸ್ಟೂಡೆಂಟ್ ಪೊಲೀಸ್ ಎಕ್ಸ್‌ಪೀರಿಯೆಂಟಲ್ ಲರ್ನಿಂಗ್ ಪ್ರೋಗಾಂ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಪೊಲೀಸ್ ಇಲಾಖೆ ಮತ್ತು ಇಲಾಖೆಯ ಸಮಾಜಮುಖಿ ಯೋಜನೆಗಳ ಬಗ್ಗೆ ಅರಿತು ಅದನ್ನು ತಮ್ಮ ಒಡನಾಟದಲ್ಲಿರುವವರಿಗೆ ಮಾಹಿತಿ ನೀಡಬೇಕು. ಆಗ ಮಾತ್ರ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಾಗಿ ಇಲಾಖೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯ ಎಂದರು.
ವ್ಯಕ್ತಿಗೆ ಕಾನೂನಿನ ಬಗ್ಗೆ ಅರಿವಿದ್ದಾಗ ಆತ ಸಮಾಜದಲ್ಲಿ ಧೈರ್ಯವಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಸ್ಪೆಲ್ಪ್ ಕಾರ್ಯಕ್ರಮದ ಸದುಪಯೋಗ ಪಡೆದು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ ಎಂದು ಸಲಹೆ ನೀಡಿದರು.
ಆಯ್ದ ವಿದ್ಯಾರ್ಥಿಗಳಿಗೆ ಅಪರಾಧಿಕ ಕಾನೂನಿನ ಬಗ್ಗೆ ಅರಿವು, ಅಪರಾಧಗಳ ತನಿಖೆ, ಪ್ರಥಮ ವರ್ತಮಾನ ಬರೆಯುವುದು, ಕೃತ್ಯ ನಡೆದ ಸ್ಥಳದ ಭೇಟಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ, ಪೊಲೀಸ್ ಗಸ್ತು ವ್ಯವಸ್ಥೆ, ಮಹಿಳಾ ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಬಗ್ಗೆ ಅರಿವು, ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮಾನವ ಕಳ್ಳ ಸಾಗಣೆ, ವಿವಿಧ ಸ್ಥರಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹಾಗೂ ಇತರೆ ವಿಷಯಗಳ ಕುರಿತು ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಡಿವೈಎಸ್ಪಿ ಬಾಬು ಆಂಜನಪ್ಪ, ಡಿಎಆರ್ ಡಿವೈಎಸ್ಪಿ ಪ್ರಕಾಶ್, ಶಿವಮೊಗ್ಗ ಬಾಪೂಜಿನಗರದ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ.ಚನ್ನಪ್ಪ, ಎನ್‌ಎಸ್‌ಎಸ್ ಸಂಯೋಜಕಿ ಡಾ. ರೇಷ್ಮಾ ಮತ್ತು ನಗರದ ಪೊಲೀಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಏನಿದು ಸ್ಪೆಲ್ಪ್ ಕಾರ್ಯಕ್ರಮ ?
ಜನಸ್ನೇಹಿ ಮತ್ತು ಸಮುದಾಯದತ್ತ ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ, ಕಾನೂನಿನ ಕುರಿತಂತೆ ಪದವಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಸ್ಪೆಲ್ಪ್ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಆಯ್ದ 5 ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಠಾಣಾಮಟ್ಟದಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.