ಕರ್ತವ್ಯ, ಸಮಯ ಪ್ರಜ್ಞೆ ರೂಡಿಸಿಕೊಳ್ಳಿ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಕಿವಿಮಾತು

Published on


ಬೆಂಗಳೂರು: ನಗರದ ಕೆಲ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗೆ ಇರುವ ಮಾಹಿತಿ, ಜ್ಞಾನ, ಕರ್ತವ್ಯ ಪ್ರಜ್ಞೆ ನಮ್ಮ ಪೊಲೀಸ್ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ಥಣಿಸಂದ್ರದ ಉತ್ತರ ಸಿಎಆರ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಇಂದಿನ ಕವಾಯತು ಮಟ್ಟ ಉತ್ತಮವಾಗಿದೆ. ಆದರೆ, ಪ್ಲಟೂನ್ ಕಮಾಂಡರ್‌ಗಳ ಡ್ರಿಲ್ ಮತ್ತು ಕಮಾಂಡ್‌ಗಳು ಸಂಜಸವಾಗಿರಲಿಲ್ಲ. ಈ ಬಗ್ಗೆ ಡಿಸಿಪಿ ಮತ್ತು ಎಸಿಪಿಗಳು ಗಮನ ಹರಿಸಬೇಕು ಎಂದರು.
ನಗರದ ಕೆಲ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗೆ ಇರುವ ಮಾಹಿತಿ, ಜ್ಞಾನ, ಕರ್ತವ್ಯ ಪ್ರಜ್ಞೆ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ. ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ಕಮಾಂಡ್‌ಗಳು ಗೊತ್ತಾಗುತ್ತಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ಹಿರಿಯ ಅಧಿಕಾರಿಗಳ ಮೇಲಿದೆ. ಡಿಸಿಪಿ, ಎಸಿಪಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಕವಾಯತು ಬಗ್ಗೆ ಮಾಹಿತಿ ಇರಬೇಕು. ಏಕೆಂದರೆ, ಅನೇಕ ಸಂದರ್ಭಗಳಲ್ಲಿ ತಪ್ಪು ಕಮಾಂಡ್‌ಗಳು, ಡ್ರಿಲ್ ತಪ್ಪು ಮಾಡಿದರೂ ಮೂಕಪ್ರೇಕ್ಷರಾಗಿ ನಿಲ್ಲುತ್ತಿದ್ದಾರೆ. ಇದನ್ನು ಸರಿಪಡಿಸದಿದ್ದಲ್ಲಿ ಇದೇ ರೂಢಿಗತವಾಗಿ ಶಿಸ್ತು ಪಾಲನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಪರೇಡ್ ತಪಾಸಣೆ ಮಾಡಬೇಕು:
ಪರೇಡ್ ಮತ್ತು ಶಿಸ್ತು ಪೊಲೀಸ್ ಇಲಾಖೆಯ ಅಂತರ್ಗತ ಭಾಗ. ಡಿಸಿಪಿಗಳು ಮತ್ತು ಎಸಿಪಿಗಳು ಠಾಣಾ ಮಟ್ಟದಲ್ಲಿ ಪರೇಡ್ ತಪಾಸಣೆ ಮಾಡಬೇಕು. ಠಾಣಾ ಇನ್‌ಸ್ಪೆಕ್ಟರ್‌ಗಳು, ಸಬ್ ಇನ್‌ಸ್ಪೆಕ್ಟರ್‌ಗಳು ಠಾಣೆಯಲ್ಲಿ ಹೇಗೆ ಪರೇಡ್ ಆಯೋಜಿಸುತ್ತಾರೆ ಎಂಬುದನ್ನು ಗಮನಿಸಬೇಕು. ಹೊಸದಾಗಿ ಬಂದಿರುವ ಪಿಎಸ್‌ಐಗಳು ಪ್ಲಟೂನ್ ಕಮಾಂಡರ್‌ಗಳಾಗಿದ್ದಾರೆ. ಅವರಿಗೆ ಸರಿಯಾದ ಕಮಾಂಡ್, ಡ್ರಿಲ್ ಬರುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು. ಕಮಾಂಡ್‌ಗಳು ಮತ್ತು ಡ್ರಿಲ್ ಬಗ್ಗೆ ವಿಡಿಯೋ ಮಾಡಿದ್ದೇವೆ. ಆ ವಿಡಿಯೋಗಳನ್ನು ಆಯಾಯ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಹಾಕಬೇಕು ಎಂದು ತಿಳಿಸಿದರು.

ಇನ್ನು ನಗರದಲ್ಲಿ ಯಶಸ್ವಿಯಾಗಿ ಚುನಾವಣಾ ಕರ್ತವ್ಯ ಮುಗಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಹೊರ ಜಿಲ್ಲೆಗಳಿಂದಲೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದರು. ಇನ್ನು ಕೆಲವೇ ದಿನಗಳಲ್ಲಿ ಅವರನ್ನು ಮೂಲಸ್ಥಾನಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನೆ ಎಂದು ಹೇಳಿದರು.
ಚುನಾವಣೆ ಮುಗಿದಿರುವುದರಿಂದ ಇನ್ನು ದೈನಂದಿನ ಚುಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರಮುಖವಾಗಿ ಅಪರಾಧಗಳ ಪತ್ತೆ, ನಿಯಂತ್ರಣದತ್ತ ಗಮನಹರಿಸಬೇಕು. ರಾತ್ರಿ ಗಸ್ತಿನಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಅಪರಾಧ ನಿಯಂತ್ರಣಕ್ಕೆ ಪ್ರಯತ್ನಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ಎಲ್ಲ ವಿಭಾಗಗಳಿಗೂ ವಿಸ್ತರಿಸಲಾಗುತ್ತದೆ. ಅಪರಾಧ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆಯೂ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net