ಪರಿಸ್ಥಿತಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಿ: ಕೃಷ್ಣಪ್ಪ

dvs
ಡಿವಿಎಸ್ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಕೆ.ಎನ್.ರುದ್ರಪ್ಪ ಕೊಳಲೆ, ಡಾ.ಕೆ.ಸಿ.ಶಶಿಧರ, ಎಸ್.ರಾಜಶೇಖರ್, ಬಿ.ಕೃಷ್ಣಪ್ಪ, ಡಾ.ಸತೀಶ್‌ಕುಮಾರ್ ಶೆಟ್ಟಿ, ಆರ್.ಲಕ್ಷ್ಮೀದೇವಿ, ಬಿ.ಗೋಪಿನಾಥ್ ಪಾಲ್ಗೊಂಡಿದ್ದರು.
Published on

ಶಿವಮೊಗ್ಗ: ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಉತ್ತಮ ಜೀವನಕ್ಕೆ ಪೂರಕವಾದ ಮೌಲ್ಯಗಳ ಬಗ್ಗೆಯೂ ಅರಿವು ಮೂಡಿಸಬೇಕೆಂದು ಡಿಡಿಪಿಐ ಬಿ.ಕೃಷ್ಣಪ್ಪ ಹೇಳಿದರು.

ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕೆಲವು ವಿದ್ಯಾರ್ಥಿಗಳು ಖಿನ್ನತೆ ಹಾಗೂ ದುರ್ಬಲ ಮನಸ್ಥಿತಿ ಹೊಂದುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು.
ಕಿರುಕುಳ, ಫಲಿತಾಂಶದಲ್ಲಿ ಹಿನ್ನಡೆ ಕಾರಣಕ್ಕೆ ವಿದ್ಯಾರ್ಥಿಗಳು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಎಂತಹ ಪರಿಸ್ಥಿತಿ ಬಂದರೂ ಅದನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಣ್ಣ ವಯಸ್ಸಿನಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಜೀವನ ಶೈಲಿ ಪಾಲಿಸದೇ ಇರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ವಿದ್ಯಾರ್ಥಿಗಳು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ವ್ಯಾಯಾಮ ಮುಂತಾದ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಸಚಿವ ಡಾ.ಕೆ.ಸಿ.ಶಶಿಧರ್ ಮಾತನಾಡಿ, ಪಾಲಕರು ವಿದ್ಯಾರ್ಥಿಗಳಿಗೆ ಅತಿಯಾದ ಒತ್ತಡ ಹಾಕಬಾರದು. ಉತ್ತಮ ಅಂಕ ಗಳಿಸಲು ಪ್ರೋತ್ಸಾಹಿಸಬೇಕು. ಇದರಿಂದ ವಿದ್ಯಾರ್ಥಿಯು ಸ್ವಯಂಪ್ರೇರಿತವಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸಲಹೆ ಸೂಚನೆಗಳನ್ನು ನೀಡಬೇಕು. ಅವರಲ್ಲಿರುವ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕೆಂದರು.
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಯಿತು.
ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಪ್ರಾಚಾರ್ಯೆ ಆರ್.ಲಕ್ಷ್ಮೀದೇವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net