ಉಳಿತಾಯ, ಆರ್ಥಿಕ ಸಬಲತೆ ಮನೋಭಾವ ಬೆಳೆಸಿ

oplus_2
ಸೋಮವಾರಪೇಟೆ ಬೇಳೂರು ರಸ್ತೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀರಶೈವ ಸೌಹಾರ್ದ ಸಹಕಾರಿ ಸಂಘದ ಪ್ರಥಮ ವಿಶೇಷ ಸಭೆಯನ್ನು ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಯುವರಾಜ್, ಮೃತ್ಯುಂಜಯ, ಸುರೇಶ್, ಪ್ರಭುದೇವ್ ಇದ್ದರು.
Published on

ಸೋಮವಾರಪೇಟೆ : ಜನ ಸಾಮಾನ್ಯರಲ್ಲಿ ಹಣದ ಉಳಿತಾಯ, ಆರ್ಥಿಕ ಸಬಲತೆ ಸಾಧಿಸುವ ಮನೋಭಾವವನ್ನು ಸಹಕಾರ ಸಂಘಗಳು ಬೆಳೆಸಬೇಕು ಎಂದು ವಿರಕ್ತ ಮಠಾಧೀಶ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಬೇಳೂರು ರಸ್ತೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವೀರಶೈವ ಸೌಹಾರ್ದ ಸಹಕಾರ ಸಂಘದ ಪ್ರಥಮ ವಿಶೇಷ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಘವು ಇಡೀ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಆರ್ಥಿಕ ಸಾಕ್ಷರತೆಯೊಂದಿಗೆ ಸಮಾಜದ ಅಭಿವೃದ್ಧಿ ಕಾರ್ಯವೂ ಆಗಲಿ ಎಂದು ಸ್ವಾಮೀಜಿ ಆಶಿಸಿದರು.

ಸಹಕಾರ ಸಂಘದ ಪ್ರವರ್ತಕ ಕೆ.ಎನ್. ತೇಜಸ್ವಿ ಮಾತನಾಡಿ, ಕೇಂದ್ರ ಸರ್ಕಾರ ಸಹಕಾರ ಕಾಯ್ದೆಗೆ ಸಮಗ್ರ ತಿದ್ದುಪಡಿ ತಂದು ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಿದೆ. ಆಡಳಿತ ಮಂಡಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ ಪರಿಣಾಮ ಸಹಕಾರ ಕ್ಷೇತ್ರ ಸಮಾಜಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದೆ. ವೀರಶೈವ ಸೌಹಾರ್ದ ಸಹಕಾರ ಸಂಘವು ತಾಲೂಕಿನಾದ್ಯಂತ ಸದಸ್ಯರನ್ನು ಹೊಂದುವ ಗುರಿ ಇಟ್ಟುಕೊಂಡಿದೆ. ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಇರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಸಂಘ ಕಾರ್ಯನಿರ್ವಹಿಸಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಎಸ್. ಯುವರಾಜ್ ಮಾತನಾಡಿ, ಸಮಾಜದ ಅಭಿವೃದ್ಧಿ, ಬಡ ಮಂದಿಗೆ ಆರ್ಥಿಕ ಸೇವೆ ಒದಗಿಸುವ ಉದ್ದೇಶದಿಂದ ನೂತನವಾಗಿ ಸಂಘ ರಚಿಸಲಾಗಿದೆ. ಈಗಾಗಲೇ ಸಂಘದಲ್ಲಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ವೀರಶೈವ ಸಮಾಜದ 267 ಜನ ಸದಸ್ಯರಿದ್ದಾರೆ. ಪ್ರಸ್ತುತ 12 ಲಕ್ಷ ಷೇರು ಬಂಡವಾಳವಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಬಿ.ಆರ್. ಮೃತ್ಯುಂಜಯ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸುರೇಶ್, ಪ್ರವರ್ತಕರಾದ ಜಿ.ಎಸ್. ಪ್ರಭುದೇವ್, ನವೀನ್ ಬಸವಕುಮಾರ್, ಜಿ.ಜೆ. ಗಿರೀಶ್, ಬಿ.ಪಿ.ಶಿವಕುಮಾರ್, ನಾಗೇಶ್, ಸಿ.ಸಿ. ನಾಗರಾಜ್, ಭಗವತಿ ದೇಶ್‌ಮುಖ್, ಮಾಯಾ ಗಿರೀಶ್, ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net