

ಬೆಂಗಳೂರು: ಸಂಸತ್ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹಾಜರಾಗುತ್ತಿದ್ದೇನೆ. ಅದು ದೇಶದ ಆಸ್ತಿ. ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು ಅದಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ ನಿಜ. ಆದರೆ, ಅದು ಅವರ ವೈಯಕ್ತಿಕ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ. ಆ ಭವ್ಯ ಕಟ್ಟಡ ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಅದು ಬಿಜೆಪಿ ಅಥವಾ ಆರೆಸ್ಸೆಸ್ ಕಚೇರಿ ಅಲ್ಲ. ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಓರ್ವ ಮಾಜಿ ಪ್ರಧಾನಿಯಾಗಿ, ದೇಶದ ಪ್ರಜೆಯಾಗಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿಯನ್ನು ರಾಜಕೀಯವಾಗಿ ವಿರೋಧ ಮಾಡಲಿಕ್ಕೆ ನನ್ನಲ್ಲಿ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ರಾಜಕೀಯ ತರುವುದು ನನಗೆ ಇಷ್ಟವಿಲ್ಲ. ನಾನು ಸಂಸತ್ತಿನ ಎರಡೂ ಸದನಗಳಿಗೆ ಆಯ್ಕೆಯಾಗಿದ್ದೇನೆ. ಅಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ, ಈಗಲೂ ಸದಸ್ಯನಾಗಿದ್ದೇನೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ಸಂವಿಧಾನದ ವಿಷಯದಲ್ಲಿ ನಾನು ರಾಜಕೀಯ ತರಲಾರೆ ಎಂದರು.
ಅನೇಕ ಪಕ್ಷಗಳು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಓರ್ವ ಮಾಜಿ ಪ್ರಧಾನಿಯಾಗಿ ನೀವು ಹೋಗುತ್ತೀರಾ ಇಲ್ಲವಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹೌದು, ನಾನು ಸಂವಿಧಾನಕ್ಕೆ ಬದ್ಧನಾಗಿದ್ದೇನೆ. ಅದಕ್ಕಾಗಿ ಸಂಸತ್ ಭವನ ಉದ್ಘಾಟನೆಗೆ ಹೋಗುತ್ತೇನೆ ಅಂತ ಅವರಿಗೆ ಹೇಳಲು ಬಯಸುತ್ತೇನೆ ಎಂದು ಅವರು ನುಡಿದರು.(ಏಜೆನ್ಸೀಸ್)