

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಏ.14 ರಂದು ಮೈಸೂರಿನಲ್ಲಿ ರ‌್ಯಾಲಿ ನಡೆಸಲಿದ್ದಾರೆ.
ಈ ರ‌್ಯಾಲಿಯಲ್ಲಿ ಎನ್‌ಡಿಎ ಅಂಗ ಪಕ್ಷ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ಭಾಗವಹಿಸಲಿದ್ದಾರೆ. ಮೈಸೂರಿನಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವೇದಿಕೆ ಹಂಚಿಕೊಂಡು ಮೈತ್ರಿ ಪಕ್ಷಗಳಲ್ಲಿ ಸಮನ್ವಯಕ್ಕೆ ನಾಂದಿ ಹಾಡಲಿದ್ದಾರೆ.
ಬಿಜೆಪಿ ಸಭೆ, ಸಮಾರಂಭಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ, ಕಡೆಣಿಸುತ್ತಿದ್ದಾರೆ ಎಂಬ ಟೀಕೆ ಜೆಡಿಎಸ್‌ನಿಂದ ವ್ಯಕ್ತವಾಗಿತ್ತು. ಖುದ್ದು ಕುಮಾರಸ್ವಾಮಿ ಅವರೇ ಮೂರು ಸೀಟಿಗಾಗಿ ನನಗೆ ಈ ಮೈತ್ರಿ ಬೇಕಾಗಿತ್ತೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತಳಮಟ್ಟದಲ್ಲಂತೂ ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಕೊರತೆ ದೊಡ್ಡ ಮಟ್ಟದಲ್ಲಿ ಎದ್ದು ಕಾಣುತ್ತಿದೆ. ಈ ರ‌್ಯಾಲಿ ಅದಕ್ಕೆ ಪರಿಹಾರೋಪಾಯವಾಗಲಿದೆ ಎಂಬುದು ಮೈತ್ರಿ ಪಕ್ಷಗಳ ಲೆಕ್ಕಾಚಾರ.
ಹಾಸನ, ಕೋಲಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಉಭಯ ಪಕ್ಷಗಳಿಗೂ ಸವಾಲಾಗಿದೆ. ದೇವೇಗೌಡರು ಮೈಸೂರಿನಲ್ಲಿ ನಡೆಯಲಿರುವ ಮೋದಿ ರ‌್ಯಾಲಿಯಲ್ಲಿ ಭಾಗವಹಿಸುವ ಮೂಲಕ ಸಮನ್ವಯ ಸಾಧಿಸಲು ಪೂರಕ ವಾತಾವರಣ ಸೃಷ್ಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಏ.14 ರಂದು ಸಂಜೆ 4ಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಮೈಸೂರಿನಲ್ಲಿ ದೇವೇಗೌಡರ ಉಪಸ್ಥಿತಿಯಿಂದ ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷಕ್ಕೆ ಬಲ ಬರಲಿದೆ ಎಂದು ಬಿಜೆಪಿ ನಂಬಿದೆ. ಈ ಭಾಗದಲ್ಲಿ ಜೆಡಿಎಸ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.