ಬಿಜೆಪಿ ಕಾರ್ಯಕ್ರಮಕ್ಕೆ ದೇವೇಗೌಡರಿಗೆ ಆಹ್ವಾನ | Dark day of emergency

C T Ravi invited HDD
Published on

ಬೆಂಗಳೂರು: ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜೂನ್ 25ಕ್ಕೆ 50 ವರ್ಷಗಳು ತುಂಬಲಿವೆ. ಈ ದಿನವನ್ನು ‘ಸಂವಿಧಾನ ಹತ್ಯಾ ದಿನ’ವೆಂದು ಆಚರಿಸಲು ಬಿಜೆಪಿ ನಿರ್ಧರಿಸಿದೆ. ತುರ್ತು ಪರಿಸ್ಥಿತಿ ಕರಾಳ ದಿನಗಳ ಕುರಿತು ದೇಶದ ಯುವಜನರಿಗೆ ತಿಳಿಸಿ, ಜಾಗೃತಿ ಮೂಡಿಸಲು ಮುಂದಾಗಿದೆ.

ಪಕ್ಷದ ವರಿಷ್ಠರ ಸೂಚನೆಯಂತೆ ರಾಜ್ಯ ಬಿಜೆಪಿ ಜೂ.25ರಂದು ರಾಜ್ಯವ್ಯಾಪಿ ಜಿಲ್ಲೆ, ಮಂಡಲಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದಕ್ಕಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ರಾಜ್ಯಮಟ್ಟದ ಸಂಚಾಲನಾ ಸಮಿತಿ ರಚಿಸಿದ್ದು, ರಾಜ್ಯಮಟ್ಟದ ಕಾರ್ಯಕ್ರಮ ಏರ್ಪಡಿಸಲು ಚಿಂತನೆ ನಡೆಸಿದೆ.

ದೇವೇಗೌಡರಿಗೆ ಆಹ್ವಾನ

ಬಿಜೆಪಿ ಏರ್ಪಡಿಸಲು ಉದ್ದೇಶಿತ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಿದೆ. ಸಿ.ಟಿ.ರವಿಯವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶವನ್ನು ಶುಕ್ರವಾರ ಹಂಚಿಕೊಂಡಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿರುವ ತುರ್ತು ಪರಿಸ್ಥಿತಿಗೆ ಐವತ್ತ ವರ್ಷ. ದೇಶದ ಪ್ರಜಾಪ್ರಭುತ್ವವನ್ನು ಖಂಡಿಸಿ, ಬಾಬಾಸಾಹೇಬರು ನೀಡಿದ ಭಾರತದ ಸಂವಿಧಾನವನ್ನು ಅಮಾನತಿನಲ್ಲಿಟ್ಟ ಕರಾಳ ಕಾಲಘಟ್ಟವನ್ನು ಇಂದಿನ ಯುವಜನತೆಗೆ ನೆನಪಿಸುವ ಮತ್ತು ಅದರಿಂದ ಕಲಿಯಬೇಕಾದ ಪಾಠಗಳನ್ನು ತಿಳಿಸುವ ಉದ್ದೇಶದಿಂದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಭಾಗವಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧನವಾಗಿ, ಸೆರೆಮನೆಯಲ್ಲಿದ್ದುಕೊಂಡೆ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ರೂಪಿಸಿದ ಜೆಡಿಎಸ್ ಪಕ್ಷದ ಸಂಸ್ಥಾಪಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ಎಂದು ಸಿ.ಟಿ.ರವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net