ಸಂಕ್ರಾಂತಿಗೆ ರಿಲೀಸ್ ಆಗಲಿರುವ ಚಿತ್ರದಲ್ಲಿ ಬರಲಿದೆ ಬಹುನಿರೀಕ್ಷಿತ 'ದೇವರ' ಟೀಸರ್! ಯಾವ ಸಿನಿಮಾ ಅದು?

ವಿಜಯವಾಣಿ - 2024-01-06T081248.682
Published on

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟಾರ್​ ನಟ, ಆರ್​ಆರ್​ಆರ್ ಖ್ಯಾತಿಯ ಜೂ. ಎನ್​ಟಿಆರ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ದೇವರ' ಬಗ್ಗೆ ಇದೀಗ ಹೊಸ ಹೊಸ ಅಪ್ಡೇಟ್​ಗಳು ಲಭಿಸುತ್ತಿದ್ದು, ಚಿತ್ರದ ರಿಲೀಸ್​ಗಾಗಿ ಸಿನಿಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಇದೀಗ ಟೀಸರ್​ ಸುದ್ದಿಯೊಂದು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಚಿತ್ರದಲ್ಲಿ ಟೀಸರ್​ ಅನಾವರಣಗೊಳ್ಳಲಿದೆ ಎಂಬ ಮಾಹಿತಿ ಸದ್ಯ ಹೊರಬಿದ್ದಿದೆ.

ಕೊರಟಾಲ ಶಿವ ನಿರ್ದೇಶಿಸಿರುವ 'ದೇವರ' ಟಾಲಿವುಡ್​​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಚಿತ್ರದ ಟೀಸರ್ ತೇಜ ಸಜ್ಜ ನಟನೆಯ 'ಹನುಮಾನ್'​ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಜನವರಿ 12 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ಈ ಚಿತ್ರದ ಪ್ರಾರಂಭದಲ್ಲಿ ಜೂ. ಎನ್​ಟಿಆರ್ ಅಭಿನಯದ ದೇವರ ಟೀಸರ್​ ಅನಾವರಣಗೊಳ್ಳಲಿದೆ.

ಪ್ರಶಾಂತ್ ವರ್ಮಾ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಹನು-ಮಾನ್' ಕೂಡ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಪೋಸ್ಟರ್​, ಟ್ರೇಲರ್ ಮುಖೇನ ಚಿತ್ರರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ತೇಜ ಸಜ್ಜ, ವಿನಯ್ ರೈ ಮುಖ್ಯಭೂಮಿಕೆಯಲ್ಲಿದ್ದಾರೆ.

'ದೇವರ' ಚಿತ್ರದಲ್ಲಿ ಜೂ. ಎನ್​ಟಿಆರ್​ಗೆ ನಾಯಕಿಯಾಗಿ ಜಾನ್ವಿ ಕಪೂರ್​ ಕಾಣಿಸಿಕೊಂಡಿದ್ದು, ಸೈಫ್ ಅಲಿ ಖಾನ್, ಪ್ರಕಾಶ್ ರಾಜ್, ಶ್ರೀಕಾಂತ್, ಮುರುಳಿ ಶರ್ಮಾ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net