ಮೂವರು ಸೌದಿ ರಾಜಕುಮಾರರ ಬಂಧನ

soudhi mar 20
Published on

ರಿಯಾದ್ : ಸೌದಿ ರಾಜಮನೆತನದಲ್ಲಿ ಅಧಿಕಾರ ಹಂಚಿಕೆ ಕುರಿತು ಎಲ್ಲವೂ ಸರಿಯಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದ್ದು, ರಾಜದ್ರೋಹದ ಆರೋಪದ ಮೇಲೆ ಮೂವರು ರಾಜಕುಮಾರರನ್ನು ಸೌದಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕದ ವಾಲ್ ಸ್ಟ್ರೀಟ್ ಜನರಲ್ ವರದಿಯ ಪ್ರಕಾರ, ಸೌದಿ ರಾಜ ಸಲ್ಮಾನ್​ರ ಸಹೋದರ ಅಹ್ಮದ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್, ಸೋದರಳಿಯ ಮೊಹಮ್ಮದ್ ಬಿನ್ ನಯೀಫ್ ಹಾಗೂ ರಾಜ ನಯೀಫ್​ರ ಕಿರಿಯ ಸಹೋದರ ನವಾಫ್​ರನ್ನು ಸೌದಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಈ ಮೂವರ ಮೇಲೆ ರಾಜದ್ರೋಹದ ಆರೋಪ ಹೊರಿಸಲಾಗಿದ್ದು, ರಾಜ ಸಲ್ಮಾನ್ ಹಾಗೂ ಅವರ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್​ರನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಒಂದು ವೇಳೆ ಈ ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ರಾಜಕುಮಾರರ ಬಂಧನವನ್ನು ಹಲವು ರೀತಿ ವಿಶ್ಲೇಷಿಸಲಾಗುತ್ತಿದ್ದು, ರಾಜಕುಮಾರ ಸಲ್ಮಾನ್ ತಮ್ಮ ಅಧಿಕಾರದ ಮೇಲಿನ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿರುವುದರಲ್ಲಿ ಇದು ಒಂದು ಭಾಗ ಎನ್ನಲಾಗುತ್ತಿದೆ.

ಭಿನ್ನಾಭಿಪ್ರಾಯ ಹತ್ತಿಕ್ಕುವ ಕ್ರಮ

ಸೌದಿ ಅರೇಬಿಯಾದಲ್ಲಿ ರಾಜಕುಮಾರ ಸಲ್ಮಾನ್ ಪ್ರಸ್ತುತವಾಗಿ ಅತ್ಯಂತ ಶಕ್ತಿಶಾಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ತಂದೆ 84 ವರ್ಷದ ಸಲ್ಮಾನ್ ಪ್ರಸ್ತುತ ರಾಜನಾಗಿದ್ದರೂ ಅವರ ಮಗನನ್ನೇ ನಿಜವಾದ ನಾಯಕ ಎಂದು ಪರಿಗಣಿಸಲಾಗಿದೆ. ಆದಾಗ್ಯೂ

ಸಲ್ಮಾನ್​ಗೆ ತನ್ನ ತಂದೆಯಿಂದ ಅಧಿಕಾರವನ್ನು ವರ್ಗಾಯಿಸಿಕೊಳ್ಳಲು ಹಲವು ಮಹತ್ವದ ಸವಾಲುಗಳು ಇವೆ. ಸೌದಿ ಅರಮನೆಯ ಅನೇಕ ಸದಸ್ಯರು, ಸೋದರ ಸಂಬಂಧಿಗಳು ಅಧಿಕಾರದ ಮೇಲೆ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಾವು ಪಟ್ಟಕ್ಕೇರಲು ಮುಳ್ಳಾಗಿರುವ ಎಲ್ಲ ಆಂತರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸೌದಿ ರಾಜಕುಮಾರ ಇತರ ರಾಜಕುಮಾರರನ್ನು ಬಂಧಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ರಾಜಕುಮಾರರ ಅಸಮಾಧಾನ

ರಾಜದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ 78 ವರ್ಷದ ಅಹ್ಮದ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಈ ಹಿಂದೆ ಲಂಡನ್​ನಲ್ಲಿ ವಾಸವಿದ್ದರು. 2018ರ ಅಕ್ಟೋಬರ್​ನಲ್ಲಿ ಸೌದಿ ಅರೇಬಿಯಾಕ್ಕೆ ಮರಳಿದ್ದರು. ಲಂಡನ್​ನಲ್ಲಿದ್ದಾಗಲೂ ಅಜೀಜ್ ಅನೇಕ ಬಾರಿ ರಾಜಮನೆತನದ ವಿರುದ್ಧ ಮಾತನಾಡಿದ್ದರು. ಯೆಮನ್​ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತಮ್ಮದೇ ರಾಜಮನೆತನದ ಪಾತ್ರವನ್ನು ಪ್ರಶ್ನಿಸಿದ್ದರು. ಈಗ ಅವರ ಬಂಧನವಾಗಿರುವುದು ಎಲ್ಲರ ಹುಬ್ಬೇರಿಸಿದೆ.

ಖಶೋಗ್ಗಿ ಹತ್ಯೆ ಆರೋಪ

ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಕಳೆದ ಮೂರು ವರ್ಷಗಳಿಂದ ಕೆಲವು ವಿವಾದಾತ್ಮಕ ನಿರ್ಧಾರಗಳಿಂದಾಗಿ ವಿಶ್ವಾದ್ಯಂತ ಸುದ್ದಿಯಾಗುತ್ತಿದ್ದಾರೆ. 2018ರಲ್ಲಿ ನಡೆದ ವಾಷಿಂಗ್ಟನ್ ಪೋಸ್ಟ್​ನ ಅಂಕಣಕಾರ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಇದು ಜಾಗತಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷ ಪ್ರಕರಣದ ಬಗ್ಗೆ ತೀರ್ಪು ನೀಡಿದ ಸೌದಿ ನ್ಯಾಯಾಲಯ, ಐವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ, ರಾಜಮನೆತನದ ಎಲ್ಲರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net