ನಿರೀಕ್ಷೆಗಳ ಆಶಾಗೋಪುರ: ಕೇಂದ್ರ ಬಜೆಟ್ 2022, ದಿನಗಣನೆ-3

Budget
Published on
ಮುಂಗಡಪತ್ರ ಎಂದ ಕೂಡಲೇ ನಿರೀಕ್ಷೆಗಳು ಗರಿಗೆದರುವುದು ಸಹಜ. ಕೋವಿಡ್- 19 ಸಂಕಷ್ಟದ ಹೊಡೆತದಿಂದ ದೇಶದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವ ಸಂದರ್ಭ ಇದು. ಕಳೆದ ಎರಡು ವರ್ಷಗಳ ಮುಂಗಡಪತ್ರದಲ್ಲಿ ಸಿಕ್ಕಂತೆ ಈ ಸಲವೂ ಉತ್ತೇಜನ ಪ್ಯಾಕೇಜ್ ಘೋಷಣೆ ಆಗಬಹುದೆ, ಯಾವ ಕ್ಷೇತ್ರಕ್ಕೆ ಈ ಸಲ ಉತ್ತೇಜನ ಸಿಗಲಿದೆ ಎಂಬುದು ಸದ್ಯದ ಕುತೂಹಲ. ಆಯ್ದ ಪ್ರಮುಖ ಕ್ಷೇತ್ರವಾರು ನಿರೀಕ್ಷೆಗಳ ಅವಲೋಕನ ಇಲ್ಲಿದೆ.

ಕೇಂದ್ರ ಮುಂಗಡಪತ್ರ ಮಂಡನೆಗೆ ಸಂಬಂಧಿಸಿದ ಸಿದ್ಧತೆ ಅಂತಿಮ ಹಂತ ತಲುಪಿದೆ. ಈ ವರ್ಷದ ಮುಂಗಡಪತ್ರ ಕುರಿತಂತೆ ನಿರೀಕ್ಷೆಗಳೂ ಹೆಚ್ಚಾಗಿವೆ. ಪಂಚರಾಜ್ಯ ಚುನಾವಣೆ ಒಂದೆಡೆ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಕಾರಣ ಅದಕ್ಕೂ ಮುಂಚಿನ ಪೂರ್ಣಪ್ರಮಾಣದ ಬಜೆಟ್ ಇದು. ಜತೆಗೆ ಭಾರತದ ಆರ್ಥಿಕತೆಗೆ ಪುನಶ್ಚೇತನ ಒದಗಿಸುತ್ತ, ಹೊಸ ದಿಶೆಯಲ್ಲಿ ದೇಶವನ್ನು ಮುನ್ನಡೆಸುವುದಕ್ಕೆ ಬೇಕಾದ ಮಾರ್ಗಸೂಚಿ ಈ ಬಜೆಟ್​ನಲ್ಲಿ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ದೇಶವಾಸಿಗಳಲ್ಲಿದೆ. ಕರೊನಾ ಸಂಕಷ್ಟದಿಂದ ಬಹುತೇಕ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿರುವ ಸಂದರ್ಭ ಇದು. ಹೀಗಾಗಿ ಆರೋಗ್ಯ, ಫಾರ್ವ, ಕೃಷಿ, ಎಂಎಸ್​ಎಂಇ, ವಾಯುಯಾನ, ರಿಯಲ್ ಎಸ್ಟೇಟ್, ಬೃಹತ್ ಉದ್ಯಮಗಳು ಸೇರಿ ಹಲವು ರಂಗಗಳು ಆಶಾಭಾವನೆಯೊಂದಿಗೆ ಈ ಸಲದ ಮುಂಗಡಪತ್ರವನ್ನು ಎದುರುನೋಡುತ್ತಿವೆ.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ?

ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಮಸೂದೆಗಳನ್ನು ರೈತರ ಪ್ರತಿಭಟನೆಯ ಕಾರಣ ಕೇಂದ್ರ ಹಿಂಪಡೆಯಿತು. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಏರಿಸುತ್ತ ಬಂದಿದೆ. ಇದಲ್ಲದೆ ಹಲವು ಪ್ರಗತಿಪರ ಉಪಕ್ರಮಗಳನ್ನೂ ಜಾರಿಗೊಳಿಸಿದೆ. ಕೃಷಿ ಇಳುವರಿ ಹೆಚ್ಚಳಕ್ಕೆ ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ ಮುಂತಾದವುಗಳಿಗೆ ಆದ್ಯತೆ ನೀಡುತ್ತಿರುವ ಸರ್ಕಾರ, ರಸಗೊಬ್ಬರಗಳ ಸಬ್ಸಿಡಿಯನ್ನೂ ಹೆಚ್ಚಿಸಿದೆ. ಈ ವರ್ಷ ಈ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಗೆ ಉತ್ತೇಜನ, ಅಗ್ರಿಟೆಕ್ ವೇದಿಕೆಗಳಿಗೆ ಬೆಂಬಲ, ಕೃಷಿ ನವೋದ್ಯಮಗಳಿಗೆ ಉತ್ತೇಜನ ಮುಂತಾದವುಗಳನ್ನು ಕೃಷಿ ಕ್ಷೇತ್ರ ನಿರೀಕ್ಷಿಸುತ್ತಿದೆ.

ಚಿಲ್ಲರೆ ವ್ಯಾಪಾರೋದ್ಯಮ ಕ್ಷೇತ್ರ

  • ಚಿಲ್ಲರೆ ವ್ಯಾಪರೋದ್ಯಮಕ್ಕೆ ಪ್ರಯೋಜನ ಒದಗಿಸಬಲ್ಲ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯ ಅನುಷ್ಠಾನ.
  • ಟ್ರಾನ್ಸ್​ಫರ್​ ಪ್ರೖೆಸಿಂಗ್ ಸೇರಿ ತೆರಿಗೆ ಸಂಬಂಧಿತ ವಿಚಾರಗಳ ಸರಳೀಕರಣ.
  • ಚಿಲ್ಲರೆ ವ್ಯಾಪಾರೋದ್ಯಮ ಕ್ಷೇತ್ರದ ನವೋದ್ಯಮಗಳಿಗೆ ಉತ್ತೇಜನ.
  • ಬಂಡವಾಳ ಹೂಡಿಕೆಗೆ ವಿವಿಧ ರೀತಿಯ ಅವಕಾಶ ಮತ್ತು ತೆರಿಗೆ ವಿನಾಯಿತಿ, ಪ್ರಮುಖ ವಸ್ತುಗಳ ಮೇಲಿನ ಜಿಎಸ್​ಟಿ ಪರಿಷ್ಕರಣೆ.

ಮೂಲಸೌಕರ್ಯ ಕ್ಷೇತ್ರ: ಸಂಕಷ್ಟದ ಕಾಲದಲ್ಲೂ ಬೇಡಿಕೆ ಕಳೆದುಕೊಳ್ಳದ ಕ್ಷೇತ್ರಗಳ ಪೈಕಿ ಮೂಲಸೌಕರ್ಯ ಕ್ಷೇತ್ರವೂ ಒಂದು. ಮೂಲಸೌಕರ್ಯ ವೃದ್ಧಿಯ ಕೆಲಸ ಸದ್ದಿಲ್ಲದೆ ನಡೆಯುತ್ತ ಬಂದಿದೆ. ಈ ವರ್ಷ ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿದ್ದು, ಈ ಸಲದ ಮುಂಗಡಪತ್ರದ ಮೂಲಕ ಅದಕ್ಕೆ ಇನ್ನಷ್ಟು ವೇಗ ಸಿಗಬಹುದು. ಮೂಲಸೌಕರ್ಯ ಕ್ಷೇತ್ರ ಮತ್ತು ಪೂರಕ ವಹಿವಾಟಿನಲ್ಲಿ ತೊಡಗಿರುವವರು ಉದ್ಯಮದ ಪುನಶ್ಚೇತನಕ್ಕಾಗಿ ಒಂದಷ್ಟು ವಿನಾಯಿತಿಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಎದುರು ನೋಡುತ್ತಿದ್ದಾರೆ.

ರಿಯಲ್ ಎಸ್ಟೇಟ್

  • ತೆರಿಗೆಯಲ್ಲಿ ಹೋಮ್​ಲೋನ್​ ಕಡಿತ ಮಿತಿ 2 ಲಕ್ಷ ರೂಪಾಯಿಗೆ ಹೆಚ್ಚಿಸುವುದು.
  • ಮನೆ ಖರೀದಿದಾರರಿಗೆ ಇನ್ನಷ್ಟು ವಿನಾಯಿತಿ.
  • ಆಸ್ತಿ ಖರೀದಿದಾರರಿಗೂ ವಿನಾಯಿತಿಗಳು ಹಾಗೂ ಪ್ರಯೋಜನಗಳು.

ಆತ್ಮನಿರ್ಭರ ಉಪಕ್ರಮ

  • ಉತ್ಪಾದನಾ ವಲಯ, ಸಂಶೋಧನೆ ಮತ್ತು ಅಭಿವೃದ್ಧಿ ವಲಯಗಳಲ್ಲಿ ಆತ್ಮನಿರ್ಭರ ಭಾರತ ಉಪಕ್ರಮದ ಪ್ರಯೋಜನಗಳ ವಿಸ್ತರಣೆ.
  • ಪ್ರೊಡಕ್ಷನ್​-ಲಿಂಕ್ಡ್ ಇನ್​ಸೆಂಟಿವ್ಸ್ ಮುಂತಾದ ಯೋಜನೆಗಳ ಪ್ರಯೋಜನ ಎಲ್ಲ ವಲಯದ ಕೈಗಾರಿಕೆಗಳಿಗೂ ಇರಲಿ.
  • ಸ್ಥಳೀಯ ಕೈಗಾರಿಕೆಗಳು, ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ಕ್ರಮ
  • ಭಾರತವೇ ದೊಡ್ಡ ಮಾರುಕಟ್ಟೆ ಆಗಿರುವ ಕಾರಣ ಇಲ್ಲಿನ ಬೇಡಿಕೆಗಳು ಇಲ್ಲೇ ಪೂರೈಕೆ ಆಗುವಂಥ ಯೋಜನೆಗಳು.

ಪೇಪರ್​ಲೆಸ್ ಬಜೆಟ್: ಸತತ ಮೂರನೇ ವರ್ಷ ಪೇಪರ್​ಲೆಸ್ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಇದೇ ಮೊದಲ ಸಲ, ಸಾಂಪ್ರದಾಯಿಕ ಹಲ್ವಾ ಸೆರಮನಿಯನ್ನು ರದ್ದುಗೊಳಿಸಲಾಗಿದೆ. ಬಜೆಟ್ ಮುದ್ರಣಕ್ಕೆ ಹೋಗುವ ಮೊದಲು ನಾರ್ತ್ ಬ್ಲಾಕ್​ನಲ್ಲಿ ಈ ಸಂಪ್ರದಾಯ ನೆರವೇರುತ್ತದೆ. ವಿತ್ತ ಸಚಿವರು ಮತ್ತು ಹಣಕಾಸು ಇಲಾಖೆಯ ಪ್ರಮುಖರು, ಬಜೆಟ್ ಸಿದ್ಧಪಡಿಸುವ ಉದ್ಯೋಗಿಗಳು ಇದರಲ್ಲಿ ಭಾಗವಹಿಸುತ್ತಾರೆ. ಆದರೆ ಈ ಸಲ ಬಜೆಟ್ ಸಿದ್ಧಪಡಿಸುವ ಉದ್ಯೋಗಿಗಳಿಗೆ ಅವರು ಇರುವಲ್ಲಿಯೇ ಸಿಹಿ ಹಂಚಲು ಸರ್ಕಾರ ತೀರ್ವನಿಸಿದೆ.

ಆರೋಗ್ಯ ಕ್ಷೇತ್ರ

  • ಆರೋಗ್ಯಸೇವಾ ಮೂಲಸೌಕರ್ಯದ ಚೌಕಟ್ಟು ಇನ್ನಷ್ಟು ವಿಸ್ತರಣೆ.
  • ಆರೋಗ್ಯ ಸೇವೆಯ ಎಲ್ಲ ವಿಭಾಗ ಗಳಿಗೂ ಹೂಡಿಕೆ ಅಗತ್ಯ.
  • ಆರೋಗ್ಯ ಕ್ಷೇತ್ರದಲ್ಲಿ ಜಿಎಸ್​ಟಿ ಪರಿವರ್ತನೆಯ ಪ್ರಯೋಜನ ಪಡೆಯಲು ಕ್ರಮ.
  • ಆರೋಗ್ಯ ಕ್ಷೇತ್ರದ ಸಮಗ್ರ ಸುಧಾರಣೆಗೆ ಪ್ರಮುಖ ವಿತ್ತೀಯ ಕ್ರಮಗಳು.

ಫಾರ್ಮಾ ಇಂಡಸ್ಟ್ರಿ

  • ಕೋವಿಡ್-19 ಸಂಕಷ್ಟ ಕಾಲದಲ್ಲಿ ವೈರಾಣು ಅಲೆಗಳ ವಿರುದ್ಧ ಭಾರತ ಸಮರ ಸಾರಿದೆ. ಈ ಹೊಸ ಸವಾಲಿನ ವಿರುದ್ಧ ಹೋರಾಡಲು ಆರೋಗ್ಯ ಸೇವಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ.
  • ಔಷಧೋಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹಧನ.
  • ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ವಹಿವಾಟುಗಳನ್ನು ಸರಾಗಗೊಳಿಸಲು ನಿಯಮ ಸಡಿಲಿಕೆ.
  • ನವೋನ್ವೇಷಣೆ ಮತ್ತು ಉದ್ಯಮದ ಸರಾಗ ವಹಿವಾಟಿಗಾಗಿ ಈಸ್ ಆಫ್ ಡೂಯಿಂಗ್.

ಫಿನ್​ಟೆಕ್ ಕಂಪನಿಗಳು

  • ಸಂಕಷ್ಟದ ಸಂದರ್ಭದಲ್ಲಿ ಎಂಎಸ್​ಎಂಇಗಳಿಗಾಗಿ ಪರಿಚಯಿಸಿದ ಯೋಜನೆಗಳ ವಿಸ್ತರಣೆ.
  • ಎಂಎಸ್​ಎಂಇಗಳ ಬಲವರ್ಧನೆಗಾಗಿ ಬಂಡವಾಳ ಹೂಡಿಕೆಗೆ ಅವಕಾಶ.
  • ಫಿನ್​ಟೆಕ್ ಸೆಕ್ಟರ್​ನ ಪ್ರಗತಿಗಾಗಿ ಡಿಜಿಟಲೀಕರಣ, ನವೋನ್ವೇಷಣೆಗೆ ಉತ್ತೇಜನ.
  • ಬ್ಯಾಂಕುಗಳು ಮತ್ತು ಫಿನ್​ಟೆಕ್ ನವೋದ್ಯಮಗಳ ನಡುವೆ ಪಾಲುದಾರಿಕೆ ಹೆಚ್ಚಳಕ್ಕೆ ಬೆಂಬಲ.

ಆಟೊಮೊಬೈಲ್

  • ಹಳೆ ವಾಹನ ಗುಜರಿ ನೀತಿಗೆ ಪೂರಕ ಕ್ರಮಗಳು ಮತ್ತು ಹೊಸ ವಿದ್ಯುತ್ ಚಾಲಿತ ವಾಹನಗಳ ಮೂಲಸೌಕರ್ಯಕ್ಕೆ ಆದ್ಯತೆ.
  • ವಿದ್ಯುತ್ ವಾಹನ ಖರೀದಿಗೆ ಇನ್ನಷ್ಟು ಉತ್ತೇಜನ, ಇನ್​ಸೆಂಟಿವ್ಸ್ ಮತ್ತು ಮೂಲಸೌಕರ್ಯ ನೀಡಿಕೆ.
  • ವಿದ್ಯುತ್ ವಾಹನ ಉತ್ಪಾದನೆಗೆ ಇನ್ನಷ್ಟು ಬೆಂಬಲ, ಉತ್ತೇಜನಕ್ರಮ.
  • 2070ರ ವೇಳೆಗೆ ನೆಟ್ ಜೀರೋ ಕಾರ್ಬನ್ ಎಮಿಷನ್ ಸಾಧಿಸಲು ಈಗಲೇ ಬುನಾದಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net