TVK Vijay - ವಿಜಯ್ ಗೆಲುವಿನ ಹಾದಿಯ ಕುರಿತ Exclusive ವರದಿ

ಟಿವಿಕೆ ವಿಜಯ್
ಟಿವಿಕೆ ವಿಜಯ್
Published on
TVK VIjay -
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಹೊಸ ಪಕ್ಷ ಕಟ್ಟಿ, ಅದನ್ನು ಮತ್ತು ಅದರ ಸಿದ್ದಾಂತವನ್ನು ಜನರಿಗೆ ತಲುಪಿಸಿ, ಆಡಳಿತ ಚುಕ್ಕಾಣಿ ಹಿಡಿಯುವುದು ಅಸಾಧ್ಯ. ಆದರೆ, ಸಿನಿಮಾದಲ್ಲಿ ನಾಯಕ ಅಸಾಧ್ಯವಾದುದನ್ನೇ ಸಾಧಿಸಿ ತೋರಿಸುವಂತೆಯೇ, ನಿಜ ಜೀವನದಲ್ಲೂ ನಾಯಕ ನಟ ಜೋಸೆಫ್​ ವಿಜಯ್​ ಸಾಧಿಸಿದ್ದಾರೆ. ತಮಿಳುನಾಡು ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ), ಎಐಎಡಿಂಕೆ (ಆಲ್​ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

15 ವರ್ಷಗಳ ಶ್ರಮ

ನಟ ವಿಜಯ್​ ಏಕಾಏಕಿ ಬಂದು ಡಿಎಂಕೆ, ಎಐಎಡಿಎಂಕೆ ಕೋಟೆಗಳನ್ನು ಒಡೆದು ಉರುಳಿಸಲಿಲ್ಲ. ಬದಲಾಗಿ ಅವರ ಈ ಗೆಲುವಿನ ಹಿಂದೆ 15 ವರ್ಷಗಳ ಶ್ರಮವಿದೆ. ಹೌದು, 2009ರಲ್ಲಿಯೇ ವಿಜಯ್​ ಮಕ್ಕಳ್​ ಇಯಕ್ಕಮ್​ ಮೂಲಕ ಅವರು ರಾಜ್ಯಾದ್ಯಂತ ತಮ್ಮ ಹೆಸರಿನಲ್ಲಿರುವ ಸಾವಿರಾರು ಫ್ಯಾನ್​​ ಕ್ಲಬ್​ಗಳನ್ನು ಒಂದೆಡೆ ಸೇರಿಸಿದರು. ಬಳಿಕ 2011ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಂಕೆಗೆ ಬೆಂಬಲ ಸೂಚಿಸಿದ್ದರು. ಕ್ರಮೇಣ 2021ರಲ್ಲಿ 169 ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ 115ರಲ್ಲಿ ಗೆಲುವು ಸಾಧಿಸಿದ್ದರು. ಹೀಗೆ ಫ್ಯಾನ್​ ಕ್ಲಬ್​ಗಳು, ಸ್ಥಳಿಯ ಸಂಸ್ಥೆ ಚುನಾವಣೆಗಳ ಮೂಲಕ ಬೇರು ಮಟ್ಟದಲ್ಲಿ ಗಟ್ಟಿಯಾಗಿ ನೆಲೆಯೂರತೊಡಗಿದರು. ಕ್ರಮೇಣ ರಾಜಕಾರಣದ ಬಗ್ಗೆ ಮಾತನಾಡತೊಡಗಿದ ವಿಜಯ್​, 2024ರ ಫೆ. 2ರಂದು ಟಿವಿಕೆ ಪಕ್ಷ ಸ್ಥಾಪಿಸಿ, 2026 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು. ಬಳಿಕ ಅವರು ನಟಿಸುತ್ತಿರುವ 69ನೇ ಸಿನಿಮಾ "ಜನನಾಯಗನ್​' ಕೊನೆಯ ಚಿತ್ರವೆಂದು ಅನೌನ್ಸ್​ ಮಾಡಿ, ರಾಜಕೀಯದಲ್ಲಿ ಸಕ್ರಿಯರಾದರು.

ವಿಜಯ ಯಾತ್ರೆ

* ಎಂಜಿಆರ್​ ಮತ್ತು ಜಯಲಲಿತಾ ಬಳಿಕ ನಟ ವಿಜಯ್​ ಸ್ಟಾರ್​ ಪವರ್​ ತಮಿಳುನಾಡು ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ
* ಹಲವು ವರ್ಷಗಳಿಂದ ಬೇರು ಮಟ್ಟದಲ್ಲಿ ಫ್ಯಾನ್​ ಕ್ಲಬ್​ಗಳ ಮೂಲಕ ಹಳ್ಳಿ&ಹಳ್ಳಿಗಳನ್ನೂ ತಲುಪಿದ್ದು ಅವರಿಗೆ ಪ್ಲಸ್​
* ಸಾಮಾಜಿಕ ಜಾಲತಾಣದ ಮೂಲಕ ಹೊಸ ಓಟರ್​ಗಳನ್ನೂ ಸೆಳೆದಿದ್ದಾರೆ
* ಕಳೆದ ಆರು ದಶಕಗಳಿಂದ ಡಿಎಂಕೆ ಮತ್ತು ಎಐಎಡಿಂಕೆ ಎರಡೇ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುತ್ತ ಬಂದಿರುವ ತಮಿಳು ನಾಡು ಜನರಿಗೆ ಎರಡೂ ಪಕ್ಷಗಳ ಮೇಲೆ ಮುನಿಸು
* ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೇ, ಅಭಿಮಾನಿಗಳನ್ನು ನಂಬಿದ್ದು
* ಮತ್ತೆ ರಾಷ್ಟ್ರೀಯ ಪಕ್ಷಗಳನ್ನು ದೂರವಿಡಲು ತಮಿಳು ನಾಡು ಜನರ ನಿರ್ಧಾರ
* ವಾರ್ಷಿಕ ಆರು ಎಲ್​ಪಿಜಿ ಸಿಲಿಂಡರ್​ ಉಚಿತ, ಮಹಿಳೆಯರಿಗೆ ಪ್ರತಿ ತಿಂಗಳು ₹2,500, ಮದುವೆಯಾಗಲಿರುವ ಬಡ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ಪಡೆಯಲು ಪ್ರತಿ ತಿಂಗಳು ₹10 ಸಾವಿರ, ಪದವಿ ಪಡೆದಿರುವ ನಿರುದ್ಯೋಗಿ ಯುವಕರಿಗೆ ₹4,000, ಐಟಿಐ ಓದಿದವರಿಗೆ ₹2,500, 5 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ಭರವಸೆ, ಕಬ್ಬು ಸೇರಿ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಸೇರಿ ಬಂಪರ್​ ಪ್ರಣಾಳಿಕೆ ಕೂಡ ಈ ಬಾರಿ ಮತದಾರರು ಟಿವಿಕೆ ಪರ ನಿಲ್ಲಲು ಕಾರಣವಾಗಿದೆ.

ಸವಾಲುಗಳನ್ನು ಮೆಟ್ಟಿ ನಿಂತ ವಿಜಯ್​

* ನಟ ವಿಜಯ್​ ರಾಜಕಾರಣದಲ್ಲಿ ಸಕ್ರಿಯರಾದ ಬಳಿಕ ಸಾಲು ಸಾಲು ಸಮಸ್ಯೆಗಳನ್ನು ಎದುರಿಸಬೇಕಾಯಿತು. 2025ರ ಸೆಪ್ಟೆಂಬರ್​ನಲ್ಲಿ ವಿಜಯ್​ ಕರೂರ್​ನಲ್ಲಿ ನಡೆಸಿದ ಸಾರ್ವಜನಿಕ ಸಮಾವೇಶದಲ್ಲಿ ಲಾಂತರ ಜನ ಸೇರಿ ಕಾಲ್ತುಳಿತ ಉಂಟಾಗಿ 41 ಜನ ಸಾವಿಗೀಡಾಗಿ, 80 ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಟನೆ ಅವರು ನಂತರದ ರ್ಯಾಲಿ ಮತ್ತು ಸಮಾವೇಶಗಳಿಗೆ ಹಿನ್ನಡೆ ಉಂಟು ಮಾಡಿತ್ತು.
* ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಕ್ಕೆ ಬಂದ ಹಲವು ತಮಿಳು ಸ್ಟಾರ್​ಗಳು ಯಾವುದೇ ಪರಿಣಾಮ ಬೀರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಜಯ್​ಗೂ ತಮಿಳು ನಾಡು ರಾಜಕೀಯದಲ್ಲಿ ಉಳಿಯುವುದು, ಬೆಳೆಯವುದು ಕಷ್ಟ ಎನ್ನಲಾಗಿತ್ತು.
* ಚುನಾವಣೆಗೂ ಕೆಲ ತಿಂಗಳು ಮುನ್ನ ಅರ್ಥಾತ್​ ಕಳೆದ ೆಬ್ರವರಿಯಲ್ಲಿ ನಟ ವಿಜಯ್​ ಪತ್ನಿ ಸಂಗೀತಾ, ವಿಚ್ಛೇದನ ಅರ್ಜಿ ಸಲ್ಲಿಸಿದ್ದು. ನಟಿ ತ್ರಿಷಾ ಜತೆ ಹಲವು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜತೆಯಲ್ಲಿ ಕಾಣಿಸಿಕೊಂಡ ನಟ ಜಾಲತಾಣದಲ್ಲಿ ಚರ್ಚೆಗೀಡಾಗಿದ್ದರು.
* ಅವರ ಕೊನೆಯ ಸಿನಿಮಾ "ಜನನಾಯಗನ್​' ಬಿಡುಗಡೆಗೆ ಸೆನ್ಸಾರ್​ ಬೋರ್ಡ್​ನಿಂದ ತೊಡಕು. ಕೋರ್ಟ್​ ಮೆಟ್ಟಿಲೇರಿದರೂ ಬಗೆಹರಿಯದ ಸಮಸ್ಯೆ.

ತಮಿಳು ನಾಡು - ತಾರೆಯರೇ ಗಾಡು!

ಸಿನಿಮಾ ಮತ್ತು ಸಿನಿಮಾ ತಾರೆಯರು ಎಂದರೆ ಬೇರೆಲ್ಲ ರಾಜ್ಯಗಳಿಗೆ ಹೋಲಿಸಿದರೆ, ತಮಿಳುನಾಡಿನ ಜನರಿಗೆ ಕೊಂಚ ಹೆಚ್ಚೇ ಅಭಿಮಾನ, ಪ್ರೀತಿ. ಅದಕ್ಕೆ ಸಾ ಕಳೆದ ಆರು ದಶಕಗಳ ರಾಜ್ಯದ ರಾಜಕೀಯ. ಹೌದು, 1952ರಿಂದ 2026ರವರೆಗೆ ತಮಿಳು ನಾಡಿನಲ್ಲಿ 17 ಬಾರಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಆದರೆ, ಮೊದಲ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್​ ಗೆದ್ದಿದ್ದು ಹೊರತುಪಡಿಸಿದರೆ, 1967ರಿಂದ 2021ರವರೆಗೆ 13ರಲ್ಲಿ ಡಿಎಂಕೆ ಮತ್ತು ಎಐಎಡಿಂಕೆ ಪಕ್ಷಗಳು ಗೆದ್ದಿವೆ. ಆರು ಬಾರಿ ಡಿಎಂಕೆ ಹಾಗೂ ಏಳು ಬಾರಿ ಎಐಎಡಿಂಕೆ ರಾಜ್ಯದ ಚುಕ್ಕಾಣಿ ಹಿಡಿದಿವೆ. ವಿಶೇಷ ಅಂದರೆ ಈ ಎರಡು ಪಕ್ಷಗಳಿಗೂ ಸಿನಿಮಾ ತಾರೆಯರೇ ಬೆನ್ನೆಲುಬು. ಡಿಎಂಕೆ ಸಂಸ್ಥಾಪಕ ಸಿ.ಎನ್​. ಅಣ್ಣಾದುರೈ ಕೂಡ ತಮಿಳು ಚಿತ್ರರಂಗದವರೇ. ಹಾಗೇ ಸುಮಾರು 75ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದ, 25ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸಿದ್ದ ಎಂ. ಕರುಣಾನಿಧಿ ಡಿಎಂಕೆಯಲ್ಲಿ ಪ್ರಾರಂಭದಿಂದಲೂ ಸಕ್ರಿಯರಾಗಿದ್ದರು. ಸಿ.ಎನ್​. ಅಣ್ಣಾದುರೈ ವಿಧಿವಶರಾದ ಬಳಿಕ 1969ರಲ್ಲಿ ಪಕ್ಷದ ಚುಕ್ಕಾಣಿ ಹಿಡಿದ ಅವರು 2018ರವರೆಗೂ ಅಧ್ಯಕ್ಷರಾಗಿ ಮುಂದುವರಿದರು. ಜತೆಗೆ ಐದು ಬಾರಿ ಸಿಎಂ ಕೂಡ ಆಗಿದ್ದರು. ಇನ್ನು ಡಿಎಂಕೆಯಲ್ಲಿ ಸಕ್ರಿಯರಾಗಿದ್ದ ಕಾಲಿವುಡ್​ ಸೂಪರ್​ಸ್ಟಾರ್​ ಎಂ.ಜಿ. ರಾಮಚಂದ್ರನ್​, ಪಕ್ಷದ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ 1972ರಲ್ಲಿ ಪಾರ್ಟಿಯಿಂದ ಹೊರನಡೆದರು. ಅದೇ ವರ್ಷ ಎಐಎಡಿಎಂಕೆ ಸ್ಥಾಪಿಸಿದ ಅವರು, 1977ರಲ್ಲಿ ಮೊದಲ ಬಾರಿಗೆ ತಮಿಳು ನಾಡಿನಲ್ಲಿ ಭರ್ಜರಿ ಜಯಭೇರಿ ಕೂಡ ಬಾರಿಸಿದರು. 1987ರಲ್ಲಿ ವಿಧಿವಶರಾಗುವವರೆಗೂ ಸತತ ಮೂರು ಬಾರಿ ಸಿಎಂ ಆದ ಖ್ಯಾತಿ ಅವರಿಗೆ ಸಲ್ಲುತ್ತದೆ. ಆ ಬಳಿಕ ಎಐಎಡಿಎಂಕೆ ಕಥೆ ಮುಗಿದೇ ಹೋಯಿತು ಎನ್ನಲಾಗಿತ್ತಾದರೂ, ನಟಿ ಜಯಲಲಿತಾ ಹಾಗಾಗದಂತೆ ನೋಡಿಕೊಂಡರು. ರಾಜ್ಯಾದ್ಯಂತ ಓಡಾಡಿ, ಕಾರ್ಯಕರ್ತರನ್ನು ಸಂಟಿಸಿದ ಅವರು 1991ರಲ್ಲಿ ಮುಖ್ಯಮಂತ್ರಿ ಗಾದಿಯೇರಿದರು. ನಂತರ 2001ರಿಂದ 2016ರವರೆಗೆ ನಾಲ್ಕು ಚುನಾವಣೆಗಳಲ್ಲಿ, ಮೂರು ಬಾರಿ ಎಐಎಡಿಎಂಕೆ ಗೆಲುವು ಸಾಧಿಸಿದರೂ, ಭ್ರಷ್ಟಾಚಾರ ಆರೋಪದಿಂದಾಗಿ ಪದೇ ಪದೆ ಜಯಲಲಿತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಅವರಿಗೆ ಆಗದ್ದನ್ನು, ಇವರು ಮಾಡಿದರು!

ಕರುಣಾನಿಧಿ, ಎಂಜಿಆರ್​, ಜಯಲಲಿತಾಗಷ್ಟೇ ತಮಿಳುನಾಡು ರಾಜಕೀಯ ಸೀಮಿತವಾಗಿಲ್ಲ. ಬದಲಾಗಿ 2017ರಲ್ಲಿ ಸೂಪರ್​ಸ್ಟಾರ್​ ರಜಿನಿಕಾಂತ್​ 2021ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ, 2020ರಲ್ಲಿ ಅವರಿಗೆ ಅನಾರೋಗ್ಯ ಸಂಭವಿಸಿ, ರಾಜಕಾರಣದಿಂದ ಹಿಂದೆ ಸರಿದರು. ಹಾಗೇ 2018ರಲ್ಲಿ ನಟ ಕಮಲ್​ ಹಾಸನ್​ ಎಂಐಎಂ (ಮಕ್ಕಳ್​ ನಿದಿ ಮೈಯಾಮ್​) ಪಕ್ಷ ಸ್ಥಾಪಿಸಿದರೂ, ರಾಜಕಾರಣದಲ್ಲಿ ಸಕ್ರಿಯರಾಗಲಿಲ್ಲ. ಹೀಗಾಗಿ ರಾಜ್ಯಸಭಾ ಸದಸ್ಯತ್ವಕ್ಕಷ್ಟೇ ಅವರು ಸೀಮಿತರಾದರು. ಇನ್ನು ನಟ, ನಿರ್ದೇಶಕ ಸೆಬಾಸ್ಟಿಯನ್​ ಸೈಮನ್​ (ಸೀಮನ್​) 2010ರಲ್ಲಿ ಎನ್​ಟಿಕೆ (ನಾಮ್​ ತಮಿಳರ್​ ಕಚ್ಛಿ), ಹಾಸ್ಯ ನಟ ಕರುಣಾಸ್​ (ಮುಕ್ಕುಳಾದುರ್​ ಪುಲಿಪಾದೈ), ಶರತ್​ ಕುಮಾರ್​ (ಎಐಎಸ್​ಎಮ್​ಕೆ - ಆಲ್​ ಇಂಡಿಯಾ ಸಮತುವ ಮಕ್ಕಳ್​ ಕಚ್ಛಿ), ವಿಜಯಕಾಂತ್​ ಸೇರಿ ಕೆಲ ತಾರೆಯರು ತಾವೇ ಪಕ್ಷಗಳನ್ನು ಪ್ರಾರಂಭಿಸಿ, ಸಕ್ರಿಯ ರಾಜಕಾರಣಕ್ಕೆ ಬಂದರೂ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ವಿಜಯ್​ ರಾಜಕಾರಣದಲ್ಲೂ ವಿಜಯ ಸಾಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net