

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) 2022ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯ (ಸಿಎಸ್ಇ) ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 933 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಅಗ್ರ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಿದ್ದು, ಕರ್ನಾಟಕದ ಟಾಪರ್ ಕೂಡ ಮಹಿಳೆಯೇ ಆಗಿದ್ದಾರೆ.
ಪ್ರಸ್ತುತ ಸೊಲ್ಲಾಪುರದಲ್ಲಿ ಭಾರತೀಯ ರೈಲ್ವೆ ಸೇವೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಬನಶಂಕರಿಯ ಭಾವನಾ ಎಚ್.ಎಸ್. 55ನೇ ರ್ಯಾಂಕ್ ಪಡೆದು ರಾಜ್ಯದ ಅಭ್ಯರ್ಥಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಮೌಂಟ್ ಕಾರ್ವೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯು ಹಾಗೂ ಯಲಹಂಕದ ವೆಂಕಟೇಶ್ವರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಭಾವನಾ 2018ರಲ್ಲಿ ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗಿದ್ದರು. ಆದರೂ ಐಎಎಸ್ ಗುರಿಯೊಂದಿಗೆ ಅಧ್ಯಯನ ಮುಂದುವರಿಸಿದ್ದರು. ರಾಜ್ಯದ 30ಕ್ಕೂ ಅಧಿಕ ಜನ ಈ ಬಾರಿ ಯುಪಿಎಸ್ಸಿ ಹುದ್ದೆ ಪಡೆದಿದ್ದಾರೆ. ಉತ್ತರಪ್ರದೇಶದ ಇಶಿತಾ ಕಿಶೋರ್ ದೇಶಕ್ಕೇ ಮೊದಲ ರ್ಯಾಂಕ್ ಗಳಿಸಿದ್ದಾರೆ. 2ನೇ ರ್ಯಾಂಕ್ ಪಡೆದಿರುವ ಗರಿಮಾ ಲೋಹಿಯಾ ಬೆಂಗಳೂರಿನ ಯೂನಿವರ್ಸಲ್ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದಿದ್ದರು.
ತರಬೇತಿ ಪಡೆದ ಮಾತ್ರಕ್ಕೆ ಯುಪಿಎಸ್ಸಿ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲ. ಸ್ಥಿರತೆ, ತಾಳ್ಮೆ ಮತ್ತು ಪರಿಶ್ರಮದಿಂದ ಸಾಧಿಸಬಹುದು. 2018ರಲ್ಲಿ 314ನೇ ರ‌್ಯಾಂಕ್ ಬಂದಿತ್ತು. ಸದ್ಯ ಸೊಲ್ಲಾಪುರದಲ್ಲಿ ಐಆರ್ಎಸ್ ಸೇವೆಯಲ್ಲಿದ್ದೇನೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಂತರ 6ನೇ ಪ್ರಯತ್ನದಲ್ಲಿ 55ನೇ ರ್ಯಾಂಕ್ ಬಂದಿದೆ. ಸೇವೆಯಲ್ಲಿದ್ದರಿಂದ ಎಲ್ಲಿಯೂ ಕೋಚಿಂಗ್ ಹೋಗಿಲ್ಲ. ಕೆಲಸದಲ್ಲಿದ್ದುಕೊಂಡು ಬ್ಯಾಚ್ವೆುೕಟ್ ಜತೆ ರ್ಚಚಿಸಿ ಅಧ್ಯಯನ ನಡೆಸಿದ್ದೆ. | ಭಾವನಾ ಎಚ್.ಎಸ್., 55ನೇ ರ‌್ಯಾಂಕ್, ರಾಜ್ಯದ ಟಾಪರ್ 2021ರಲ್ಲಿ 255ನೇ ರ್ಯಾಂಕ್ ಪಡೆದು ಐಆರ್ಎಸ್ ತರಬೇತಿಯಲ್ಲಿದ್ದೇನೆ. ಈಗ 197ನೇ ರ‌್ಯಾಂಕ್ ಬಂದಿರುವುದು ತುಂಬಾ ಖುಷಿಯಾಗುತ್ತಿದೆ. ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಈಗ ನನಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಮೂಲತಃ ಮೈಸೂರಿನವರಾಗಿದ್ದು, ಶಾಲೆ- ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿದ್ದೇನೆ. | ಸೂರಜ್ ಡಿ. 197ನೇ ರ್ಯಾಂಕ್, ಯುಪಿಎಸ್ಸಿ ಸಾಧಕ ಕನ್ನಡಿಗರು
ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು ಎನ್ನುವವರಿಗೆ ಕಠಿಣ ಶ್ರಮ, ದೃಢ ಸಂಕಲ್ಪ ಮುಖ್ಯವಾಗಿರಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಬೇಕು. ಪ್ರತಿಯೊಂದು ವಿಷಯದ ಮೇಲೆ ಹಿಡಿತ ಸಾಧಿಸುವಷ್ಟು ಅಧ್ಯಯನ ಮಾಡಬೇಕು. | ಶ್ರುತಿ ಯರಗಟ್ಟಿ
ತಂದೆ, ತಾಯಿಯ ಸ್ಪೂರ್ತಿಯಿಂದ 4ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದೇನೆ. ಎರಡು ಗಂಟೆ ಓದಿದರೆ ಇನ್ನೆರಡು ಗಂಟೆ ಟಿವಿ ನೋಡುವುದು ಹಾಗೂ ಆಟ ಆಡುವುದರಲ್ಲಿ ಕಳೆಯುತ್ತಿದ್ದೆ. ನಿರಂತರವಾಗಿ ಓದಿದರೆ ತಲೆಯಲ್ಲಿ ಉಳಿಯುವುದಿಲ್ಲ ಎಂಬ ತಂದೆ ಸಲಹೆಯನ್ನು ಪಾಲಿಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ. | ಕೆ. ಸೌರಭ್
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕು ದೊಡ್ಡಬಾದಗೆರೆ ಗ್ರಾಮದ ಆರ್. ಚೆಲುವರಾಜು, ಬಡ ಕುಟುಂಬದ ಪ್ರತಿಭೆ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಇವರು ಪ್ರಸ್ತುತ ಸಹಕಾರ ಇಲಾಖೆ ಸಹಾಯಕ ನಿರ್ದೇಶಕರಾಗಿ ತರಬೇತಿ ಪಡೆಯುತ್ತಿದ್ದರು.ಜತೆಯಲ್ಲಿಯೇ ಯುಪಿಎಸ್ಸಿ ಪರೀಕ್ಷೆಗೂ ತಯಾರಿ ನಡೆಸಿದ್ದರು.
ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಎಲ್ಲ ರೀತಿಯ ಸವಲತ್ತುಗಳು ಅವಶ್ಯಕ ಎಂಬ ಭಾವನೆ ಬೇಡ, ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಿದೆ. | ಎಂ. ಪೂಜಾ
ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಯುಪಿಎಸ್ಸಿ ಪರೀಕ್ಷೆ ಕಡೆಗೆ ಗಮನ ಹರಿಸಿದ್ದರು. ಮೊದಲ ಪ್ರಯತ್ನದಲ್ಲಿ ವಿಫಲರಾದರೂ ಬೆಂಗಳೂರಿನಲ್ಲಿ ತರಬೇತಿ ಪಡೆದು ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.
ಸಾರ್ವ ಜನಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡ ಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಹಿರಿಯ ಅಧಿಕಾರಿಯಾಗಲೇಬೇಕೆಂಬ ಗುರಿಯೊಂದಿಗೆ ತಯಾರಿ ನಡೆಸಿದ್ದೆ. ಅದರಲ್ಲಿ ಯಶಸ್ಸು ಸಿಕ್ಕಿದ್ದರಿಂದ ಸಮಾಧಾನವಾಗಿದೆ. | ಐ.ಎನ್.ಮೇಘನಾ
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಸತೀಶ ಸೋಮಜಾಳ ಯುಪಿಎಸ್ಸಿ ಪರೀಕ್ಷೆಯಲ್ಲಿ 588ನೇ ರ್ಯಾಂಕ್ ಪಡೆದಿದ್ದು, ಕುಟುಂಬಸ್ಥರಿಗೆ ಸ್ವರ್ಗವೇ ಧರೆಗಿಳಿದಂತಾಗಿದೆ. ದೇವಣಗಾಂವದಲ್ಲಿ ಪೂರ್ವ ಪ್ರಾಥಮಿಕ (1ರಿಂದ 5), 5 ರಿಂದ ದ್ವಿತೀಯ ಪಿಯುಸಿವರೆಗೆ ಸೈನಿಕ ಶಾಲೆಯಲ್ಲಿ ಓದಿದ್ದು, ಸೈನಿಕ ಶಾಲೆ ವಾತಾವರಣವೇ ಯುಪಿಎಸ್ಸಿ ತೇರ್ಗಡೆಯಾಗಲು ಪ್ರೇರಣೆ ಎನ್ನುತ್ತಾರೆ ಸತೀಶ. ಇಂಜಿನಿಯರಿಂಗ್ ಪದವಿ ಪೂರೈಸಿದ ಸತೀಶ, 4ನೇ ಪ್ರಯತ್ನದಲ್ಲಿ 588ನೇ ರ್ಯಾಂಕ್ ಸಾಧನೆ ಮಾಡಿದ್ದು, ಇನ್ನೂ ರ್ಯಾಂಕ್ ಉತ್ತಮಪಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸತತ ಪ್ರಯತ್ನ, ಗಂಭೀರ ಓದು, ತಾಳ್ಮೆಯೇ ಸಾಧನೆಗೆ ರಹದಾರಿ. ಪ್ರತಿ ದಿನ ಎಂಟು ಗಂಟೆಗಳ ಕಾಲ ಅಧ್ಯಯನಶೀಲನಾಗಿರುತ್ತಿದ್ದೆ. ಒಂದು ವರ್ಷ ದೆಹಲಿಯಲ್ಲಿ ತರಬೇತಿ ಪಡೆದೆ. ಬಡತನದಲ್ಲೂ ಬ್ಯಾಂಕ್ ಲೋನ್ ಪಡೆದು ಶಿಕ್ಷಣ ಪೂರೈಸಿದೆ. ಈ ಸಾಧನೆಯನ್ನು ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ. | ಸತೀಶ ಶ್ರೀಶೈಲ ಸೋಮಜಾಳ
ಮೊದಲ ಯತ್ನದಲ್ಲಿ ತೇರ್ಗಡೆ ಸಾಧ್ಯವಾಗಿರಲಿಲ್ಲ. 2 ನೇ ಬಾರಿಗೆ ಯಶಸ್ವಿ ಯಾಗಿರುವುದು ಸಂತೋಷ ತಂದಿದೆ. ನನ್ನ ಸಾಧನೆಗೆ ತಂದೆ-ತಾಯಿಯೇ ಕಾರಣ. ತಂದೆ ಮೊದಲಿನಿಂದಲೂ ಉನ್ನತ ಅಧಿಕಾರಿಗಳಿಗೆ ಇರುವ ಗೌರವ ಮತ್ತು ಜವಾಬ್ದಾರಿ ತಿಳಿಸಿಕೊಡುತ್ತಿದ್ದರು. ಬಡವರ ಸೇವೆ ಮಾಡುವ ಹಂಬಲ ನನ್ನಲೂ ಇದೆ. | ದಾಮಿನಿ ಎಂ.ದಾಸ್
ಯುವಕರು ಕನಸು ಕಾಣಬೇಕು, ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು. ತಂದೆ-ತಾಯಿಗೆ ಹೊರೆ ಆಗಬಾರದು. ನಾನು ಕೆಲಸ ಮಾಡುತ್ತಲೇ ಓದಿದೆ. ಈಗ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಕ್ಕೆ ಖುಷಿಯಾಗಿದೆ. | ಸಿದ್ದಲಿಂಗಪ್ಪ ಪೂಜಾರ
ಹಾಸನ ಜಿಲ್ಲೆಯ ಅರಸೀಕೆರೆಯ ಬಿ.ಎಸ್. ಧನುಷ್ಕುಮಾರ್ 501ನೇ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಬಿಎಂಎನ್ಐಟಿ ಕಾಲೇಜಿನಲ್ಲಿ ಇಂಜಿನಿಯರ್ ಸಿಎಸ್ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆ ಬಿಟ್ಟು ಹೋದ ಬಳಿಕ ತಾಯಿ ಚೇತನಾ ಅವರ ಆರೈಕೆಯಲ್ಲಿ ಬೆಳೆದ ಧನುಷ್, 4 ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದು ಸಂದರ್ಶನದ ಹಂತದವರೆಗೂ ಹೋಗಿ ವಿಫಲರಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಸೇವೆಯ ಕಡೆಗೆ ಆಕರ್ಷಣೆ ಹೆಚ್ಚಾಯಿತು. ಹಾಗಾಗಿ ವೈದ್ಯ ವೃತ್ತಿಯ ನಡುವೆಯೂ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಪ್ರಾರಂಭಿಸಿದೆ. 3ನೇ ಪ್ರಯತ್ನದಲ್ಲಿ ತೇರ್ಗಡೆಯಾಗಿರುವುದು ಸಂತಸ ಉಂಟು ಮಾಡಿದೆ. | ಡಾ.ಜೆ. ಭಾನುಪ್ರಕಾಶ್
ನಾಗರಿಕ ಸೇವಾ ಆಯೋಗದ ಪರೀಕ್ಷೆ ಪಾಸಾದ ಎಲ್ಲ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಮತ್ತು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಇದು ರೋಮಾಂಚಕವಾದ ಸಮಯ. ಫಲಪ್ರದ ಮತ್ತು ತೃಪ್ತಿದಾಯಕ ವೃತ್ತಿಜೀವನಕ್ಕಾಗಿ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಬಳಿಕ ಮಣಿಪಾಲ್ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. 3ನೇ ಪ್ರಯತ್ನದಲ್ಲಿ ಯುಪಿಎಸ್ಸಿ ತೇರ್ಗಡೆಯಾಗಿರುವುದಕ್ಕೆ ಖುಷಿಯಾಗುತ್ತಿದೆ. ಐಎಎಸ್ ಮಾಡಬೇಕೆಂಬುದು ಗುರಿಯಿಂದ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡೆ. ಭೌತಿಕವಾಗಿ ತರಬೇತಿಗೆ ಹೋಗಿರಲಿಲ್ಲ. ಆನ್ಲೈನ್ನಲ್ಲಿಯೇ ತರಬೇತಿ ಪಡೆದು, ಸರಿಯಾದ ಮತ್ತು ಸೀಮಿತವಾಗಿ ಓದುತ್ತಿದ್ದೆ. | ಡಾ. ವರುಣ್ಗೌಡ, 594ನೇ ರ್ಯಾಂಕ್
ಮಂಡ್ಯ ಜಿಲ್ಲೆಯ ಮೂವರು ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಇವರೆಲ್ಲರೂ ಮಂಡ್ಯ ತಾಲೂಕಿನವರೇ ಎಂಬುದು ವಿಶೇಷ. ಮಾಚಹಳ್ಳಿ ಗ್ರಾಮದ ಎಂ.ಎಸ್.ತನ್ಮಯ್ 690ನೇ ರ್ಯಾಂಕ್ ಪಡೆದಿದ್ದು, ಪ್ರಸ್ತುತ ಹಾವೇರಿಯಲ್ಲಿ ಪ್ರೊಬೆಷನರಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸು ತ್ತಿದ್ದಾರೆ. ಹೊಳಲು ಚಂದಗಾಲು ಗ್ರಾಮದ ಸಿ.ಪಿ.ನಿಮಿಷಾಂಬ 659ನೇ ರ್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಹಳೇಬೂದನೂರು ಗ್ರಾಮದ ಎಚ್.ಪಿ.ಮನೋಜ್ 929ನೇ ರ್ಯಾಂಕ್ ಗಳಿಸಿದ್ದಾರೆ. ಇವರು ದೆಹಲಿಯ ಇಂಡಿಯನ್ ಇಂಜಿನಿಯರಿಂಗ್ ಸರ್ವೀಸ್ನಲ್ಲಿ ಸೆಂಟ್ರಲ್ ಎಲೆಕ್ಟ್ರಿಕಲ್ ಅಥಾರಿಟಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ.
ನಾಗರಿಕ ಸೇವಾ ಆಯೋಗದ ಪರೀಕ್ಷೆಗಳನ್ನು ವರ್ಷದಲ್ಲಿ ಪ್ರಾಥಮಿಕ, ಮುಖ್ಯ, ಸಂದರ್ಶನ ಎಂದು 3 ಹಂತಗಳಲ್ಲಿ ನಡೆಸಲಾಗುತ್ತದೆ. ಈಗ ಅಂತಿಮ ಹಂತದ ಫಲಿತಾಂಶ ಪ್ರಕಟವಾಗಿದ್ದು, 613 ಹುಡುಗರು, 320 ಹುಡುಗಿಯರು ಉತ್ತೀರ್ಣರಾಗಿದ್ದಾರೆ. ಶ್ರೇಣಿಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಐಎಎಸ್, ಐಪಿಎಸ್, ಆರ್ಎಫ್ಎಸ್ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗುವುದು. ಕಳೆದ ವರ್ಷ ಜೂನ್ನಲ್ಲಿ ಆಯೋಗ ಪ್ರಾಥಮಿಕ ಪರೀಕ್ಷೆ ನಡೆಸಿತ್ತು. ಆಗ 11,35,697 ಆಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ವಾಸ್ತವವಾಗಿ 5,73,735 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2022ರ ಸೆಪ್ಟೆಂಬರ್ನಲ್ಲಿ ನಡೆದ ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ 2,529 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು.
ಯಾವ ಹುದ್ದೆಗೆ ಎಷ್ಟು ಅಭ್ಯರ್ಥಿಗಳ ಆಯ್ಕೆ?: ಕೇಂದ್ರವು 1,022 ಹುದ್ದೆಗಳನ್ನು ನಾಗರಿಕ ಸೇವಾ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಸೂಚಿಸಿದ್ದು, ಇದರಲ್ಲಿ 180 ಐಎಎಸ್ ಅಧಿಕಾರಿ, 38 ಐಎಫ್ಎಸ್, 200 ಐಪಿಎಸ್, ಗ್ರೂಪ್ ಎ 473 ಹುದ್ದೆಗಳು, 173 ಗ್ರೂಪ್ ಬಿ ಹುದ್ದೆಗಳು ಒಳಗೊಂಡಿವೆ ಎಂದು ಕೇಂದ್ರ ನಾಗರಿಕ ಸೇವಾ ಆಯೋಗ ತಿಳಿಸಿದೆ.