VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ...

RSS Logo 5 MAY 20
Published on

ನವದೆಹಲಿ: ಲಾಕ್​ಡೌನ್3 ಈಗ ಚಾಲ್ತಿಯಲ್ಲಿದ್ದು, ಮೇ 17ಕ್ಕೆ ಇದು ಕೊನೆಗೊಳ್ಳಲಿದೆ. ನಂತರ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವಾಗಲೇ ದೇಶದ ಅತಿದೊಡ್ಡ ಸಾಮಾಜಿಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಮುಂದೆ ಅನುಸರಿಸಬೇಕಾದ ನೀತಿಯ ಕುರಿತ ತನ್ನ ನಿಲುವನ್ನು ಪ್ರಕಟಿಸಿದೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಅನುಸರಿಸಬೇಕಾದ ನಿಲುವಿನಲ್ಲಿ ಆರ್ಥಿಕ ಸ್ವಾವಲಂಬನೆಯ ಸ್ವದೇಶಿ ಮಾದರಿಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೆ COVID19 ಹುಟ್ಟಿನ ವಿಚಾರ ವಿಸ್ತೃತವಾಗಿ ತನಿಖೆಯಾಗಬೇಕು. ಈ ಸಾಂಕ್ರಾಮಿಕ ರೋಗ ತಡೆಯುವ ಲಾಕ್​ಡೌನ್ ನಂತರದಲ್ಲಿ ಸರ್ಕಾರವೂ ಇದೇ ಧ್ಯೇಯೋದ್ದೇಶಗಳನ್ನು ಮನದಲ್ಲಿರಿಸಿಕೊಂಡು ಕಾರ್ಯಪ್ರವೃತ್ತವಾಗಬೇಕು ಎಂದು ಆರ್​ಎಸ್​ಎಸ್​ ಬಯಸಿದೆ.

ಆರ್​ಎಸ್​ಎಸ್​ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಬುಧವಾರ ವಿದೇಶಿ ಮಾಧ್ಯಮ ಸಂಸ್ಥೆ ಪ್ರತಿನಿಧಿಗಳ ಜತೆಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂವಾದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಈ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್​ನ ಹುಟ್ಟು ಮತ್ತು ಪ್ರಸರಣದ ವಿಷಯ ಹಾಗೂ ಅದರ ಹಿಂದಿನ ಕಾರಣ ಮತ್ತು ಪರಿಣಾಮಗಳ ಕುರಿತು ಒಂದು ವಿಸ್ತೃತ ತನಿಖೆ ಆಗಬೇಕಾದ್ದು ಅವಶ್ಯ. ಇಂಥ ತುರ್ತು ಸಂದರ್ಭದಲ್ಲಿ ಇಡೀ ಜಗತ್ತು ಒಂದಾಗಿ ಕೆಲಸ ಮಾಡುವುದಕ್ಕೆ ಈ ತನಿಖೆಯ ಫಲಿತಾಂಶ ನೆರವಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಕೋವಿಡ್​ 19ರ ನಂತರದ ಆರ್ಥಿಕತೆ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ ಸ್ವದೇಶಿ ಆರ್ಥಿಕ ಮಾದರಿಯನ್ನು ಅಭಿವೃದ್ಧಿ ಪಡಿಸಲಿದೆ. ಅದು ಕೇಂದ್ರ ಬಿಂದು ಸ್ವದೇಶಿ ಆಗಿರಲಿದ್ದು, ಸ್ಥಳೀಯ ಸಂಪನ್ಮೂಲ ಮತ್ತು ಕಾರ್ಮಿಕ ವರ್ಗವನ್ನು ಬಳಸಿಕೊಂಡು ದೇಶವನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು. ಜಗತ್ತನ್ನು ಭೋಗ ದೃಷ್ಟಿಕೋನ ಆವರಿಸಿಕೊಂಡಿದ್ದು, ಅದುವೇ ಈಗ ನಮ್ಮನ್ನು ಈ ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ. ಅಲ್ಲದೆ, ಪರಿಸರವನ್ನೂ ಹಾನಿಗೀಡುಮಾಡಿದೆ. ಇಂಥ ಸನ್ನಿವೇಶದಲ್ಲಿ ಸ್ವಾವಲಂಬಿ ಆರ್ಥಿಕತೆ ಅನಿವಾರ್ಯವಾಗಲಿದೆ. ನಾವು ನಮ್ಮ ಜೀವನ ಶೈಲಿಯನ್ನು ಭೋಗದ ಶೈಲಿಯಿಂದ ಪ್ರಕೃತಿ ಸ್ನೇಹಿ ಶೈಲಿಗೆ ಮಾರ್ಪಡಿಸಿಕೊಳ್ಳಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net