ಟೆಂಡರ್ ಪೂರ್ವ ಪರಿಶೀಲನೆಗೆ ಸಮಿತಿ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ; 50 ಕೋಟಿ ರೂಪಾಯಿಗೆ ಮೇಲ್ಪಟ್ಟ ಕಾಮಗಾರಿಗೆ ಅನ್ವಯ

Vidhana Soudha vvani
Published on

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಅಂಗ ಸಂಸ್ಥೆಗಳು ಪ್ರಾಯೋಜಿತ 50 ಕೋಟಿ ರೂ.ಗೆ ಮೇಲ್ಪಟ್ಟ ಕಾಮಗಾರಿಗಳು ಸೇರಿ ಸರಕು ಮತ್ತು ಸಂಗ್ರಹಣೆಯ ‘ಟೆಂಡರ್ ಪೂರ್ವ ಪರಿಶೀಲನಾ ಸಮಿತಿ’ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ವಿವಿಧ ಇಲಾಖೆ, ನಿಗಮ/ ಸಂಸ್ಥೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕುಗ್ಗಿದೆ. ಅಳತೆ ಮೀರಿ ಅಂದಾಜು ಮೊತ್ತ ನಿಗದಿ ಹಾಗೂ ಕೆಲವೇ ಕಂಪನಿಗಳಿಗೆ ನೆರವಾಗುವ ರೀತಿ ಷರತ್ತುಗಳ ನಿಗದಿ ಬಗ್ಗೆ ಅಪಸ್ವರ ದಟ್ಟವಾಗಿದ್ದು, ಇದನ್ನೆಲ್ಲ ತೊಡೆದು ಹಾಕಲೆಂದು ಸಮಿತಿ ರಚಿಸಲಾಗುತ್ತಿದೆ.

15 ದಿನಗಳ ಕಾಲಮಿತಿ: ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಬ್ಬರು ತಾಂತ್ರಿಕ ತಜ್ಞರನ್ನು ಒಳಗೊಂಡ ಸಮಿತಿ ರಚನೆಯಾಗಲಿದೆ. ನಿರ್ಮಾಣ ಕಾಮಗಾರಿ, ಸರಕು ಮತ್ತು ಸಂಗ್ರಹಣೆಯ ಟೆಂಡರ್​ಗೆ ಸಂಬಂಧಿಸಿದ ಪ್ರಸ್ತಾವನೆ ಪರಿಶೀಲಿಸಿ 15 ದಿನಗಳೊಳಗೆ ಅನುಮತಿ ನೀಡಲು ಕೋರಲಾಗುವುದು. ಅಗತ್ಯಬಿದ್ದರೆ ಎರಡು ಪರಿಶೀಲನಾ ಸಮಿತಿಗಳನ್ನು ರಚಿಸಿ, ಕೆಲಸದ ಒತ್ತಡ ಒತ್ತಡ ಸರಿದೂಗಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಒಪ್ಪಿಗೆ ನೀಡಿದ ನಂತರವೇ ಸಂಬಂಧಿಸಿದ ಇಲಾಖೆ/ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿವೆ. ಟೆಂಡರ್ ಅಂದಾಜು ಮೊತ್ತ ನಿಗದಿಯಲ್ಲಿ ಅವಾಸ್ತವಿಕ ಹೆಚ್ಚಳ, ಆರ್ಥಿಕ ಮತ್ತು ತಾಂತ್ರಿಕ ಬಿಡ್ ಕಾಲಕ್ಕೆ ಆಯ್ದ ಗುತ್ತಿಗೆ ಕಂಪನಿಗಳಿಗೆ ‘ಅನುಕೂಲಕರ’ ಷರತ್ತುಗಳ ನಿಗದಿ ಇತ್ಯಾದಿ ಲೋಪ-ದೋಷ ನಿವಾರಣೆ ಉದ್ದೇಶದಿಂದ ಸಮಿತಿ ರಚಿಸಲಾಗುತ್ತಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಜವಳಿ ಉದ್ದಿಮೆ ಉತ್ತೇಜನಕ್ಕೆ 376 ಕೋಟಿ ರೂ. ಪ್ಯಾಕೇಜ್: ಜವಳಿ ಉದ್ದಿಮೆಯತ್ತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯವನ್ನು ಆಕರ್ಷಿಸಿ, ಫಲಾನುಭವಿಗಳಿಗೆ ಉತ್ತೇಜಿಸುವ ಉದ್ದೇಶದಿಂದ 376 ಕೋಟಿ ರೂ. ಮೊತ್ತದ ನೇಕಾರರ ಪ್ಯಾಕೇಜ್​ಗೆ ಸಚಿವ ಸಂಪುಟ ಸಭೆ ಹಸಿರು ನಿಶಾನೆ ತೋರಿಸಿದೆ. ಸಣ್ಣ ಮತ್ತು ಅತಿ ಸಣ್ಣ ಜವಳಿ ಘಟಕಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು, ಆರ್ಥಿಕವಾಗಿ ಜೀವನಮಟ್ಟ ಸುಧಾರಣೆಗೆ ನೆರವಾಗುವುದು ಈ ಪ್ಯಾಕೇಜ್​ನ ಗುರಿಯಾಗಿದೆ. ಸಣ್ಣ, ಅತಿಸಣ್ಣ ಜವಳಿ ಘಟಕಗಳನ್ನು ತೆರೆಯಲು ಆಸಕ್ತ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ನಿವೇಶನ, ಜಮೀನು ವೆಚ್ಚ ಹೊರತುಪಡಿಸಿ ಶೇ.75 ಬಂಡವಾಳ ಸಹಾಯಧನ ಅಥವಾ ಗರಿಷ್ಠ ಎರಡು ಕೋಟಿ ರೂ.ವರೆಗೆ ಸರ್ಕಾರ ನೆರವು ನೀಡಲಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕೆಎಎಸ್ ಅಧಿಕಾರಿಗಳಿಗೆ ನೀಡುತ್ತಿರುವ ಹುದ್ದೆ ಆಧಾರಿತ ಮಾದರಿಯಲ್ಲಿ ಎಲ್ಲ ಇಲಾಖೆಗಳ ನೌಕರರಿಗೂ ಪದೋನ್ನತಿ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಂಘದ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ್ದು, ಸರ್ಕಾರಿ ನೌಕರರಿಗೆ ಶೇ.25 ರಿಂದ 35 ಮುಂಬಡ್ತಿ ಅವಕಾಶ ಹೆಚ್ಚಳವಾಗಲಿವೆ.

| ಸಿ.ಎಸ್.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ಕರ ವಸೂಲಾತಿ ವಿಧೇಯಕಕ್ಕೆ ಸುಗ್ರೀವಾಜ್ಞೆ ತರಲು ಒಪ್ಪಿಗೆ

ಸ್ಥಳೀಯ ಸಂಸ್ಥೆಗಳ ಕರ ವಸೂಲಾತಿ ವಿಧೇಯಕಕ್ಕೆ ಸುಗ್ರೀವಾಜ್ಞೆ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಾನೂನಿನಲ್ಲಿ ಅವಕಾಶ ಇಲ್ಲದೆ ಇದ್ದರೂ, ಸ್ಥಳೀಯ ಸಂಸ್ಥೆಗಳು ತಾವೇ ನಿಯಮಾವಳಿ ಮಾಡಿಕೊಂಡು ಕರ ವಸೂಲಾತಿ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ನಾಗರಿಕರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರಿಂದ ಸಮಸ್ಯೆ ಎದುರಾಗಿತ್ತು. ಕಾನೂನಿನಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಕೋರ್ಟ್ ನೀಡಿದ ಸಲಹೆ ಮೇರೆಗೆ ಆಗಿರುವ ಲೋಪ ಸರಿಪಡಿಸಲು ಈ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿವರಿಸಿದರು.

ಸ್ಥಳೀಯ ಸಂಸ್ಥೆಯ ಕಾನೂನಿನಲ್ಲಿ ಈ ಕರ ಸಂಗ್ರಹಣೆಗೆ ಅವಕಾಶ ಮಾಡಿಕೊಂಡಿದ್ದರೂ, ಅದಕ್ಕೆ ಸರ್ಕಾರ ಕಾನೂನಿನಲ್ಲಿ ಅವಕಾಶ ಮಾಡಿಕೊಡಬೇಕಾದ ಅನಿವಾರ್ಯತೆ ಇರುವುದರಿಂದ ಸುಗ್ರೀವಾಜ್ಞೆ ಅಗತ್ಯವಾಗಿತ್ತು. ಮುಂದೆ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗುವುದು ಎಂದು ಹೇಳಿದರು.

ಮೇಕೆದಾಟು ಬಗ್ಗೆ ಶೀಘ್ರ ಸಭೆ: ಮೇಕೆದಾಟು ಯೋಜನೆ ಬಗ್ಗೆ ಕಾನೂನು ತೊಡಕು ನಿವಾರಣೆ ಮಾಡಲು ಮತ್ತು ಅಗತ್ಯ ಸಲಹೆ ನೀಡಲು ರಚನೆಯಾಗಿರುವ ಸಂಪುಟ ಉಪ ಸಮಿತಿ ಸಭೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ರಚನೆಯಾಗಿರುವ ಸಂಪುಟ ಉಪ ಸಮಿತಿ ಸಭೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸದಸ್ಯರಾಗಿದ್ದಾರೆ. ಶೀಘ್ರವೇ ಸಂಪುಟ ಉಪ ಸಮಿತಿ ಸಭೆ ನಡೆಸಿ ಕೆಲ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತವರು ಜಿಲ್ಲೆಗೆ ಸಿಎಂ ಗಿಫ್ಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡುವ ಮೂಲಕ ಗಿಫ್ಟ್ ನೀಡಿದ್ದಾರೆ. ಇದೇ ಹಾದಿ ತುಳಿದಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟದ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಎರಡು ಪ್ರತ್ಯೇಕ ಒಕ್ಕೂಟ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳು ಸೇರಿ ಧಾರವಾಡ ಹಾಲು ಒಕ್ಕೂಟ ರಚನೆಯಾಗಿದ್ದು, ನಿತ್ಯ 3ರಿಂದ 3.50 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿತ್ತು. ಇದರಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ 1 ಲಕ್ಷ ಲೀಟರ್ ಬರುತ್ತಿತ್ತು. ಈಗ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡಿರುವುದರಿಂದ ಮತ್ತೊಂದು ಒಕ್ಕೂಟ, ಕರ್ನಾಟಕ ಹಾಲು ಮಹಾ ಮಂಡಳಕ್ಕೆ ಸೇರ್ಪಡೆಯಾದಂತಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಒಕ್ಕೂಟಕ್ಕೆ ತಲಾ 5 ಲಕ್ಷದಂತೆ ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ ಚಿಕ್ಕಬಳ್ಳಾಪುರ ಜಿಲ್ಲೆ ಪ್ರತ್ಯೇಕವಾಗುವುದರಿಂದ 5 ಲಕ್ಷ ಲೀಟರ್ ಹಾಲು ಚಿಕ್ಕಬಳ್ಳಾಪುರಕ್ಕೆ ಬರಲಿದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಅಯೋಜಿಸಲು ರಾಜ್ಯ ಸರ್ಕಾರ ಮಾನಸಿಕವಾಗಿ ಸಿದ್ಧವಾಗಿದ್ದು, ದಿನಾಂಕ ಅಂತಿಮಗೊಳಿಸುವುದು ಬಾಕಿಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಅನೌಪಚಾರಿಕ ಚರ್ಚೆಯಾಗಿದೆ. ಡಿ.13ರಿಂದ 24ರವರೆಗೆ ಚಳಿಗಾಲದ ಅಧಿವೇಶನ ಏರ್ಪಡಿಸುವ ಸಾದ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನೆರೆ, ಅತಿವೃಷ್ಟಿ, ಕರೊನಾ ಪಿಡುಗಿನ ಹಾವಳಿಯಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ಬೆಳಗಾವಿ ಸೌಧ ಅಧಿವೇಶನ ವಂಚಿತವಾಗಿದ್ದು, ಈ ಬಾರಿ ನಡೆಸಲೇಬೇಕೆಂಬ ಒತ್ತಡವೂ ಹೆಚ್ಚಿದೆ. ಗ್ರಾಮೀಣ-ನಗರ, ಪಟ್ಟಣ ಸ್ಥಳೀಯ ಸಂಸ್ಥೆ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ 25 ಸದಸ್ಯರ ಅವಧಿ 2022ರ ಜನವರಿ 5ರಂದು ಪೂರ್ಣಗೊಳ್ಳಲಿದೆ. ಈ ಸದಸ್ಯರ ಅವಧಿ ಮುಗಿಯುವುದರೊಳಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎನ್ನುವ ಅಪೇಕ್ಷೆ ವ್ಯಕ್ತವಾಗಿದ್ದು, ಪರಿಷತ್ ಸಭಾಪತಿ ಒತ್ತಾಸೆ ನೀಡಿ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೆ, ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪೂರಕ ವರದಿ ಸಲ್ಲಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನದತ್ತ ಚಿತ್ತನೆಟ್ಟಿವೆ.

ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ಏರ್ಪಡಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಬಹುತೇಕರ ಒಲವಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿರುವ ಕಾರಣ ಮುಂದಿನ ಸಂಪುಟ ಸಭೆಯಲ್ಲಿ ದಿನಾಂಕ ನಿರ್ಧಾರವಾಗಲಿದೆ.

| ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

ಸಂಪುಟದ ಪ್ರಮುಖ ನಿರ್ಣಯ

  • ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ಕ್ಕೆ ತಿದ್ದುಪಡಿ. ಮುಖ್ಯ ಖನಿಜ ಸ್ಥಳದಲ್ಲಿ ದೊರೆಯುವ ಉಪ ಖನಿಜಗಳ ಗಣಿಗಾರಿಕೆ ಗುತ್ತಿಗೆ ಅವಧಿ 50 ವರ್ಷಗಳಿಗೆ ವಿಸ್ತರಣೆ.
  • ಸರ್ಕಾರಿ ಹುದ್ದೆಗಳಿಗೆ ನೇಮಕ ಮತ್ತು ಮುಂಬಡ್ತಿಯಲ್ಲಿ ರಿಕ್ತ ಸ್ಥಾನ ಆಧಾರಿತ ನೀತಿ ಬದಲಾಗಿ ಹುದ್ದೆ ಆಧಾರಿತ ನೀತಿ ಜಾರಿ.
  • ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಅಪರ ನಿಬಂಧಕರ (ವಿಚಾರಣೆಗಳು) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಎಸ್.ಶೋಭಾ ಅವರ ನೇಮಕ.
  • ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧ, ರಾಸಾಯನಿಕ ಮತ್ತು ಇತರ ವಸ್ತುಗಳನ್ನು 2020-21ನೇ ಸಾಲಿಗೆ ಸಂಗ್ರಹಿಸುವುದಕ್ಕೆ 440 ಕೋಟಿ ರೂ. ಮೀಸಲು.
  • ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-2ರ 1891.90 ಕೋಟಿ ರೂ. ಪರಿಷ್ಕೃತ ಯೋಜನಾ ಮೊತ್ತಕ್ಕೆ ಅನುಮೋದನೆ.
  • ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 399.84 ಕೋಟಿ ರೂ. ವೆಚ್ಚದ ಕೆ-ಸೇಫ್-2 ಕ್ರಿಯಾ ಯೋಜನೆ ಅಡಿ ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆ, ಮೂಲ ಸವಲತ್ತು ಅಭಿವೃದ್ಧಿ.
  • ಚಾಮರಾಜನಗರ ವೈದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ 450 ರಿಂದ 700ಕ್ಕೆ ಹೆಚ್ಚಿಸಲು 165.47 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸಮ್ಮತಿ, ಇದರಿಂದ ಹೆಚ್ಚುವರಿಯಾಗಿ 150 ಮೆಡಿಕಲ್ ಸೀಟ್​ಗಳು ಲಭ್ಯ.
  • ದಕ್ಷಿಣಕನ್ನಡ, ಉಡುಪಿ, ಕೊಡಗು ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ 1398 ಕಿಂಡಿ ಅಣೆಕಟ್ಟೆಗಳನ್ನು ನಿರ್ವಿುಸುವ ಪಶ್ಚಿಮ ವಾಹಿನಿ ಯೋಜನೆಯಲ್ಲಿ 3,986.25 ಕೋಟಿ ರೂ.ಗಳ ಮಾಸ್ಟರ್​ಪ್ಲಾ್ಯನ್. ಈ ಪೈಕಿ ಪ್ರಸಕ್ತ ಸಾಲಿಗೆ 500 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಹಳ್ಳಿ ಬಳಿ ಹರಿಯುವ ಹಳ್ಳಕ್ಕೆ ಸರಣಿ ಚೆಕ್ ಡ್ಯಾಂ ನಿರ್ವಣಕ್ಕೆ 11.34 ಕೋಟಿ ರೂ. ವೆಚ್ಚದ ಅಂದಾಜು.
  • ಬಳ್ಳಾರಿ ಜಿಲ್ಲೆಯ ಮುದೇನೂರು-ಬಲಕುಂದಿ ನಡುವೆ ವೇದಾವತಿ ನದಿಗೆ ಸೇತುವೆ ಸಹಿತ ಬಾಂದಾರು ನಿರ್ವಿುಸಲು 35 ಕೋಟಿ ರೂ. ಅಂದಾಜು.
  • ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ ಹಂತ-2ರಡಿ ಹೇಮಾವತಿ ನದಿಯಿಂದ 11 ಕೆರೆಗಳ ಭರ್ತಿಗೆ 22.50 ಕೋಟಿ ರೂ. ಯೋಜನಾ ವೆಚ್ಚಕ್ಕೆ ಒಪ್ಪಿಗೆ.
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು-ಪಿಟ್ಟಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ವಿುಸುವ ಕಾಮಗಾರಿಯ 15.66 ಕೋಟಿ ರೂ. ಯೋಜನಾ ವರದಿಗೆ ಅನುಮತಿ.
  • ಬಳ್ಳಾರಿ ಜಿಲ್ಲಾ ಖನಿಜ ನಿಧಿಯಡಿ ಹೊಸಪೇಟೆ-ಬಳ್ಳಾರಿ ರಸ್ತೆ ಎಚ್​ಎಲ್​ಸಿ ಕಾಲುವೆಯಿಂದ ಇಂಗಳಗಿ ಕ್ರಾಸ್​ವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ. ವೆಚ್ಚಕ್ಕೆ ಅಸ್ತು.
  • ಬಳ್ಳಾರಿ ಜಿಲ್ಲಾ ಖನಿಜ ನಿಧಿಯಡಿ ಮುಂಡರಗಿ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 12.75 ಕೋಟಿ ರೂ. ಹಾಗೂ ಕುಡಿಯುವ ನೀರು ಪೂರೈಕೆಗೆ 17.32 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ.
  • ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್​ಗೆ ವಿದ್ಯಾರ್ಥಿಗಳ ಆಟದ ಮೈದಾನಕ್ಕಾಗಿ ಕುಕ್ಕಂದೂರು ಗ್ರಾಮದ 2.33 ಎಕರೆ ಜಮೀನು ಮಂಜೂರು.
  • ಬೆಂಗಳೂರಿನ ಶ್ರೀ ಸ್ವಾನಂದಾಶ್ರಮ ಬಾಲ ಗಣಪತಿ ಪ್ರತಿಷ್ಠಾನಕ್ಕೆ ಬೆಂಗಳೂರು ದಕ್ಷಿಣ ತಾಲೂಕು ಆಗರ ಗ್ರಾಮದ 21 ಗುಂಟೆ ಖರಾಬು ಜಮೀನು ಮಂಜೂರು.
  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ದೇವಸ್ಥಾನ, ಶಿಕ್ಷಣ, ಅನಾಥಾಶ್ರಮ ಸಂಸ್ಥೆಗಳು ಪೂರ್ಣ ಬಾಕಿ ಪಾವತಿಗೆ ಮುಂದೆ ಬಂದಲ್ಲಿ ನಿಯಮದಂತೆ ವಿಧಿಸಿದ ಬಡ್ಡಿ ಮೊತ್ತದಲ್ಲಿ ಶೇ.50 ಮನ್ನಾ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net