

ದೀಪಾವಳಿ ಹಬ್ಬದ ಮೊದಲ ದಿನವನ್ನು ದಕ್ಷಿಣ ಭಾರತದ ಗ್ರಾಮೀಣ ಭಾಗದಲ್ಲಿ ನೀರು ತುಂಬುವ ಹಬ್ಬವೆಂದು ಆಚರಿಸುತ್ತಾರೆ. ಮೊದಲ ದಿನ ಮಧ್ಯಾಹ್ನ ಸಿಹಿ ಭಕ್ಷ್ಯಭೋಜನ ಮಾಡಿ ಸಂಜೆಯಿಂದ ನೀರು ತುಂಬುವ ಹಬ್ಬ ಆರಂಭಿಸುತ್ತಾರೆ. ಸ್ನಾನದ ಮನೆಯನ್ನು ಗೋವಿನ ಸಗಣಿಯಿಂದ ಶುಚಿ ಮಾಡುತ್ತಾರೆ. ನಂತರ ನೀರು ಕಾಯಿಸುವ ಹಂಡೆಯನ್ನು ಸ್ವಚ್ಛಗೊಳಿಸಿ ಹತ್ತಿರದಲ್ಲಿರುವ ನದಿ ಅಥವಾ ಬಾವಿಯಿಂದ ಮುತೆôದೆಯರು ನೀರು ತಂದು ತುಂಬಿಸುತ್ತಾರೆ. ನಂತರ, ಹಂಡೆಗೆ ಅಲಂಕಾರ ಮಾಡಿ ಪೂಜಿಸಿ, ರಾತ್ರಿಯೇ ನೀರು ಕಾಯಲು ಬೇಕಾದ ಉರುವಲು ಹಾಕುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಪೂಜೆ ವಿಧಿವಿಧಾನ ಗಳನ್ನು ಬದಲು ಮಾಡಿಕೊಳ್ಳ ಬಹುದು. ಶ್ರದ್ಧೆಗೆ ಹೆಚ್ಚಿನ ಬೆಲೆ ನೀಡಿ ಸಂಪ್ರದಾಯ ಗಳನ್ನು ಮುಂದುವರಿಸಬೇಕು. ಹೀಗಾಗಿ, 10-12 ಅಡಿ ಎತ್ತರದಲ್ಲಿರುವ ಗೀಸರ್ ಕೆಳಭಾಗದಲ್ಲಿ ರಂಗೋಲಿ ಹಾಕಿ ಹೂವಿನಿಂದ ಅಲಂಕರಿಸಿ, ಗೀಸರ್ ಪೂಜಿಸಿ ದೀಪಾವಳಿ ಹಬ್ಬಕ್ಕೆ ಚಾಲನೆ ನೀಡಬಹುದು. ಇದೇ ದಿನವನ್ನು ಉತ್ತರ ಭಾರತದಲ್ಲಿ ಧನತ್ರಯೋದಶಿ (ಧನತೇರಸ್) ಆಗಿ ಆಚರಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿಯ ಆಭರಣಗಳನ್ನು ಖರೀದಿಸಬೇಕೆಂಬ ಸಂಪ್ರದಾಯ ಇದೆ. ಹೀಗಾಗಿ, ಎಂತಹ ಬಡವರಾದರೂ ಕನಿಷ್ಠ 1 ಗ್ರಾಂ ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಸಮೃದ್ಧಿಯನ್ನು ಬರಮಾಡಿಕೊಳ್ಳುವ ಸಂಕೇತವಾಗಿ ಈ ಖರೀದಿ ಮಾಡಲಾಗುತ್ತದೆ.
ನರಕ ಚತುರ್ದಶಿ: ಬೆಳಗ್ಗೆ 4 ಗಂಟೆಗೆ ಎದ್ದು ಹೊಸ್ತಿಲು ಪೂಜಿಸಿ, ಮನೆಯಂಗಳದಲ್ಲಿ ರಂಗೋಲಿ ಹಾಕಿ, ಮಣೆ ಅಥವಾ ಬಟ್ಟೆಯನ್ನು ಹಾಸಿ ಮನೆಯ ಎಲ್ಲ ಸದಸ್ಯರನ್ನು ಪೂರ್ವಾಭಿಮುಖವಾಗಿ ಕೂರಿಸಬೇಕು. ಎಲ್ಲರ ತಲೆಗೆ ಬಲಗೈಯಿಂದ ಎಣ್ಣೆಯನ್ನು ಹಾಕಿ, ಶರೀರಕ್ಕೆ ಎಣ್ಣೆ ಪ್ರೋಕ್ಷಣೆ ಮಾಡಬೇಕು. ನಂತರ, ಕೆದಳಾರ್ತಿ ಮಾಡಬೇಕು. ಒಂದು ತಟ್ಟೆಯಲ್ಲಿ ಕುಂಕುಮ-ಅರಿಶಿಣ ನೀರನ್ನು ಮಿಶ್ರಣ ಮಾಡಿ, ದೇವರಿಗೆ ಆರತಿ ಬೆಳಗಿ ನಂತರ ಎಣ್ಣೆ ಹಚ್ಚಿಕೊಂಡವರಿಗೆ ಆರತಿ ಮಾಡಬೇಕು. ಅದನ್ನು ಮನೆಯ ಹೊರಭಾಗಕ್ಕೆ ಚೆಲ್ಲಬೇಕು. ಆರತಿ ಮಾಡಿದವರಿಗೆ ಎಣ್ಣೆಸ್ನಾನ ಮಾಡಿಸಿಕೊಂಡವರು ಗೌರವಾರ್ಥವಾಗಿ ಹಣ, ಬಟ್ಟೆ ಅಥವಾ ವಸ್ತುಗಳನ್ನು ಕಾಣಿಕೆಯಾಗಿ ಕೊಡಬೇಕು.
ಅಭ್ಯಂಗ ಸ್ನಾನ: ಮನೆ ಹಿರಿಯರು ಕನಿಷ್ಠ 3ರಿಂದ 5 ತಂಬಿಗೆ ನೀರು ಹಾಕಬೇಕು. ಚಿಕ್ಕಮಕ್ಕಳಿಗೆ ಹಿರಿಯರು ಸ್ನಾನ ಮಾಡಿಸಿ ನಂತರ ಪಾತ್ರೆಗೆ ಹಿಡಿದ ಮಸಿಯನ್ನು ಹಣೆಗೆ ಹಚ್ಚಬೇಕು. ನೂತನ ವಸ್ತ್ರಧಾರಣೆ ಮಾಡಿ ಇಷ್ಟದೇವತಾ, ಕುಲದೇವತಾ ಪೂಜೆ ಮಾಡುವುದು. ಇದೆಲ್ಲವನ್ನೂ ಸೂರ್ಯೋದಯದ ಮುಂಚೆ ಮಾಡಬೇಕು. ಆನಂತರದಲ್ಲಿ ಪಟಾಕಿ ಹಚ್ಚುವ ಕಾರ್ಯ ಮಾಡಬೇಕು. ಸಾಧಾರಣವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಚತುರ್ದಶಿಗಳಲ್ಲಿ ಅಭ್ಯಂಜನ ಸ್ನಾನ ನಿಷಿದ್ಧವಾಗಿದೆ. ಆದರೆ, ಅಶ್ವೀಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ಅಭ್ಯಂಜನ ಸ್ನಾನಕ್ಕೆ ಯಾವುದೇ ದೋಷವಿಲ್ಲ. ಕೃಷ್ಣ ಪರಮಾತ್ಮನು ನರಕಾಸುರನನ್ನು ಕೊಂದ ಸೂತಕ ಕಳೆಯಲು ಅಭ್ಯಂಗ ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ವಧೆ ಮಾಡಿ 16 ಸಾವಿರ ಹೆಣ್ಣುಮಕ್ಕಳನ್ನು ರಾಕ್ಷಸನ ಬಂಧನದಿಂದ ಮುಕ್ತಗೊಳಿಸಿದ. ಈ ರಕ್ಷಣೆ ಹಾಗೂ ಜಯದ ಸಂಕೇತವಾಗಿ ಪಟಾಕಿ ಸಿಡಿಸುತ್ತಾರೆ. ಎಲ್ಲರೂ ನೆಮ್ಮದಿಯಾಗಿ, ಸಂತೋಷದಿಂದ ಹಬ್ಬದ ಊಟ ಮಾಡುವುದು. ಇದು ನರಕ ಚತುರ್ಥಿಯ ಸಂಕ್ಷಿಪ್ತ ಆಚರಣೆ.
ಭಾಯಿದೂಜ್: ಭಾಯಿದೂಜ್ದಂದು ಅಕ್ಕ-ತಂಗಿಯರ ಮನೆಗೆ ಅಣ್ಣ-ತಮ್ಮಂದಿರು ಹೋಗಿ, ಹಬ್ಬದ ಊಟ ಮಾಡಿ ಬರುವುದರಿಂದ ಅಣ್ಣ-ತಮ್ಮಂದಿರಿಗೆ ಅಕಾಲಿಕ ಮೃತ್ಯು ಬರುವುದಿಲ್ಲ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ.
ಮನೆದೇವರನ್ನು ಪೂಜಿಸಿ: ನವರಾತ್ರಿ ಹಬ್ಬದಂದು ನವದುರ್ಗೆಯರನ್ನು, ಗಣೇಶ ಚತುರ್ಥಿಗೆ ಗಣೇಶನನ್ನು ಹಾಗೂ ವರಮಹಾಲಕ್ಷ್ಮೀ ಹಬ್ಬದಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ, ನರಕ ಚತುರ್ದಶಿ ದಿನ ಮನೆಯ ದೇವರ ಪೂಜೆ, ಪಾಡ್ಯದ ದಿನ ಗೋಪೂಜೆ ಮಾಡಬೇಕು.
ಮಕ್ಕಳಿಗೆ ಗೋವಿನ ಕಥೆ ಹೇಳಿ: ಪಟ್ಟಣ ಪ್ರದೇಶಗಳಲ್ಲಿ ಗೋವು ನೋಡುವುದೇ ಅಪರೂಪವಾಗಿದ್ದು, ಪೂಜೆ ಮಾಡುವುದು ದೂರದ ಮಾತಾಗಿದೆ. ನಗರವಾಸಿಗಳು ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಡೈರಿಯಿಂದ ಎನ್ನುತ್ತಾರೆ. ಹೀಗಾಗಿ, ಮಕ್ಕಳಿಗೆ ಹಾಲಿನ ಮೂಲ ಯಾವುದೆಂದು ತಿಳಿಸಿಕೊಡಬೇಕು. ರೈತರ ಶ್ರಮ, ಹಸುಗಳ ಆಹಾರ ಪದ್ಧತಿ, ಹಸುವಿನ ತ್ಯಾಗವನ್ನು ಮಕ್ಕಳಿಗೆ ತಿಳಿಸಬೇಕು. ಎಲ್ಲ ಮಕ್ಕಳಿಗೆ ನಮ್ಮ ಪರಂಪರೆ ಬಗ್ಗೆ ಅರಿವು ಮೂಡಿಸಬೇಕು.
ಲಕ್ಷ್ಮೀಪೂಜೆ: ಈ ವರ್ಷ ನರಕ ಚತುರ್ದಶಿಯ ಸಂಜೆಯೇ ಲಕ್ಷ್ಮೀ ಪೂಜೆ ಮಾಡಬೇಕು. ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆ ಹಾಗೂ ದೀಪಾವಳಿಯ ಹೊತ್ತಲ್ಲಿನ ಲಕ್ಷ್ಮೀಪೂಜೆ ವಿಶೇಷವಾದದ್ದು. ಅಮಾವಾಸ್ಯೆ ದಿನ ಸೂರ್ಯಾಸ್ತದ ನಂತರ ಮಹಾಲಕ್ಷ್ಮೀ ಆರಾಧನೆ ಮಾಡುತ್ತಾರೆ. ಬೆಳ್ಳಿ ಕಳಸ ಇಟ್ಟು, ಅದರಲ್ಲಿ ನವಧಾನ್ಯ, ನಗನಾಣ್ಯ ಹಾಕಿ, ನಾಳಿಕೇಳ ಪೂರ್ಣಫಲ ಇಟ್ಟು, ಮಹಾಲಕ್ಷ್ಮೀ ಜಪ ಮಾಡಿ ಆವಾಹನೆ ಮಾಡಬೇಕು. ಅಷ್ಟೋತ್ತರ, ಕುಂಕುಮಾರ್ಚನೆ, ಪುರ್ಷ್ಪಾಚನೆ ಮಂಗಳಾರತಿ ಸೇರಿ ಪೂಜಾಕೈಂಕರ್ಯ ಮಾಡಬೇಕು. ಕೆಲವು ಕಡೆ ಮನೆಯ ಮುಖ್ಯಸದಸ್ಯರು ಮಾರನೇ ದಿನ ಸೂರ್ಯೋದಯದವರೆಗೂ ಎಚ್ಚರವಾಗಿದ್ದು, ಲಕ್ಷ್ಮೀ ಆರಾಧನೆ ಮಾಡುವ ಸಂಪ್ರದಾಯವಿದೆ. ಈ ದಿನ ಲಕ್ಷ್ಮೀನಾರಾಯಣ ಹೃದಯ ಮಂತ್ರಭಾಗವನ್ನು ಪಠಿಸಿ ಮಹಾಲಕ್ಷ್ಮೀ ಅನುಗ್ರಹ ಪಡೆಯಬಹುದು.
ಬಲಿಪಾಡ್ಯಮಿ: ಬಲಿಪಾಡ್ಯಮಿ ದಿನದಂದು ಅಭ್ಯಂಗ ಸ್ನಾನ ಮಾಡಿ, ಕುಲದೇವತೆಯನ್ನು, ಜೇಡಿಮಣ್ಣಿನಿಂದ ಮಾಡಿದ ಬಲೀಂದ್ರನನ್ನು ಪೂಜಿಸಬೇಕು. ತುಳಸಿಕಟ್ಟೆ ಸಮೀಪ ಮನೆಯಿಂದ ಹೊರಗೆ ಬಲೀಂದ್ರನ ಪೂಜೆ ಮಾಡಬೇಕು. ನಂತರ, ಕೃಷಿಯ ಮುಖ್ಯ ಆಧಾರವಾದ ಗೋವುಗಳನ್ನು ಪೂಜಿಸಬೇಕು. ಗೋವುಗಳಿಗೆ ಇಷ್ಟವಾದ ಆಹಾರವನ್ನು ಕೊಡಬೇಕು. ಗ್ರಾಮೀಣ ಭಾಗದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. 12 ಮಾಸಗಳಲ್ಲಿ ಕಾರ್ತಿಕ ಮಾಸ ಎಲ್ಲ ಮಾಸಗಳಲ್ಲೇ ಶ್ರೇಷ್ಠವಾಗಿದೆ.