

ಚಿಕ್ಕಮಗಳೂರು: ಕಾಡಾನೆಗಳ ಉಪಟಳದಿಂದ 8 ದಿನದಿಂದ ಅರೆನೂರು ಜನರು ಊರಿನಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಊರಿನಿಂದ ಕಾಡಾನೆ ಹಿಂಡು ವಾಪಸಾಗುವ ಲಕ್ಷಣವೇ ಕಾಣದೆ ಕಾಫಿ ತೋಟದಲ್ಲಿರುವ ಬಾಳೆಗಿಡಗಳನ್ನು ಕಡಿಯುವ ಮೂಲಕ ಆನೆಗಳಿಂದ ತೋಟ ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಸೆ.1ರಂದು ಅರೆನೂರು ಸಮೀಪದ ದುರ್ಗಾ ರಸ್ತೆಯಲ್ಲಿ ದುರ್ಗಾದ ಕಿನ್ನಿ ಎಂಬುವವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಅಂದಿನಿಂದ ಇಲ್ಲಿಯವರೆಗೂ ಅರೆನೂರು ಹಾಗೂ ಸುತ್ತಮುತ್ತಲಿನ ಜನರಿಗೆ ಕಾಡಾನೆ ಭೀತಿಯಿಂದ ಹೊರಬರಲಾಗುತ್ತಿಲ್ಲ. ನಿತ್ಯವೂ ಕಾಡಾನೆಗಳು ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಶನಿವಾರ ಮುಂಜಾನೆ ಅರೆನೂರು ಸಮೀಪದ ಮನೆ ಮುಂಭಾಗದಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿವೆ. ಕಾಫಿ ತೋಟಗಳಲ್ಲಿ ಕೆಲಸ ಸ್ಥಗಿತಗೊಳಿಸಿರುವ ಕೃಷಿಕರು ಗುಂಪುಗುಂಪಾಗಿ ತೋಟದ ಸಮೀಪ ತೆರಳಿ ಹಾನಿಯಾಗಿರುವುದನ್ನು ವೀಕ್ಷಿಸುತ್ತಿದ್ದಾರಷ್ಟೇ. ಬಹುತೇಕ ತೋಟಗಳಲ್ಲಿ ಅಡಕೆ, ತೆಂಗು, ಬಾಳೆಗಿಡಗಳನ್ನು ಆನೆಗಳು ನಾಶಗೊಳಿಸಿವೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು ಅವರೊಂದಿಗೆ ಜನರು ಆನೆ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 8 ದಿನದಿಂದಲೂ ಹರಸಾಹಸಪಟ್ಟರೂ ಬೇರೆಡೆ ಅಟ್ಟಲು ಸಾಧ್ಯವಾಗುತ್ತಿಲ್ಲ. ಸೆ.1 ರಂದು ಮೂರು ಆನೆಗಳಿದ್ದವು ಎಂಬ ಮಾಹಿತಿ ಇತ್ತು. ಈಗ ಅದರ ಜತೆಯಲ್ಲಿ ಇನ್ನೂ ನಾಲ್ಕು ಕಾಡಾನೆಗಳು ಸೇರ್ಪಡೆಯಾಗಿವೆ ಎಂದು ಹೇಳಲಾಗುತ್ತಿದ್ದು ಕೆಲವರು ಹಿಂಡಾಗಿ ಸಂಚರಿಸುವುದನ್ನು ಗಮನಿಸಿದ್ದಾರೆ.
ಆಹಾರ ಅರಸಿ ಕಾಫಿ ತೋಟಗಳಿಗೆ ಆನೆಗಳು ಬರುತ್ತಿರುವುದರಿಂದ ಕಾಫಿ, ಅಡಕೆಯನ್ನಾದರೂ ಉಳಿಸಿಕೊಳ್ಳಲು ರೈತರು ಬಾಳೆಗಿಡಗಳನ್ನು ಕಡಿಯುತ್ತಿದ್ದಾರೆ. ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ಬಾಳೆಗಿಡಗಳನ್ನು ಕಡಿಯುವುದೇ ಉತ್ತಮ ಎನ್ನುತ್ತಿದ್ದಾರೆ. ಹಲವು ವರ್ಷಗಳಿಂದ ಪೋಷಣೆ ಮಾಡಿದ ಬಾಳೆಗಿಡಗಳನ್ನು ಸ್ವತಃ ನಾಶಪಡಿಸಬೇಕಾಗಿರುವುದರಿಂದ ಬೇಸರವೂ ಅವರಲ್ಲಿದೆ.
ಹಗಲು ಕಂಚಿನಕಲ್‌ನಲ್ಲಿ: ಅರೆನೂರು ಭಾಗದಿಂದ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಿದರೆ ಕಂಚಿಕಲ್ ದುರ್ಗಾದ ಗುಡ್ಡದ ಸಮೀಪ ಹೋಗಿ ರಾತ್ರಿಯಾಗುತ್ತಿದ್ದಂತೆ ಪುನಃ ಅರೆನೂರು ಗ್ರಾಮದತ್ತ ಬರುತ್ತವೆ. ಶನಿವಾರ ಗ್ರಾಮದಿಂದ ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಂಚಿನಕಲ್ ದುರ್ಗಾ ಗ್ರಾಮದ ಸಮೀಪ ತೆರಳಿದ್ದ ಕಾಡಾನೆಗಳು ಪಟಾಕಿ ಶಬ್ದಕ್ಕೆ ಮತ್ತೆ ವಾಪಸಾಗಿರುವುದು ಕೃಷಿಕರಲ್ಲಿ ಆತಂಕ ಉಂಟುಮಾಡಿದೆ.
ಹಿರಿಯ ಅಧಿಕಾರಿಗಳು ಬಂದಿಲ್ಲ?: ಎಂಟು ದಿನಗಳಿಂದ ಕಾಡಾನೆಗಳು ಓಡಾಡುತ್ತಿದ್ದು, ಆಲ್ದೂರು ವಲಯದ ಆರ್‌ಎಫ್‌ಒ ಹಾಗೂ ಸಿಬ್ಬಂದಿಯಷ್ಟೇ ಅರೆನೂರು ಗ್ರಾಮಕ್ಕೆ ಕಾವಲು ನಿಂತಿದ್ದಾರೆ. ಕೆಲ ಸಿಬ್ಬಂದಿ ಜತೆ ತಂಡೋತಂಡವಾಗಿ ಜತೆಯಾಗಿರುವ ಜನರು ಸದ್ಯ ಆನೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಡ್ರೋನ್ ಬಳಸಿ ಆನೆಗಳ ಜಾಡು ಹಿಡಿದು ಕಂಚಿನಕಲ್ ದುರ್ಗಾ ಗುಡ್ಡ ದಾಟಿ ಅಟ್ಟಿಸಿ ಎಂಬ ಅಗ್ರಹವೂ ಕೇಳಿಬಂದಿದೆ.
ಭುವನೇಶ್ವರಿ ಟೀಂ: ಅರೆನೂರು ಭಾಗದಲ್ಲಿರುವ ಕಾಡಾನೆಗಳ ಹಿಂಡಿನಲ್ಲಿ ಭುವನೇಶ್ವರಿ ಎಂಬ ಕಾಡಾನೆ ಇದೆ ಎಂದು ಅಂದಾಜಿಸಲಾಗಿದೆ. ಭುವನೇಶ್ವರಿ ಆನೆಗೆ ಜಿಪಿಆರ್‌ಎಸ್ ಅಳವಡಿಸಲಾಗಿದೆ. ಭುವನೇಶ್ವರಿ ಸಕಲೇಶಪುರ ಭಾಗದಿಂದ ಬಂದಿರುವುದರಿಂದ ಮತ್ತೆ ಅದೇ ಭಾಗಕ್ಕೆ ಅಟ್ಟಲು ಅರಣ್ಯ ಇಲಾಖೆ ಮುಂದಾಗಿದೆ. ಭುವನೇಶ್ವರಿ ಜತೆಗೆ ಆರು ಆನೆಗಳು ಇವೆ ಎಂದು ಹೇಳಲಾಗುತ್ತಿದೆ. ಉಳಿದ ಆನೆಗಳೆಲ್ಲ ಎಲ್ಲಿಂದ ಬಂದವೆಂಬ ಮಾಹಿತಿ ಇಲ್ಲ.