

ಹತ್ತು ಲಕ್ಷ ಉದ್ಯೋಗ ಭರ್ತಿ ಜತೆಗೆ, ಸೇನೆಗೆ ಸಂಬಂಧಿಸಿ ಯುವಜನರಿಗಾಗಿ ‘ಅಗ್ನಿಪಥ’ ಎಂಬ ಯೋಜನೆಯನ್ನೂ ಕೇಂದ್ರ ಸರ್ಕಾರ ಈಚೆಗೆ ಪ್ರಕಟಿಸಿತು. ಸೇನೆಯ ಮೂರೂ ಅಂಗಗಳಿಗೆ ಯೋಧರು, ಏರ್ವೆುನ್ ಮತ್ತು ನಾವಿಕರು ಇತ್ಯಾದಿ ವಿಭಾಗಗಳಲ್ಲಿ ಹದಿನೇಳೂವರೆ ವರ್ಷದಿಂದ 21 ವಯೋಮಾನವರೆಗಿನ 46 ಸಾವಿರ ಜನರನ್ನು ನಾಲ್ಕು ವರ್ಷಗಳ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳುವುದು ಈ ಯೋಜನೆಯ ತಿರುಳು. ಆದರೆ ಈ ಯೋಜನೆಯಿಂದ ಸೇನೆಗೆ ಸೇರಬಯಸುವ ಆಕಾಂಕ್ಷಿಗಳಿಗೆ ಸಮಸ್ಯೆಯಾಗುತ್ತದೆ, ಅವರ ಅವಕಾಶ ಕಸಿದಂತಾಗುತ್ತದೆ. ಅಲ್ಲದೆ, ಸೇನೆಯ ವೃತ್ತಿಪರತೆಯ ಮೇಲೂ ಇದರಿಂದ ಪರಿಣಾಮವಾಗುತ್ತದೆ. ಹೀಗಾಗಿ ಮೊದಲಿನ ನಿಯಮವೇ ಮುಂದುವರಿಯಬೇಕು ಎಂಬ ಆಗ್ರಹ ಕೆಲವೆಡೆ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆಯುತ್ತಿವೆ.
ಬಿಹಾರದಲ್ಲಿ ಆರಂಭವಾದ ಪ್ರತಿಭಟನೆ ಈಗ ನಿಧಾನವಾಗಿ ಹರಿಯಾಣ ಮುಂತಾಗಿ ಬೇರೆ ಬೇರೆ ಕಡೆಗೆ ವಿಸ್ತರಿಸುತ್ತಿದ್ದು, ಬಸ್ಸು, ರೈಲಿಗೆ ಬೆಂಕಿಹಚ್ಚುವಂಥ ಕೃತ್ಯಗಳು ಸಹ ನಡೆಯುತ್ತಿವೆ. ಇದು ಪ್ರತಿಭಟನೆ ನಡೆಯಬೇಕಾದ ವಿಧಾನವಲ್ಲ. ಭಾರತೀಯ ಸೇನೆೆಯ ಮೂರೂ ಪಡೆಗಳಲ್ಲಿ ನೇಮಕಾತಿ ವಿಧಾನದಲ್ಲಿ ಕೇಂದ್ರ ಸರ್ಕಾರ ಕೆಲ ಬದಲಾವಣೆ ತಂದಿದ್ದು, ಅದರ ಅಂಗವಾಗಿ ‘ಅಗ್ನಿಪಥ’ ಯೋಜನೆಯನ್ನು ಪ್ರಕಟಿಸಲಾಗಿದೆ. ಒಟ್ಟು 46 ಸಾವಿರ ನೇಮಕಾತಿ ನಡೆಯಲಿದ್ದು, ಇವರನ್ನು ‘ಅಗ್ನಿವೀರರು’ಎಂದು ಕರೆಯಲಾಗುತ್ತದೆ.
ಈ ಪೈಕಿ ಶೇ.25 ಮಂದಿ ನಾಲ್ಕು ವರ್ಷ ಸೇವೆ ನಂತರ, ಅರ್ಹತೆ ಆಧಾರದ ಮೇಲೆ ಸೇನೆಯಲ್ಲಿ ಸೇವೆ ಮುಂದುವರಿಸಲು ಅವಕಾಶ ಪಡೆಯುತ್ತಾರೆ. ‘ಈ ಯೋಜನೆಯಿಂದ ಸೇನೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದ್ದು, ಸೇನೆಯು ಯುವಬಲದಿಂದ ಮತ್ತಷ್ಟು ಸಶಕ್ತವಾಗಲಿದೆ. ಅಲ್ಲದೆ, ಈ ನೇಮಕಾತಿಯಿಂದ ಸೇನೆಯ ವಾರ್ಷಿಕ ವೆಚ್ಚದಲ್ಲಿ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ’ಎಂದು ಸರ್ಕಾರ ತಿಳಿಸಿದೆ. ರಕ್ಷಣಾ ಬಜೆಟ್ನಲ್ಲಿ ವೇತನ ಹಾಗೂ ಪಿಂಚಣಿಗೇ ದೊಡ್ಡ ಭಾಗ ಹೋಗುವುದರಿಂದ ಸೇನೆಯ ಆಧುನೀಕರಣ ಪ್ರಕ್ರಿಯೆ ವಿಳಂಬವಾಗುತ್ತದೆ ಎಂಬುದು ಸಹ ಸರ್ಕಾರದ ಚಿಂತೆಗೆ ಕಾರಣವಾಗಿರುವ ವಿಷಯ. ವ್ಯಾಪಕ ಚರ್ಚೆಗಳ ನಂತರ, ಸಾಧಕ-ಬಾಧಕ ಪರಾಮರ್ಶೆ ಬಳಿಕ, ಸೇನೆಯ ತಜ್ಞರ ಪರಿಶೀಲನೆಗೆ ಒಳಪಟ್ಟ ನಂತರವೇ ಈ ಯೋಜನೆ ಘೋಷಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಯಾವುದೇ ಹೊಸ ಯೋಜನೆ ಘೋಷಣೆಯಾದಾಗ ಅದರ ಬಗ್ಗೆ ಒಂದಷ್ಟು ಪ್ರಶ್ನೆಗಳು ಮತ್ತು ಸಂದೇಹಗಳು ಉಂಟಾಗುವುದು ಸಹಜವೇ. ಅದರಲ್ಲೂ ಪ್ರಜಾಪ್ರಭುತ್ವ ದೇಶಗಳ ವಿಷಯದಲ್ಲಿ ಈ ಮಾತು ಮತ್ತಷ್ಟು ದಿಟ. ಈ ವಿಷಯದಲ್ಲಿಯೂ ಹಾಗೇ ಆಗಿದೆ. ಆದರೆ ಇಂಥ ಸಂದೇಹ-ಅನುಮಾನಗಳನ್ನು ಮಂಡಿಸಲು ಬೇರೆಯದೇ ವೇದಿಕೆಗಳಿರುತ್ತವೆ. ಈ ನಡುವೆ, ಕೇಂದ್ರ ಸರ್ಕಾರ ಸಹ ಅಗ್ನಿಪಥ ಯೋಜನೆಯ ಬಗೆಗಿನ ಸಂದೇಹಗಳಿಗೆ ವಿವರಣೆ ನೀಡಿದೆ. ಯಾವುದೇ ಪ್ರತಿಭಟನೆ ಹಿಂಸಾತ್ಮಕವಾದಲ್ಲಿ ಅದರಲ್ಲಿ ಸಮಾಜವಿರೋಧಿ ಶಕ್ತಿಗಳು ಹಾಗೂ ತಮ್ಮದೇ ಹಿತಾಸಕ್ತಿಯ ಉದ್ದೇಶದ ಗುಂಪುಗಳು ಸೇರಿಕೊಳ್ಳುವ ಅಪಾಯ ಇದ್ದೇ ಇರುತ್ತದೆ. ಹಾಗಾದಾಗ ಮೂಲೋದ್ದೇಶ ಮರೆಯಾಗಿ ಬೇರೆ ವಿಷಯಗಳು ವಿಜೃಂಭಿಸಿ ಸಮಸ್ಯೆ ಹಾಗೇ ಉಳಿದುಬಿಡುತ್ತದೆ. ಹೀಗಾಗಿ ಸಂಘರ್ಷದ ಬದಲು ಚರ್ಚೆ ಮೂಲಕ ಈ ‘ಅಗ್ನಿಪಥ’ವನ್ನು ದಾಟುವ ವಿವೇಕವನ್ನು ತೋರಬೇಕಿದೆ. ಸರ್ಕಾರ ಸಹ ಯುವಜನರ ಅನುಮಾನಗಳಿಗೆ ತಕ್ಷಣ ಪರಿಹಾರ ನೀಡಬೇಕಿದೆ.