

ಬೆಂಗಳೂರು: ಹಿರಿಯರ ಮೊಗದಲ್ಲಿ ಬಾಲ್ಯದ ನೆನಪು.. ಗಬಗಬನೆ ಇಡ್ಲಿ ತಿಂದು ಉಸ್ಸಪ್ಪ ಎಂದ ಸ್ಪರ್ಧಿಗಳು.... ರಿಂಗ್ನಲ್ಲಿ ಗಿಫ್ಟ್ ಗಿಟ್ಟಿಸಿಕೊಳ್ಳಲು ನೂಕುನುಗ್ಗಲು... ಪ್ರಶಸ್ತಿ ಗೆದ್ದು ಖುಷಿಪಟ್ಟವರು... ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ಆಯೋಜಿಸಿರುವ ವಿಜಯವಾಣಿ ಪ್ರೀಮಿಯರ್ ಲೀಗ್ ವಿಪಿಎಲ್- ಕ್ರೀಡೋತ್ಸವ 2ನೇ ದಿನವಾದ ಶನಿವಾರ ಕಂಡುಬಂದ ಚಿತ್ರಣವಿದು.
ಬಕೆಟ್ನಲ್ಲಿ ಬಾಲ್, ರಿಂಗ್ನಲ್ಲಿ ಗಿಫ್ಟ್, ಇಡ್ಲಿ ತಿನ್ನುವ ಸ್ಪರ್ಧೆ ಹಾಗೂ ಸ್ಕಿಪ್ಪಿಂಗ್ನಲ್ಲಿ ಭಾಗವಹಿಸುವ ಮೂಲಕ ಕ್ರೀಡೋತ್ಸವಕ್ಕೆ ಸಿಬ್ಬಂದಿ ಮೆರುಗು ತಂದರು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 10 ಮಹಿಳಾಮಣಿಗಳು ಸ್ಪರ್ಧಿಸಿದ್ದರು. ಶೈಲಜಾ 3 ನಿಮಿಷದಲ್ಲಿ 9 ಇಡ್ಲಿ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಶ್ರುತಿ ಮತ್ತು ಎಂ.ಜಿ. ಅರುಣ ತಲಾ 8 ಇಡ್ಲಿ ತಿಂದು 2ನೇ ಸ್ಥಾನ ಹಂಚಿಕೊಂಡರು. ಪುರುಷರ ಸ್ಪರ್ಧೆಯಲ್ಲಿ 5 ನಿಮಿಷದಲ್ಲಿ ಆರ್.ಎಂ. ವಿಜಯ್ಕುಮಾರ್ 19 ಇಡ್ಲಿ ತಿಂದು ಟ್ರೋಫಿ ಗಿಟ್ಟಿಸಿದರು. ಬಸವರಾಜ್ 17 ಇಡ್ಲಿ ತಿಂದು ರನ್ನರ್ ಆಪ್ ಸ್ಥಾನ ಪಡೆದರು.
ಮಹಿಳಾ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ದಿಗ್ವಿಜಯ ನ್ಯೂಸ್ನ ಅನಿತಾ ವಿಜೇತರಾದರೆ, ದಿಗ್ವಿಜಯ ನ್ಯೂಸ್ನ ಶೈಲಜಾ 2ನೇ ಸ್ಥಾನ ಪಡೆದರು. ಪುರುಷರ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ವಿಜಯವಾಣಿಯ ವೀರೇಶ್ ತಿಪ್ಪಣ್ಣ ಪ್ರಥಮ ಸ್ಥಾನಕ್ಕೆ ಭಾಜನರಾದರೆ, ಶಿವಕುಮಾರ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬಕೆಟ್ನಲ್ಲಿ ಬಾಲ್ ಸ್ಪರ್ಧೆಯಲ್ಲಿ ರಾಜಶೇಖರಮೂರ್ತಿ ಹಾಗೂ ಧನಂಜಯ ಕ್ರಮವಾಗಿ 1 ಮತ್ತು 2ನೇ ಸ್ಥಾನ ಪಡೆದರು.
ಪ್ರೋತ್ಸಾಹಿಸಿದ ಕಸಾಪ ಅಧ್ಯಕ್ಷ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ 2ನೇ ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ವಿಜೇತರಾದ ವಿಜಯ್ಕುಮಾರ್ಗೆ 1,900 ರೂ. ಹಾಗೂ ಶೈಲಜಾಗೆ 900 ರೂ.ಗಳನ್ನು ವೈಯಕ್ತಿಕವಾಗಿ ನೀಡಿದರು. ರಿಂಗ್ನಲ್ಲಿ ಗಿಫ್ಟ್, ಬಕೆಟ್ನಲ್ಲಿ ಬಾಲ್ ಹಾಗೂ ಸ್ಕಿಪ್ಪಿಂಗ್ ಆಟಗಳು ನನ್ನ ಬಾಲ್ಯ ಜೀವನವನ್ನು ನೆನಪಿಸಿದವು. ಸೋಲು-ಗೆಲುವು ಈ ಎರಡನ್ನು ಸಮನಾಗಿ ಸ್ವೀಕರಿಸುವುದೇ ಕ್ರೀಡಾ ಮನೋಭಾವ. ಅಂಥ ಮನೋಭಾವ ಬೆಳೆಸಿಕೊಳ್ಳಲು ಇಂಥ ಕ್ರೀಡಾಕೂಟ ಮಹತ್ವದ ಕಾಣಿಕೆ ಸಲ್ಲಿಸುತ್ತದೆ ಎಂದರು.
ಇಂದು ಫೈನಲ್
ದಿಗ್ವಿಜಯ ಡೇರ್ಡೆವಿಲ್ಸ್ ತಂಡ ಸತತ 2 ಪಂದ್ಯ ಗೆದ್ದು ಹಾಗೂ ಸರ್ಕ್ಯುಲೇಷನ್ ಚೀತಾ ತಂಡ ರನ್ರೇಟ್ ಆಧಾರದಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿವೆ. ದಿಗ್ವಿಜಯ ಕಿಂಗ್ಸ್, ಬ್ಯೂರೋ ಬ್ರದರ್ಸ್ ಹಾಗೂ ಪ್ರಿಂಟ್ ಚಾಲೆಂಜರ್ಸ್ ತಲಾ ಒಂದು ಪಂದ್ಯಗಳನ್ನು ಜಯಸಿದವು. ಮೊಫ್ಯುಸಿಲ್ ಹಂಟರ್ಸ್ 2 ಪಂದ್ಯ ಹಾಗೂ ವಿಜಯವಾಣಿ ಸ್ಟಾರ್ಸ್ ತಂಡ ಒಂದು ಪಂದ್ಯ ಸೋಲು ಅನುಭವಿಸಿದೆ. ಭಾನುವಾರ (ಏ.24) 2ನೇ ಹಂತದ ಪಂದ್ಯಾವಳಿ ಹಾಗೂ ಸೆಮಿಫೈನಲ್, ಫೈನಲ್ ಜರುಗಲಿವೆ.