

ನವದೆಹಲಿ: ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್ ಫೋಟೋಶೂಟ್ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಅದಕ್ಕೆ ತಾಜಾ ಉದಾಹಣೆಯಂತಿದೆ ಈ ವಿಡಿಯೋ.
ನವಜೋಡಿಯೊಂದು ಬಾಲಿವುಡ್ ಸ್ಟೈಲ್ನಲ್ಲಿ ಬೈಕ್ ಸಾಹಸ ಮಾಡುವ ಪರಿಕಲ್ಪನೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಸ್ಟ್ ಆಫ್ ದಿ ಬೆಸ್ಟ್ ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿದೆ. ವಿಡಿಯೋದಲ್ಲಿ ಮದುವೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಬೈಕ್ ಮೇಲೆ ಕುಳಿತು ಸಾಹಸ ಮಾಡುವ ಮೂಲಕ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಹಾಗಂತ ನವಜೋಡಿ ನಿಜವಾಗಿಯೂ ಸಾಹಸ ಮಾಡಿಲ್ಲ. ಕ್ರೇನ್ ಮತ್ತು ರೋಪ್ನ ನೆರವಿನಿಂದ ಈ ರೀತಿಯ ಫೋಟೋಶೂಟ್ ಮಾಡಿಸಿದ್ದಾರೆ.
ಅಡ್ಡಲಾಗಿ ಕಾರೊಂದನ್ನು ನಿಲ್ಲಿಸಿ, ಬೈಕ್ಗೆ ರೋಪ್ ಕಟ್ಟಿ ಕ್ರೇನ್ ಮೂಲಕ ಕಾರಿನ ಮೇಲಿಂದ ನವಜೋಡಿ ಬೈಕ್ ಹಾರಿಸುತ್ತಿರುವಂತೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಲಾಗಿದೆ. ವಿಡಿಯೋವನ್ನು ಅ.27ರಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೂ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)