

ತಲಕಾಡು: ಪ್ರಸಿದ್ಧ ಮುಡುಕುತೊರೆ ಜಾತ್ರೆಯಲ್ಲಿ ದೇಸಿ ದನಗಳ ವ್ಯಾಪಾರ ಚುರುಕುಗೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ರಾಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿವೆ.
ರಾತ್ರಿ ವೇಳೆ ಅಲಂಕಾರಿಕ ವಿದ್ಯುತ್ ದೀಪ, ಬ್ಯಾಂಡ್‌ಸೆಟ್ ವಾದ್ಯಮೇಳದೊಂದಿಗೆ ತಮ್ಮ ಮೆಚ್ಚಿನ ರಾಸುಗಳನ್ನು ಜಾತ್ರೆಯ ಮುಖ್ಯರಸ್ತೆಯಲ್ಲಿ ರೈತರು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ.
ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ರಾಸುಗಳ ಖರೀದಿಗೆ ತಂಡೋಪತಂಡವಾಗಿ ರೈತರು ಜಾತ್ರೆಗೆ ಆಗಮಿಸಿದ್ದಾರೆ. ಒಂದು ಲಕ್ಷ ರೂ.ಧಾರಣೆ ಕೆಳಪಟ್ಟ ದುಡಿಯುವ ರಾಸುಗಳ ವ್ಯಾಪಾರ ಭರದಿಂದ ಸಾಗಿದೆ. ಈ ಬಾರಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೋರೇಗೌಡರ 12.5ಲಕ್ಷ ರೂ.ಮೌಲ್ಯದ ಹಾಲು ಹಲ್ಲಿನ (ತಳಿ ಅಭಿವೃದ್ಧಿಗೆ) ಬೀಜದ ಹೋರಿ ಸೇರಿದಂತೆ ತಿ.ನರಸೀಪುರ ತಾಲೂಕು ಚಿದರವಳ್ಳಿ ಹೋರಿ ರಂಗೇಗೌಡರು 75,000 ರೂ.ಮೌಲ್ಯದ ಹೋರಿ ಪ್ರದರ್ಶಿಸಿದ್ದಾರೆ.
ಹಳ್ಳೀಕಾರ್ ರಾಸುಗಳ ಜಾತ್ರೆಗೆ ಪ್ರಸಿದ್ಧಿಯಾದ ಈ ಜಾತ್ರೆಯಲ್ಲಿ ಈ ಬಾರಿ ಇತರ ಜಾತಿಯ ರಾಸುಗಳೂ ಬಂದಿವೆ.
ಹಳ್ಳೀಕಾರ್ ವರ್ಗಕ್ಕೆ ಸೇರಿದ ಎಳೆ ಕರುಗಳು ಜಾತ್ರೆಯಲ್ಲಿ ಹೆಚ್ಚು ಪ್ರದರ್ಶನವಾಗುತ್ತಿವೆ. ಇದರೊಂದಿಗೆ ಗಿಡ್ಡಕಾಲು, ಉದ್ದ ದೇಹದ ಬಂಡೂರು ಎಳೆ ಕುರಿಗಳನ್ನು ಸರಕು ಸಾಗಣೆ ವಾಹನದಲ್ಲಿ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ.
ಆಕರ್ಷಕ ಮೈಕಟ್ಟಿನ ಗಿಡ್ಡಕಾಲಿನ ಬಂಡೂರು ಟಗರನ್ನು ಬುಧವಾರ ರಾತ್ರಿ ಇಲ್ಲಿನ ಮುಖ್ಯರಸ್ತೆಯಲ್ಲಿ ಮೂಗುದಾರ ಹಾಕಿದ್ದ ಟಗರನ್ನು ಯುವಕರು ಹೆಮ್ಮೆಯಿಂದ ಪ್ರದರ್ಶಿಸಿದರು.
ಹಲಗೂರು ಸಮೀಪದ ಗಾಣಾಳು ಗ್ರಾಮದ ಮನು 80,000 ರೂ.ಮೌಲ್ಯದ ತಳಿ ಅಭಿವೃದ್ಧಿಗೆ ಬಳಸುವ ಬಂಡೂರು ಟಗರನ್ನು ಪ್ರದರ್ಶಿಸಿದರು.
ಮಹಾರಾಷ್ಟ್ರ ಹಾಗೂ ಪೂನಾ ಬಳಿಯ ಮಂಚರ್ ಗ್ರಾಮದಿಂದ ಶಿವಾಜಿ ಮತ್ತು ಕಿಶನ್ ಎಂಬ ಇಬ್ಬರು ರೈತರು ಹಳ್ಳೀಕಾರ್ ತಳಿ ಅಭಿವೃದ್ಧಿಗೆ ಹೋರಿ ಖರೀದಿಸಲು ಜಾತ್ರೆಗೆ ಗುರುವಾರ ಆಗಮಿಸಿದ್ದಾರೆ.
ಈಗಾಗಲೆ ಏಳು ಹೋರಿಗಳನ್ನು ಇವರು ಖರೀದಿಸಿದ್ದು, ಕಳೆದ ಇಪ್ಪತ್ತು ವರ್ಷದಿಂದ ಮುಡುಕುತೊರೆ ಜಾತ್ರೆಗೆ ಬರುತ್ತಿರುವ ಕುರಿತು ವಿಜಯವಾಣಿಗೆ ಮಾಹಿತಿ ನೀಡಿದರು.
ರಾಸುಗಳಿಗೆ ಚಿಕಿತ್ಸೆ: ಜಾತ್ರೆಯಲ್ಲಿ ಧೂಳು ಏಳದಂತೆ ಟ್ರಾೃಕ್ಟರ್ ಮೂಲಕ ಆಗಾಗ್ಗೆ ರಸ್ತೆಗೆ ನೀರು ಸಿಂಪಡಿಸಲಾಗು ತ್ತಿದೆ. ಜಾತ್ರೆಯಲ್ಲಿ ತೆರೆದಿರುವ ಪಶುವೈದ್ಯ ಆಸ್ಪತ್ರೆಯಲ್ಲಿ ದೂರದ ಊರಿನಿಂದ ಜಾತ್ರೆಗೆ ನಡೆದು ಬರುವ ರಾಸುಗಳಿಗೆ ಸಾಮಾನ್ಯವಾಗಿ ಕಾಡುವ ಕಾಲುನೋವು ಹಾಗೂ ಗಾಯದ ಸಮಸ್ಯೆಗೆ ತುತ್ತಾಗಿದ್ದ ಸುಮಾರು 80 ರಾಸುಗಳಿಗೆ ಗುರುವಾರ ಚಿಕಿತ್ಸೆ ನೀಡಲಾಗಿದೆ ಎಂದು ಪಶುವೈದ್ಯಾಧಿಕಾರಿ ಡಾ.ರಮ್ಯಾ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಜಾತ್ರೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದ್ದು, ಗುರುವಾರ 40 ರೋಗಿಗಳಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ರೂಪಾ ಮಾಹಿತಿ ನೀಡಿದರು.
ಆರೋಗ್ಯ ರಕ್ಷಣೆಗೆ ಜಾಗೃತಿ: ಜಾತ್ರೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ನಿತ್ಯ ಕ್ಲೋರಿನೇಷನ್ ಮಾಡಲಾಗುತ್ತಿದೆ. ಜನರ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಕರಪತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಾತ್ರಾ ಆರೋಗ್ಯ ಸಹಾಯಕ ರಾಜಣ್ಣ ತಿಳಿಸಿದರು.
ಜಾತ್ರೆಯಲ್ಲಿ ರಾತ್ರಿ ವಿದ್ಯುತ್ ಅಲಂಕಾರ, ಬೆಳಕಿನ ವ್ಯವಸ್ಥೆಯನ್ನು ಚೆನ್ನಾಗಿ ಮಾಡಲಾಗಿದೆ. ಜಾನುವಾರು ಜಾತ್ರೆಯಲ್ಲಿ ರೈತರ ಬಳಸುವ ಕೃಷಿ ಪರಿಕರಗಳ ಮಾರಾಟ ಭರದಿಂದ ಸಾಗಿದೆ. ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ವಸ್ತು ಪ್ರದರ್ಶನ ಮಳಿಗೆಯನ್ನು ತೆರದಿದೆ.
ಕಳ್ಳರ ಬಗೆಗೆ ಎಚ್ಚರದಿಂದಿರಲು ಸೂಚನೆ:
ಜಾತ್ರೆಯಲ್ಲಿ ಜನ ಸೇರುವ ಆಯಕಟ್ಟಿನ ಸ್ಥಳಗಳಲ್ಲಿ ಕಳ್ಳ ಕಾಕರ ಬಗ್ಗೆ ಜನ ಜಾಗೃತರಾಗಿರುವಂತೆ ಪೊಲೀಸ್ ಪ್ರಕಟಣಾ ಪತ್ರಗಳಲ್ಲಿ ತಿಳಿಸಿದ್ದಾರೆ. ಮಹಿಳೆಯರು ಪುಣ್ಯಸ್ನಾನ ಮಾಡುವ ಸೋಪಾನ ಕಟ್ಟೆಯ ಉದ್ದಕ್ಕೂ ನೀರಿನಲ್ಲಿ ಬ್ಯಾರಿಕೇಡ್ ಅಳವಡಿಸಿ ನೀರಿನಾಳದ ಬಳಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ:
ಬುಧವಾರ ರಾತ್ರಿ ಜಾತ್ರಾ ರಂಗಮಂಟಪದಲ್ಲಿ 10 ದಿನಗಳ ಕಾಲ ನಡೆಯುವ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ನೆರವೇರಿಸಿದರು.
ದೂರದ ಜಿಲ್ಲೆಯಿಂದ ಇಲ್ಲಿನ ಜಾನುವಾರು ಜಾತ್ರೆಗೆ ಆಗಮಿಸಿರುವ ರೈತರು ಹಾಗೂ ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವವನ್ನು ತಾಲೂಕು ಸಾರ್ವಜಕನಿಕ ಶಿಕ್ಷಣ ಇಲಾಖೆ ವಹಿಸಿತ್ತು. ತಲಕಾಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮನರಂಜಿಸಿದರು.
ಜಿಪಂ ಸದಸ್ಯ ಟಿ.ಎಚ್.ಮಂಜುನಾಥ್, ತಾಪಂ ಅಧ್ಯಕ್ಷ ಉಮೇಶ್, ಬಿ.ಶೆಟ್ಟಹಳ್ಳಿ ತಾಪಂ ಸದಸ್ಯ ರತ್ನರಾಜು, ಕುಕ್ಕೂರು ಗಣೇಶ್, ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಶಂಭುಲಿಂಗ, ಮುಖಂಡರಾದ ಕುಕ್ಕೂರು ಕೆ.ಎಲ್.ಉಮಾಪತಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.