ಶಿವಮೊಗ್ಗ ದಸರಾಕ್ಕೆ ಚಾಲನೆ ನೀಡಲಿರುವ ದೇಸಾಯಿ

elephant
ದಸರಾ ಜಂಬೂಸವಾರಿಗೆ ಆಗಮಿಸಲಿರುವ ಸಕ್ರೆಬೈಲು ಬಿಡಾರದ ಆನೆಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಬುಧವಾರ ಪೂಜೆ ಸಲ್ಲಿಸಿದರು. ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್, ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಈ ಬಾರಿ ಶಿವಮೊಗ್ಗ ದಸರಾ ಅಂಗವಾಗಿ ಏರ್ಪಡಿಸಿರುವ ಸುಮಾರು 68 ಕಾರ್ಯಕ್ರಮಗಳಲ್ಲಿ 4 ಸಾವಿರಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ. ಅ.12ರವರೆಗೆ ನಡೆಯುವ ದಸರಾ ಉತ್ಸವಕ್ಕೆ ಅ.3ರಂದು ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ದಸರಾ ಯಶಸ್ಸಿಗಾಗಿ 14 ಸಮಿತಿಗಳನ್ನು ರಚಿಸಲಾಗಿದೆ. ಎಂದಿನಂತೆಯೇ ನಗರದ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಚಿತ್ರ ನಟ, ನಟಿಯರು, ಹೆಸರಾಂತ ಕಲಾವಿದರು, ಹಾಡುಗಾರರು, ವಿಜಯದಶಮಿಯಂದು ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅ.3ರಂದು ಸಾಂಸ್ಕೃತಿಕ ದಸರಾ ಕುವೆಂಪು ರಂಗಮಂದಿರದಲ್ಲಿ ಆಯೋಜನೆಯಾಗಿದೆ. ಅದೇ ದಿನ ಸಂಜೆ ಯಕ್ಷದಸರಾ ಇದೆ. 4ರ ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಸರಾ, ಬೆಳಗ್ಗೆ 9.30ಕ್ಕೆ ಚಲನಚಿತ್ರೋತ್ಸವ, 4ರ ಸಂಜೆ 4.30ಕ್ಕೆ ಅಂಬೇಡ್ಕರ್ ಭವನದಲ್ಲಿ ಮೊದಲ ಬಾರಿಗೆ ಪತ್ರಕರ್ತರ ದಸರಾವಿದೆ ಎಂದರು.
ರಂಗ ದಸರಾ, ಯೋಗ ದಸರಾ, ಯುವ ದಸರಾ, ಮಕ್ಕಳ ರಂಗ ದಸರಾ, ಮೊದಲ ಬಾರಿಗೆ ಗಮಕ ದಸರಾ ಆಯೋಜನೆಯಾಗಿದೆ. 6ರ ಬೆಳಗ್ಗೆ 7ಕ್ಕೆ ಪರಿಸರ ದಸರಾ ಅಂಗವಾಗಿ ನೆಹರೂ ಕ್ರೀಡಾಂಗಣದಿಂದ ಸೈಕಲ್ ಜಾಥಾವಿದೆ. 7ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6ಕ್ಕೆ ಏಕ ವ್ಯಕ್ತಿ ನಾಟಕ ಪ್ರದರ್ಶನವಿರುತ್ತದೆ. 8ರ ಬೆಳಗ್ಗೆ 11ಕ್ಕೆ ಕುವೆಂಪು ರಂಗಮಂದಿರದಲ್ಲಿ ಪೌರ ಕಾರ್ಮಿಕ ದಸರಾ, ಅದೇ ದಿನ ಬೆಳಗ್ಗೆ 10ಕ್ಕೆ ಶಿವಪ್ಪ ನಾಯಕ ಅರಮನೆಯಲ್ಲಿ ಕಲಾ ದಸರಾವಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್, ಉಪ ಆಯುಕ್ತ (ಆಡಳಿತ) ಕೆ.ಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ನಾಳೆ ಉದ್ಘಾಟನೆ: ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅ.3ರ ಬೆಳಗ್ಗೆ 11ಕ್ಕೆ ದಸರಾ ಉತ್ಸವವನ್ನು ನಿರ್ದೇಶಕ ಸುನೀಲ್‌ಕುಮಾರ್ ದೇಸಾಯಿ ಉದ್ಘಾಟಿಸಲಿದ್ದಾರೆ. ಸಚಿವ ಮಧುಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಪಾಲಿಕೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net