

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ರಾಜ್ಯ ಬಿಜೆಪಿ ಐಟಿ-ಸೋಷಿಯಲ್ ಮೀಡಿಯಾ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕರ್ನಾಟಕ ಐಟಿ ಮತ್ತು ಸೋಶಿಯಲ್ ಮೀಡಿಯಾ ಅಡ್ಮಿನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ಆಧರಿಸಿ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಕರ್ನಾಟಕ ಐಟಿ ಮತ್ತು ಸೋಶಿಯಲ್ ಮೀಡಿಯಾ ಎಂಬ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರು ಹೊರ ದೇಶಕ್ಕೆ ಹೋದಾಗ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿದೆ. ಪ್ರತಿ ಬಾರಿ ರಾಹುಲ್ ಗಾಂಧಿ ಹೊರದೇಶಕ್ಕೆ ಹೋದಾಗ ಈ ರೀತಿಯ ಕೃತ್ಯಗಳು ಸಂಭವಿಸುತ್ತವೆ ಎಂದು ಆ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದು ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಹಾಳಾಗಿ ಸಮಾಜದಲ್ಲಿ ಗುಂಪುಗಳ ನಡುವೆ ಘರ್ಷಣೆ ಉಂಟು ಮಾಡುವ ಉದ್ದೇಶದಿಂದ ಕೂಡಿದೆ. ಅಂತೆಯೆ ರಾಹುಲ್ ಗಾಂಧಿ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅವಹೇಳನ ಮಾಡಲಾಗಿದೆ. ಹೀಗಾಗಿ ಕೂಡಲೇ ಈ ಸಾಮಾಜಿಕ ಜಾಲತಾಣದಲ್ಲಿ ಈ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.