

Ajit Pawar Skips GST Meeting: ನವದೆಹಲಿಯಲ್ಲಿ ಬುಧವಾರ (ಸೆಪ್ಟೆಂಬರ್ 3) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೊಮ್ಮೆ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಅನೇಕ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಭಾಗವಹಿಸಿದ್ದರು. ಆದರೆ, ಮಹಾರಾಷ್ಟ್ರ ಹಣಕಾಸು ಸಚಿವರಾಗಿರುವ ಅಜಿತ್ ಪವಾರ್ ಈ ಸಭೆಯಿಂದ ದೂರುಳಿದಿದ್ದು, ಅವರ ಅನುಪಸ್ಥಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅದಿತಿ ತತ್ಕರೆ ಹಾಜರಿದ್ದರು ಎನ್ನಲಾಗಿದೆ.
ಪವಾರ್ ಈ ಹಿಂದೆ 2021, 2023 ಮತ್ತು 2024 ರಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಗಳಿಗೆ ಗೈರುಹಾಜರಿದ್ದರು ಎಂದು ಹೇಳಲಾಗುತ್ತಿದೆ. ಪದೇ ಪದೇ ಈ ರೀತಿಯ ಪ್ರಮುಖ ಸಭೆಗಳಿಂದ ಅವರು ದೂರ ಉಳಿಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಅಜಿತ್ ಸಭೆಯಿಂದ ದೂರ ಉಳಿದಿದ್ದಕ್ಕೆ ಅವರ ಕಚೇರಿ ಮುಂಬೈನಲ್ಲಿನ ನಿಶ್ಚಿತಾರ್ಥದ ಕಾರಣ ನೀಡಿತ್ತು, ಆದರೆ, ಬುಧವಾರದ ಸಭೆಯ ಅಲಭ್ಯತೆಗೆ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ. ಪವಾರ್ ಪುಣೆಗೆ ತೆರಳುವ ಮೊದಲು ರಾಜ್ಯ ಸಚಿವ ಸಂಪುಟ ಸಭೆಗಾಗಿ ಮುಂಬೈನಲ್ಲಿದ್ದರು ಎನ್ನಲಾಗಿದೆ.
ಜಿಎಸ್‌ಟಿ ಸುಧಾರಣೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಶ್ಲಾಘಿಸಿದ್ದು, ಇದು ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆ ಎಂದು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ಮಹಾರಾಷ್ಟ್ರ ಜಿಎಸ್‌ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.(ಏಜೆನ್ಸೀಸ್)