ದಾವಣಗೆರೆ ಸೋಂಕಿನ ಮೂಲ ಬಗೆದಷ್ಟೂ ಆಳ

corona virus
Published on

ರಮೇಶ ಜಹಗೀರದಾರ್ ದಾವಣಗೆರೆ

ಬೆಣ್ಣೆನಗರಿ ದಾವಣಗೆರೆಯಲ್ಲಿ ಕರೊನಾ ಸೋಂಕಿನ ಮೂಲ ಕೆದಕಿದಷ್ಟೂ ಸಂಕೀರ್ಣವಾಗುತ್ತಿದೆ. ತಬ್ಲಿಘಿ ನಂಟಿನ ಜತೆಗೆ ಅಜ್ಮೀರ್ ಸಂಪರ್ಕ ತಳುಕು ಹಾಕಿಕೊಂಡು ಇನ್ನಷ್ಟು ವಿಸ್ತಾರ ಸ್ವರೂಪ ಪಡೆದುಕೊಂಡಿದೆ.

ದಾವಣಗೆರೆಗೆ ಸೋಂಕು ತಂದವರು ಇಂಥವರೇ ಎಂದು ಸ್ಪಷ್ಟ ತೀರ್ವನಕ್ಕೆ ಬರಲು ಆಗುತ್ತಿಲ್ಲ. ಸೋಂಕು ಕುಟುಂಬ ಸದಸ್ಯರು, ಸಂಬಂಧಿಕರು, ನೆರೆಹೊರೆಯವರ ಸಂಪರ್ಕದಲ್ಲಿ ಬೆರೆತು ಹೋಗಿದೆ. ಅಧಿಕಾರಿಗಳ ತನಿಖೆಯ ಜಾಡು ಹಿಡಿದು ಹೊರಟರೆ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ.

ಏಪ್ರಿಲ್​ನಲ್ಲಿ ಲಾಕ್​ಡೌನ್ ಸ್ವಲ್ಪ ಸಡಿಲಿಕೆಯಾದಾಗ ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶವಾಯಿತು. ಒಂದಷ್ಟು ಮಂಡಕ್ಕಿ ಭಟ್ಟಿಗಳ ಬಾಗಿಲು ತೆರೆದವು.ಕೃಷಿ ಉತ್ಪನ್ನಗಳ ಮಾರಾಟ, ಸಾಗಾಟ ನಡೆಯಿತು. ಆ ಹಂತದಲ್ಲಿ ಯಾವ ಯಾವ ಜಿಲ್ಲೆ, ರಾಜ್ಯಗಳಿಂದ ಸರಕುಗಳನ್ನು ಹೊತ್ತ ವಾಹನಗಳು ಓಡಾಡಿದವೋ ಗೊತ್ತಿಲ್ಲ. ಸೋಂಕಿತ ಪ್ರದೇಶಗಳಲ್ಲಿ ಸುತ್ತಾಡಿ ಬಂದ ಲಾರಿ ಚಾಲಕರು, ಕ್ಲೀನರ್​ಗಳು, ಹಮಾಲರು ಯಾರಾದರೂ ಬಾಷಾನಗರದ ಸ್ಟಾಫ್ ನರ್ಸ್ ಬಳಿ ಚಿಕಿತ್ಸೆ ಪಡೆದಿರಬಹುದು ಎಂಬುದು ಒಂದು ಸಾಧ್ಯತೆಯಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಬಾಷಾನಗರದ ಹಿಂದೆ ಮತ್ತು ಮುಂದೆ ಮಂಡಕ್ಕಿ ಭಟ್ಟಿಗಳಿವೆ. ಸ್ಟಾಫ್ ನರ್ಸ್ ಸಂಬಂಧಿಕರು, ಸ್ನೇಹಿತರ ಮನೆಗಳಿಗೇ ಹೋಗಿ ಚಿಕಿತ್ಸೆ ನೀಡಿ ಬಂದಿದ್ದರು ಎಂಬುದು ಇನ್ನೊಂದು ಎಳೆ. ಇಮಾಮ್ಗರದ ಗೃಹಿಣಿಯೊಬ್ಬರ ಮನೆಗೆ ಹೋಗಿ ಆಕೆಗೆ ಡ್ರಿಪ್ ಹಾಕಿ ಚಿಕಿತ್ಸೆ ನೀಡಿದ್ದರು. ಏಪ್ರಿಲ್ ಮೊದಲ ವಾರ ವ್ಯಕ್ತಿಯೊಬ್ಬ ಹಾಸನ, ಜಾವಗಲ್ ಪ್ರದೇಶಗಳಿಗೆ ದಾವಣಗೆರೆಯಿಂದ ಈರುಳ್ಳಿ ತೆಗೆದುಕೊಂಡು ಹೋಗಿದ್ದ. ಹಾಸನದಲ್ಲಿ ಈರುಳ್ಳಿ ಅನ್​ಲೋಡ್ ಮಾಡಿದ ನಂತರ ಅಲ್ಲಿಂದ 20 ಕಿ.ಮೀ. ದೂರದ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಅಲ್ಲಿಯೇ ಮಲಗಿದ್ದರು ಎನ್ನಲಾಗಿದೆ.

ಈರುಳ್ಳಿ ವಾಹನದಲ್ಲಿ ಹೋಗಿ ಬಂದಿದ್ದ ಆ ವ್ಯಕ್ತಿಯು, ನರ್ಸ್ನಿಂದ ಚಿಕಿತ್ಸೆ ಪಡೆದಿದ್ದ ಇಮಾಮ್ ನಗರದ ಮಹಿಳೆಯ ಸಂಬಂಧಿಕ ಎಂಬುದು ಮಹತ್ವದ ವಿಚಾರ. ಈರುಳ್ಳಿ ಸಾಗಣೆ ಮಾಡಿ ಬಂದಿದ್ದ ವ್ಯಕ್ತಿಯೇ ಸೋಂಕು ಹೊತ್ತು ತಂದನೆ ಎಂಬುದು ತನಿಖಾಧಿಕಾರಿಗಳಿಗೆ ಇರುವ ಇನ್ನೊಂದು ಅನುಮಾನ. ಇಮಾಮ್​ ನಗರದ  ಮಹಿಳೆ ಮತ್ತು ಜಾಲಿನಗರದ ವೃದ್ಧನ ಕುಟುಂಬದವರು ಸಂಬಂಧಿಕರು. ವೃದ್ಧನ ಕುಟುಂಬದ ಮಹಿಳೆಯೊಬ್ಬರು ಇಮಾಮ್ಗರದ ಮಹಿಳೆಯ ಆರೋಗ್ಯ ವಿಚಾರಿಸಲು ಹೋಗಿ ಬಂದಿದ್ದರು ಎನ್ನಲಾಗಿದೆ.ಕಳ್ಳುಬಳ್ಳಿ ಸಂಬಂಧದಲ್ಲೇ ಈ ವಿಚಾರ ಗಿರಕಿ ಹೊಡೆಯುತ್ತದೆ.

ಅಜ್ಮೀರ್ ನಂಟು

ದಾವಣಗೆರೆಯ ಶಿವನಗರದ ಕುಟುಂಬ ವೊಂದರ 7 ಮಂದಿ ಮಾ. 21ರಂದು ಅಜ್ಮೀರ್​ಗೆ ಪ್ರವಾಸ ಹೋಗಿದ್ದರು. ಮೇ 3 ರಂದು ಅವರು ವಾಪಸಾಗಿದ್ದು, ಅವರಲ್ಲಿ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ನಂಟು ಇನ್ನೂ ಎಲ್ಲೆಲ್ಲಿ ತಳುಕು ಹಾಕಿಕೊಂಡಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ನಡುವೆ ಗುಜರಾತ್​ಗೆ ತೆರಳಿದ್ದ ಜಿಲ್ಲೆಯ 7 ಮಂದಿ ತಬ್ಲಿಘಿಗಳು ವಾಪಸಾಗಿದ್ದು ಅವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net