ಠೇವಣಿ ಇಟ್ಟಿದ್ದ ಹಣವನ್ನು ಸೂಕ್ತ ಸಮಯಕ್ಕೆ ಕೊಡದ ಬ್ಯಾಂಕ್​: ವಿಕಲಾಂಗ ಸಾವು, ಠಾಣೆ ಮೆಟ್ಟಿಲೇರಿದ ಕುಟುಂಬ

Kerala Family 1
Published on

ಕೊಚ್ಚಿ: ಠೇವಣಿ ಇಟ್ಟಿದ್ದ ಹಣವನ್ನು ಸಕಾಲಕ್ಕೆ ನೀಡದ ಪರಿಣಾಮ ವಿಕಲಾಂಗನೊಬ್ಬ ಚಿಕಿತ್ಸೆ ದೊರೆಯದೆ ಸಾವಿಗೀಡಾಗಿರುವ ಕರುಣಾಜನಕ ಘಟನೆ ಕೇರಳದ ಇರಿಂಜಲಕುಡದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕರುವಣ್ಣೂರ್ ತೆಲಪ್ಪಿಲ್ಲಿ ಮೂಲದ ಸಸಿ (53) ಎಂದು ಗುರುತಿಸಲಾಗಿದೆ. ಸೆ.30ರಂದು ಮೃತಪಟ್ಟಿದ್ದು, ಇದೀಗ ಬ್ಯಾಂಕ್​ ವಿರುದ್ಧ ಸಸಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ನರಗಳ ಸಮಸ್ಯೆಯಿಂದ ಸಸಿಯ ಕೈ ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಇದಕ್ಕಾಗಿ ಆತ ಚಿಕಿತ್ಸೆ ಪಡೆಯುತ್ತಿದ್ದಾಗ ಏಕಾಏಕಿ ರಕ್ತದೊತ್ತಡ ಹೆಚ್ಚಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ತಕ್ಷಣವೇ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬ್ಯಾಂಕ್‌ನ ಕಾರ್ಯದರ್ಶಿಯನ್ನು ಸಂಪರ್ಕಿಸಿ ಹಣಕ್ಕಾಗಿ ಒತ್ತಾಯಿಸಿದರು. ಆದರೆ, ಬ್ಯಾಂಕ್​ನವರು ಕೇವಲ 9000 ರೂಪಾಯಿ ನೀಡುವುದಾಗಿ ಹೇಳಿದರು. ಅಂತಿಮವಾಗಿ ವಾರ್ಡ್ ಸದಸ್ಯರೂ ಸೇರಿದಂತೆ ಅವರ ಮಧ್ಯಸ್ಥಿಕೆಯಲ್ಲಿ ಬ್ಯಾಂಕ್ 1 ಲಕ್ಷ ರೂ. ನೀಡಿತು.

ಶಸ್ತ್ರಚಿಕಿತ್ಸೆಯ ನಂತರ ಸಸಿ ಒಂಬತ್ತು ದಿನಗಳನ್ನು ಐಸಿಯುನಲ್ಲಿ ಮತ್ತು ಮೂವತ್ತು ದಿನ ಉಪಶಾಮಕ ಆರೈಕೆಯಲ್ಲಿ ಕಳೆದರು. ಇದರ ನಡುವೆ ಬ್ಯಾಂಕ್ ಹಲವು ಕಂತುಗಳಲ್ಲಿ ಒಟ್ಟು 1,90,000 ರೂ.ಗಳನ್ನು ಮಾತ್ರ ನೀಡಿದೆ. ಆದರೆ, ಸಸಿ ಮತ್ತು ಅವರ 77 ವರ್ಷದ ತಾಯಿ ತಂಗಾ ಅವರ ಹೆಸರಿನಲ್ಲಿ ಹದಿನಾಲ್ಕು ಲಕ್ಷ ರೂ. ಖಾತೆಯಲ್ಲಿ ಜಮಾ ಆಗಿತ್ತು. ತಂಗಾ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ. ಆಕೆಯ ಚಿಕಿತ್ಸೆಗೆ ತಿಂಗಳಿಗೆ ಸುಮಾರು 3000 ರೂ. ಬೇಕಿದೆ. ತಾಯಿ ಮತ್ತು ಮಗ ಅನಾರೋಗ್ಯದಿಂದ ಬಳಲುತ್ತಿದ್ದಾಗ ಕುಟುಂಬವು ಜಮೀನು ಮಾರಿ ಹಣವನ್ನು ಬ್ಯಾಂಕ್‌ಗೆ ಹಾಕಿತ್ತು. ಬ್ಯಾಂಕಿನಿಂದ ಬರುವ ಬಡ್ಡಿಯನ್ನು ಬಳಸಿಕೊಂಡು ಚಿಕಿತ್ಸೆ ಪಡೆಯಬಹುದು ಎಂದು ಅವರು ಆಶಿಸಿದರು. ಆದರೆ, ಚಿಕಿತ್ಸೆಗೆ ಸರಿಯಾದ ಸಮಯಕ್ಕೆ ಹಣ ಕೊಡದ ಪರಿಣಾಮ ಸಸಿ ಮೃತಪಟ್ಟಿದ್ದಾನೆ ಎಂದು ಆರೋಪ ಮಾಡಿರುವ ಕುಟುಂಬ ಬ್ಯಾಂಕ್​ ವಿರುದ್ಧ ದೂರು ದಾಖಲಿಸಿದೆ.

ಸಸಿಯ ಚಿಕಿತ್ಸೆಗಾಗಿ ಕುಟುಂಬ ನಾನಾ ಕಡೆ ಸಾಲ ಮಾಡಿತ್ತು. ಸಾಲ ಮರುಪಾವತಿಗೆ ಬ್ಯಾಂಕ್‌ನಿಂದ ಹಣದ ಅಗತ್ಯವಿದೆ ಎಂದು ಅವರ ಸಹೋದರಿ ಮಿನಿ ರಾಜು ಹೇಳಿದ್ದಾರೆ. ಬ್ಯಾಂಕ್​ನಿಂದ ಹಣ ಮರಳಿ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ. ಮೃತ ಸಸಿಯ ತಂದೆ ಮಣ್ಣಿನ ಕೆಲಸ ಮಾಡುತ್ತಿದ್ದರು. ಅವರು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net