

ಶೃಂಗೇರಿ: ರೈತರಿಗೆ ಎರೆಹುಳ ಘಟಕ, ಹನಿ ನೀರಾವರಿ, ನೀರು ಕೊಯ್ಲು ಘಟಕ, ಜಾಯಿಕಾಯಿ ಪ್ರದೇಶ ವಿಸ್ತರಣೆ ಇತ್ಯಾದಿಗಳಿಗೆ ಸರ್ಕಾರದ ಯೋಜನೆಯಂತೆ ಸಹಾಯಧನ ವಿತರಿಸಲು ಜು. 15ರವರೆಗೆ ಅವಕಾಶವಿದ್ದು ರೈತರು ಇದರ ಸದುಪಯೋಗ ಪಡೆಯಲು ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ರಾಧಿಕಾ ತಿಳಿಸಿದರು.
ಗುರುವಾರ ಮೆಣಸೆ ಗ್ರಾಪಂನ ಗ್ರಾಮಸಭೆಯಲ್ಲಿ ಅವರು ಮಾತನಾಡಿ, ಲಘು ಪೋಷಕಾಂಶಗಳು, ಸೂಕ್ಷ್ಮಾಣು ಜೀವಿ ಗೊಬ್ಬರಗಳನ್ನು ಸಹ ಖರೀದಿಸಬಹುದು ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಗ್ರಾಪಂ ಸದಸ್ಯ ತ್ರಿಮೂರ್ತಿ ಮಾತನಾಡಿ, ಅರ್ಜಿ ಸಲ್ಲಿಸುವ ನಿಗದಿತ ಸಮಯ ವಿಸ್ತರಣೆ ಮಾಡಬೇಕು. ಇದರಿಂದ ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗುವುದು ಎಂದರು.
ಪಿಡಿಒ ನಾಗಭೂಷಣ್ ಮಾತನಾಡಿ, ತಾಲೂಕಿನ ಒಂಬತ್ತು ಗ್ರಾಪಂಗಳಲ್ಲಿ ಒಂದು ಗ್ರಾಮವನ್ನು ಪ್ರಥಮವಾಗಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆಯಾದ ಗ್ರಾಮದಲ್ಲಿ ಇರುವ ಮನೆ, ಬಾವಿ, ರಸ್ತೆ, ಶಾಲೆ ಇತ್ಯಾದಿ ಮೂಲ ಸೌಕರ್ಯಗಳನ್ನು ಹೊಂದಿರುವ ಜಾಗ ಸೆಕ್ಷನ್ 41 ಆದ ಪಕ್ಷದಲ್ಲಿ ಅದರ ಕುರಿತು ನಕ್ಷೆ ತಯಾರಿಸಿ ನಮಗೆ ನೀಡಬೇಕು ಎಂದು ಡಿ.ಸಿ ಆದೇಶ ಬಂದಿದೆ. ಈ ನಿಟ್ಟಿನಲ್ಲಿ ಮೆಣಸೆ ಗ್ರಾಮವನ್ನು ನಾವು ಆಯ್ಕೆ ಮಾಡಿಕೊಂಡಿದ್ದು ಅರಣ್ಯ, ಕಂದಾಯ, ಸರ್ವೇಯರ್ ಹಾಗೂ ಪಿಡಿಒಗಳು ಅದರ ಪ್ರಕ್ರಿಯೆಗೆ ಶೀಘ್ರದಲ್ಲಿ ಚಾಲನೆ ನೀಡಿ ನಕ್ಷೆಯನ್ನು ಡಿಸಿಗೆ ಕಳುಹಿಸಲಾಗುವುದು ಎಂದರು.
ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ತ್ರಿಮೂರ್ತಿ, ಅಜಿತ್ ಶೆಟ್ಟಿ, ರಾಜು ಶೂನ್ಯ, ಸುಷ್ಮಾ ಸುರೇಂದ್ರ, ಸುಮಲತಾ ಇತರಿರಿದ್ದರು.