

ಸೊರಬ: ರೈತರು ಬೆಳೆಗಳಿಗೆ ಅಧಿಕ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ನೈಸರ್ಗಿಕವಾಗಿ ದೊರೆಯುವ ಜೇನು ವಿನಾಶದತ್ತ ಸಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಮಂಜುನಾಥ್ ಹೇಳಿದರು.
ತಾಲೂಕಿನ ತಲಕಾಲಕೊಪ್ಪದಲ್ಲಿ ಮಂಗಳವಾರ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ, ತೋಟಗಾರಿಕೆ ಇಲಾಖೆ ಹಾಗೂ ನಿಸರಾಣಿ ಗ್ರಾಮದ ಮಧುಬನ ಜೇನು ಸಂರಕ್ಷಣಾ ಮತ್ತು ಮಾರಾಟ ಸಹಕಾರ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜೇನು ಕೃಷಿ ಮತ್ತು ಜೈವಿಕ ಗೊಬ್ಬರದ ಬಳಕೆಯ ಮಹತ್ವ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರೈತರು ತೋಟ, ಹೊಲ, ಗದ್ದೆಗಳಲ್ಲಿ ಜೇನು ಪೆಟ್ಟಿಗೆ ಇಡುವುದರಿಂದ ಬೆಳೆಗಳು ಪರಾಗಸ್ಪರ್ಶವಾಗಿ ಅಧಿಕ ಇಳುವರಿ ಪಡೆಯಬಹುದು. ರಾಸಾಯನಿಕ ಗೊಬ್ಬರಗಳ ಬದಲು ರೈತರು ತಮ್ಮ ಭೂಮಿಗೆ ಸಾವಯವ ಜೈವಿಕ ಗೊಬ್ಬರ ಬಳಕೆ ಮಾಡಿದಲ್ಲಿ ಮಣ್ಣಿನ ಫಲವತ್ತತೆ ಹಾಗೂ ಪೋಷಕಾಂಶಗಳನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.
ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸರ್ಕಾರದಿಂದ ಹನಿ ನೀರಾವರಿ, ಕೃಷಿ ಹೊಂಡ, ವ್ಯಾಪಾರ-ವಹಿವಾಟು, ಕೃಷಿ ಯಂತ್ರೋಪಕರಣಗಳು ಹಾಗೂ ತೆಂಗು ಬೆಳೆಗಾರರಿಗೆ ಉತ್ತೇಜನ ನೀಡುವುದರ ಜತೆಗೆ ವಿವಿಧ ಯೋಜನೆಯಡಿ ಸಹಾಯಧನ ಪಡೆಯ ಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ ಮಾತನಾಡಿ, ಮಧುಬನ ಸಹಕಾರ ಸಂಘ ಸ್ಥಾಪನೆಯಾಗಿ 30 ವರ್ಷಗಳು ಸಂದಿದ್ದು ಈಗಾಗಲೇ ನೂರಕ್ಕೂ ಹೆಚ್ಚು ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಯುವಜನತೆ ಕೃಷಿಯ ಜತೆಗೆ ಜೇನು ಕೃಷಿಯಲ್ಲಿ ತೊಡಗಿದರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದರು.
ಮಣ್ಣು ಪರೀಕ್ಷೆ ಮತ್ತು ಜೈವಿಕ ಗೊಬ್ಬರದ ಬಳಕೆ ಮಹತ್ವದ ಬಗ್ಗೆ ಶಿವಮೊಗ್ಗ ಜೈವಿಕ ಕೇಂದ್ರದ ಸುಪ್ರೀತಾ ಮತ್ತು ಜೇನುಕೃಷಿ ತಜ್ಞ ವಿಘ್ನೇಶ್ ತಲಕಾಲಕೊಪ್ಪ ಜೇನು ಕೃಷಿ ತರಬೇತಿ ಬಗ್ಗೆ ಮಾಹಿತಿ ನೀಡಿದರು. ಮಧುಬನ ಜೇನು ಸಂರಕ್ಷಣಾದ ಅಧ್ಯಕ್ಷ ಟಿ.ಎಸ್.ಸುದರ್ಶನ, ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕ ಕೆ.ಆರ್.ಅಕ್ಷಯ್, ಹಾಪ್‌ಕಾಮ್ಸ್ ನಿರ್ದೇಶಕ ಮೋಹನ್ ಉಂಬಳೆಬೈಲು ಸಾಗರ, ನಾಗರಾಜ್, ವಿಶ್ವೇಶ್ವರ ಸೇರಿದಂತೆ ತರಬೇತಿದಾರರು ಇದ್ದರು.