ಮೃತನ ಜೇಬಲ್ಲಿ ಟಿಕೆಟ್ ಸಿಗಲಿಲ್ಲವೆಂದು ಪರಿಹಾರ ನಿರಾಕರಣೆ ಸರಿಯಲ್ಲ: ಹೈಕೋರ್ಟ್ ಮಹತ್ವದ ಆದೇಶ

highcourt
Published on

ಬೆಂಗಳೂರು: ರೈಲು ಅಪಘಾತದಲ್ಲಿ ನಿಧನ ಹೊಂದಿದ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್ ಸಿಗಲಿಲ್ಲವೆಂಬ ನೆಪದಲ್ಲಿ ಆತನ ಕುಟುಂಬದವರಿಗೆ ಪರಿಹಾರ ನಿರಾಕರಿಸುವುದು ಒಪ್ಪುವಂತದ್ದಲ್ಲ ಎಂದಿರುವ ಹೈಕೋರ್ಟ್, ಅಪಘಾತದಲ್ಲಿ ಮೃತಪಟ್ಟವನ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ಕೊಡಲು ಆದೇಶಿಸಿದೆ.

ದಶಕದ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಎಂಬುವರ ಪತ್ನಿ ಹಾಗೂ ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

2015ರ ಏ.6ರಂದು ವಿಜಯಪುರ ಮತ್ತು ಮಿಂಚಿನಹಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಟ್ರ್ಯಾಕ್‌ನಲ್ಲಿ ಓರ್ವ ಪುರುಷನ ಮೃತದೇಹ ಪತ್ತೆಯಾಗಿದೆ ಎಂದು ರೈಲ್ವೆಯ ಲೋಕೋಪೈಲಟ್ ವಾಕಿಟಾಕಿ ಮೂಲಕ ಸಂದೇಶ ರವಾನಿಸಿದ್ದರು. ಈ ಸಂಬಂಧ ಎ್ಐಆರ್ ಕೂಡ ದಾಖಲಾಗಿತ್ತು ಎಂದು ರೈಲ್ವೆ ನ್ಯಾಯಾಧಿಕರಣ ತಿಳಿಸಿದೆ. ಮರಣೋತ್ತರ ಪರೀಕ್ಷಾ ವರದಿಯೂ ಹಲವು ಅಂಗಗಳಿಗೆ ಗಾಯಗಳಾಗಿ ವ್ಯಕ್ತಿ ಸಾವನಪ್ಪಿರುವುದಾಗಿ ಹೇಳಿದೆ.

ಒಟ್ಟಾರೆ ಲಭ್ಯವಿರುವ ಎಲ್ಲ ದಾಖಲೆಗಳು, ರೈಲ್ವೆ ಅಪಘಾತದಲ್ಲಿಯೇ ಸಾವನ್ನಪ್ಪಿರುವುದಾಗಿ ಖಚಿತಪಡಿಸುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಟಿಕೆಟ್ ಕಳೆದುಹೋಗಿರಬಹುದು. ಆದರೆ, ಟಿಕೆಟ್ ಜೇಬಿನಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ನ್ಯಾಯಮಂಡಳಿ ಪರಿಹಾರಕ್ಕೆ ಅರ್ಹನಲ್ಲವೆಂದು ಹೇಳುವಂತಿಲ್ಲ. ಸಹಜವಾಗಿ ಮೃತನ ಕುಟುಂಬದವರು, ಅಪಘಾತಕ್ಕೆ ಒಳಗಾಗಿದ್ದರಿಂದ ಆ ಸಂದರ್ಭದಲ್ಲಿ ಅವರು ಟಿಕೆಟ್ ಬಗ್ಗೆ ಆಲೋಚಿಸಿ ಅದನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ನಂತರ ಸಲ್ಲಿಸದೆ ಇರಬಹುದು. ಹಾಗೆಂದ ಮಾತ್ರಕ್ಕೆ ಮೃತನ ಕುಟುಂಬ ಪರಿಹಾರಕ್ಕೆ ಅರ್ಹವಲ್ಲವೆಂದು ಹೇಳಲಾಗದು ಎಂದು ಆದೇಶೀಸಿದ ನ್ಯಾಯಾಲಯ, ಮೃತನ ಕುಟುಂಬದ ಮೇಲ್ಮನವಿ ಮಾನ್ಯ ಮಾಡಿ ಬಡ್ಡಿಸಹಿತ 8 ಲಕ್ಷ ರೂ. ಪರಿಹಾರವನ್ನು ಕುಟುಂಬಕ್ಕೆ ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net