

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ (ಜನವರಿಯಿಂದ ಜು.26 ರವರೆಗೆ) 178 ಡೆಂಘೆ ಪ್ರಕರಣಗಳು ದಾಖಲಾಗಿದ್ದು ನಗರ ಪ್ರದೇಶಕ್ಕೆ ಹೋಲಿಸಿದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಇದಕ್ಕೆ ಡೆಂಘೆ ನಿಯಂತ್ರಣ ನಿಟ್ಟಿನಲ್ಲಿ ಮತ್ತಷ್ಟು ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಡೆಂಘೆ ಜ್ವರ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿವಿಧ ಇಲಾಖೆಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಬೀಳುವುದರ ನಡುವೆ ಡೆಂಘೆ ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ. ಇದರ ನಿಯಂತ್ರಣಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಾಗೃತಿ ಕಾರ್ಯಕ್ರಮವನ್ನು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಆಂದೋಲನದ ರೀತಿ ಕೈಗೊಳ್ಳುವುದರ ಜತೆಗೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾವಹಿಸಲು ಅಧಿಕಾರಿಗಳ ತಂಡವನ್ನು ನಿಯೋಜಿಸಬೇಕು ಎಂದರು.
ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೂಸಿಯಾಗಳನ್ನು ಬೆಳೆಸಿ, ಅಗತ್ಯ ಬಿದ್ದಾಗ ಉಚಿತವಾಗಿ ಸಾರ್ವಜನಿಕರಿಗೆ ಒದಗಿಸಬೇಕು. ಜಿಲ್ಲಾದ್ಯಂತ ಸಂಚಾರಿ ಪ್ರಚಾರದ ವಾಹನಗಳು ಡೆಂಗ್ಯೂ ಜ್ವರದ ತೀವ್ರತೆಯ ದುಷ್ಪರಿಣಾಮಗಳು ಹಾಗೂ ಸೊಳ್ಳೆಗಳ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಂಜುಳಾ ದೇವಿ, ಜಿಲ್ಲಾ ಕುಷ್ಠ ರೋಗ ನಿಮೂರ್ಲನಾಧಿಕಾರಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ ಮತ್ತಿತರರು ಇದ್ದರು.
*ಲಾರ್ವಾ ಸಮೀೆಕ್ಷೆ ಗೆ ಸೂಚನೆ*
ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾ ಸಮೀೆ ಕ್ಷೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. ಸ್ಥಳಿಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಣ, ಕಾರ್ಮಿಕ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಲಾರ್ವಾ ಸಮೀಕ್ಷೆ ಕೈಗೊಳ್ಳಬೇಕು ಎಂದರು.