ಮಧ್ಯಂತರ ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲು ಸಿದ್ಧ ಎಂದಿದ್ದ ಡೊನಾಲ್ಡ್ ಟ್ರಂಪ್
ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ 'ವೀಟೋ' ಎಂದು ಬರೆದಿರುವ ಟೋಪಿ ಫೋಟೋ ಪೋಸ್ಟ್
ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಮುನ್ನಡೆ ಸಾಧಿಸಿದ ಡೆಮೋಕ್ರಾಟ್‌ಗಳು
Donald Trump: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದಂತೆ, ಡೆಮೋಕ್ರಾಟ್‌ಗಳೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಪಕ್ಷವು ಸೆನೆಟ್ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಮುನ್ನಡೆ ಸಾಧಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಟ್ರಂಪ್, "ನಾನು ಈ ಫಲಿತಾಂಶಗಳನ್ನು ಸಂಪೂರ್ಣವಾಗಿ ಸ್ವೀಕರಿಸಲು ಸಿದ್ಧನಿದ್ದೇನೆ" ಎಂದು ದಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ನಾವು ಡೆಮೋಕ್ರಾಟ್‌ಗಳೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಬಹುಶಃ ನಾವು ಏನನ್ನಾದರೂ ಒಟ್ಟಾಗಿ ಪರಿಹರಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದರು.
ಸಂದರ್ಶನ ನೀಡಿದ ಕೆಲವೇ ನಿಮಿಷಗಳಲ್ಲಿ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ವಿಟೋ ಅಧಿಕಾರ (VETO) ಎಂದು ಬರೆದಿದ್ದ ಕ್ಯಾಪ್ ಒಂದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತಗೆ ಯಾವುದೇ ಶೀರ್ಷಿಕೆ ಬರೆಯದಿದ್ದರೂ, ಮುಂಬರುವ ದಿನಗಳಲ್ಲಿ ಡೆಮೋಕ್ರಾಟ್‌ಗಳ ನಿರ್ಧಾರಕ್ಕೆ ವಿಟೋ ಬಳಸಿ ತಡೆ ಒಡ್ಡುವ ಸೂಚನೆ ನೀಡಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
‘ಬ್ಯಾಲಟ್‌ನಲ್ಲಿ ನನ್ನ ಹೆಸರಿದ್ದಿದ್ದರೆ ನಮಗೆ ದೊಡ್ಡ ಗೆಲುವು ಸಿಗುತ್ತಿತ್ತು’ ಎಂದು ಬರೆದುಕೊಂಡಿದ್ದ ಟ್ರಂಪ್, ಪಕ್ಷದ ಹಿನ್ನಡೆಗೆ ತಾವು ಚುನಾವಣಾ ರೇಸ್‌ನಲ್ಲಿ ಇಲ್ಲದಿರುವುದೇ ಕಾರಣ ಎಂದಿದ್ದರು. ಅಲ್ಲದೆ, ಸೆನೆಟರ್ ಡಾರ್ಲಿನ್ ಗ್ರಹಾಂ ಹಾಗೂ ಅಟಾರ್ನಿ ಜನರಲ್ ಕೆನ್ ಪಾಕ್ಸ್‌ಟನ್ ಅವರನ್ನು ಬೆಂಬಲಿಸಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ವರದಿಗಳ ಪ್ರಕಾರ ಅಂಕಿಅಂಶಗಳ ಪ್ರಕಾರ, ಡೆಮೋಕ್ರಾಟ್ ಪಕ್ಷವು ಸೆನೆಟ್‌ನ 191 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ರಿಪಬ್ಲಿಕನ್ ಪಕ್ಷವು 110 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಹಾಗೆಯೇ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮೋಕ್ರಾಟ್‌ಗಳು 52 ಸೀಟುಗಳಲ್ಲಿ ಮತ್ತು ರಿಪಬ್ಲಿಕನ್ನರು 40 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ರಿಪಬ್ಲಿಕನ್ನರಿಗೆ ಭಾರಿ ಮುಖಭಂಗವಾಗಿದೆ.