

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವುದು, ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು, ಅವುಗಳ ಮಹತ್ವವನ್ನು ಹೊಸ ಪೀಳಿಗೆಗೆ ತಿಳಿಸಿ ಕೊಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದೇ 15ರಂದು ಪ್ರಜಾಪ್ರಭುತ್ವ ದಿನದ ಅಂಗವಾಗಿ 2,500 ಕಿ.ಮೀ. ಉದ್ದದ ಮಾನವ ಸರಪಳಿ ಆಯೋಜಿಸಲಾಗಿದೆ.
2023ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದ ನಮ್ಮ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಓದುವ ನಿಯಮವನ್ನು ಜಾರಿಗೊಳಿಸಿತು. ಅದಾದ ಬಳಿಕ ಸಂವಿಧಾನದ ಜಾಗೃತಿ ಜಾಥಾದ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂವಿಧಾನದ ಆಶಯಗಳ ಪ್ರಚಾರದ ಕುರಿತಂತೆ ಪ್ರಯತ್ನ ನಡೆಸಿದ ಸರ್ಕಾರವು ಈ ಬಾರಿ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್ನಿಂದ ಚಾಮರಾಜನಗರದವರೆಗೆ ಸುಮಾರು 2500 ಕಿಲೋಮೀಟರ್ಗಳವರೆಗೆ ಮಾನವ ಸರಪಳಿ ರಚಿಸುವ ಮೂಲಕ ಸಮಾನತೆ ಮತ್ತು ಐಕ್ಯತೆಯ ಸಂದೇಶ ಸಾರಲಿದ್ದು, ಇದೇ ಸಂದರ್ಭದಲ್ಲಿ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಸರ್ಕಾರ ಏಕೆ ಮಾತನಾಡಬೇಕು?: ಇತ್ತೀಚಿನ ಸಂದರ್ಭವನ್ನು ನಾನು ಗಮನಿಸಿದಂತೆ, ಹಲವಾರು ಕಾರಣಗಳಿಗಾಗಿ ನಮ್ಮ ಸುತ್ತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅವೈಜ್ಞಾನಿಕ, ಧಾರ್ವಿುಕ ಮೌಢ್ಯತೆಯ ವಾತಾವರಣವು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ವಿದ್ಯಾವಂತ ಯುವ ಸಮುದಾಯವೇ ಇದಕ್ಕೆ ಬಲಿಪಶು ಆಗಿರುವಂತೆ ಕಾಣಿಸಿದ ಪರಿಣಾಮ, ಬಾಬಾಸಾಹೇಬರ ಆಲೋಚನೆಗಳು ಮತ್ತು ನಿಜವಾದ ಪ್ರಜಾಪ್ರಭುತ್ವದ ಆಶಯಗಳಿಗೆ ಮತ್ತೆ ಅವರೆಲ್ಲರೂ ಮರಳಬೇಕು ಎಂಬ ಸದುದ್ದೇಶದಿಂದ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ.
ಈ ದಿನ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅಂಶಗಳು ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿದ್ದು ಇದನ್ನು ಪಡೆದುಕೊಳ್ಳಲು ಈ ದೇಶ ಸಾಕಷ್ಟು ತ್ಯಾಗ, ಬಲಿದಾನಗಳನ್ನು ಕಂಡಿದೆ. ಇಷ್ಟೆಲ್ಲ ಕಷ್ಟಪಟ್ಟು ಪಡೆದುಕೊಂಡ ಪ್ರಜಾಪ್ರಭುತ್ವವನ್ನು ನಾವು ನಮ್ಮದೇ ತಪ್ಪಿನಿಂದ ಕಳೆದುಕೊಂಡರೆ ಮುಂದೆ ಪಶುಗಳಂತೆ ಬದುಕಬೇಕಾಗುತ್ತದೆ ಎಂಬ ಬಾಬಾಸಾಹೇಬರ ಮಾತುಗಳನ್ನು ಈ ವೇಳೆ ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ. ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಮಾತನಾಡುವುದು ಸರ್ಕಾರದ ಆಯ್ಕೆ ಆಗಿರದೆ ಕರ್ತವ್ಯ ಆಗಿರುವ ಕಾರಣ, ಈ ಬಗ್ಗೆ ನಿರಂತರವಾಗಿ ಮಾತನಾಡಬೇಕು.
ನಮ್ಮ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ ಏನು?: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು, ಸಮರ್ಥ ನಾಯಕತ್ವ, ವ್ಯಕ್ತಿಗೌರವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ನಡವಳಿಕೆಗಳು ಪ್ರಜಾಪ್ರಭುತ್ವದ ಮೂಲಸೂತ್ರಗಳಾಗಿದ್ದು ಇದು ಎಲ್ಲರನ್ನೂ ಒಳಗೊಂಡು ಕಾಪಾಡುವ ಗುರಿಯನ್ನು ಹೊಂದಿದೆ.
ಸಾರ್ವಜನಿಕರ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಬಹುಮುಖ್ಯವಾದ ತತ್ವಗಳಲ್ಲಿ ಒಂದು ಎಂಬುದಾಗಿ ಗುರುತಿಸಲಾಗುತ್ತದೆ. ಪ್ರಜಾಪ್ರಭುತ್ವವು ರಾಜರ ಆಳ್ವಿಕೆಯ ಕಾಲದ ಹಾಗೆ ನಿರಂಕುಶ ಪ್ರಭುತ್ವವಲ್ಲ ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ. ಇದು ಮೂಲತಃ ಪ್ರಜೆಗಳ ರಾಜ್ಯ ಆಗಿದ್ದು, ಇಲ್ಲಿ ಪ್ರಜೆಗಳೇ ತಮ್ಮ ನಾಯಕರನ್ನು ಆರಿಸಿಕೊಂಡು, ತಮ್ಮದೇ ಆದ ನಿಯಮಾವಳಿಗಳಿಗೆ ತಾವೇ ಬದ್ಧರಾಗಿ ಬದುಕುವಂತಹ ವ್ಯವಸ್ಥೆ ಆಗಿದೆ.
ಭಾರತದ ವಿಭಿನ್ನ ಸಾಮಾಜಿಕ ಸಂದರ್ಭವನ್ನು ಗಮನಿಸಿದಾಗ, ಇಲ್ಲಿ ಜಾತಿಯ ಮೇಲರಿಮೆ ಮತ್ತು ವಿವಿಧ ಕಾರಣಗಳಿಗೆ ಶಿಕ್ಷಣ, ಉದ್ಯೋಗ, ಸಮಾಜ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬಹಳಷ್ಟು ಜನರ ಭಾಗವಹಿಸುವಿಕೆ ಅಸಾಧ್ಯವಾಗಿದ್ದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಸನ್ನಿವೇಶವೇ ಇಲ್ಲಿ ದೊಡ್ಡದಾಗಿತ್ತು. ಆದರೆ ಬಾಬಾಸಾಹೇಬರು ತಮ್ಮ ಸಂವಿಧಾನದ ಮೂಲಕ ಜಾರಿಗೊಳಿಸಿದ ಶಾಶ್ವತ ನಿಯಮಗಳಿಂದಾಗಿ ಅಂತಹ ಅಪಾಯವು ತಪ್ಪಿ, ಮತ್ತೊಮ್ಮೆ ಪ್ರಜಾಪ್ರಭುತ್ವದ ವಾತಾವರಣವು ಮರಳುವಂತಾಯಿತು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕುರಿತು ಇಷ್ಟೆಲ್ಲ ಮಾತನಾಡುವ ಮತ್ತು ಅದರ ಬಗ್ಗೆ ಪ್ರಚಾರ ಮಾಡುವ ಉದ್ದೇಶ ಹೊಂದಿರುವ ನಮ್ಮ ಸರ್ಕಾರದ ಮಾತು ಮತ್ತು ಕೃತಿಗೆ ಏನಾದರೂ ಸಾಮ್ಯತೆ ಇದೆಯೇ ಎಂದು ಗಮನಿಸುವಾಗ, ಸಾಮ್ಯತೆ ಇದೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ದಾಸೋಹ ಮತ್ತು ‘ನುಡಿದಂತೆ ನಡೆ’ ಎನ್ನುವ ಮಾತಿಗೆ ಬದ್ಧವಾಗಿ ನಡೆದುಕೊಂಡಿರುವ ನಮ್ಮ ಸರ್ಕಾರವು ಹಸಿವು ಮುಕ್ತ ರಾಜ್ಯದ ಆಶಯವನ್ನು ಗಮನದಲ್ಲಿ ಇಟ್ಟುಕೊಂಡು ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ರೂಪಿಸಿತು. ಇನ್ನು ಎಷ್ಟೇ ದುಡಿದರೂ ತಮ್ಮ ಶ್ರಮದ ಮೌಲ್ಯವನ್ನು ಪಡೆಯಲಾಗದೆ ನಿಜಕ್ಕೂ ಕಷ್ಟಪಡುವ ರೈತರಿಗೆ ನೆರವಾಗಿದ್ದ ಸರ್ಕಾರ ಅವರ ಸಾಲವನ್ನೂ ಮನ್ನಾ ಮಾಡಿತ್ತು. ಜೊತೆಗೆ ಮಹಿಳೆಯರು, ಮಕ್ಕಳಿಗೆ ಹಲವು ಯೋಜನೆಗಳನ್ನು ನೀಡಿದ್ದ ನಮ್ಮ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ನುಡಿದಂತೆ ನಡೆಯುವ ಕೆಲಸವನ್ನು ಮಾಡಿತು.
ಇನ್ನು ಕರೊನಾ ನಂತರದಲ್ಲಿ ಜನರ ಬದುಕು ಅತ್ಯಂತ ಕಷ್ಟಕ್ಕೆ ಸಿಲುಕಿದ ಸಂದರ್ಭವನ್ನು ಗಮನಿಸಿದ ಸರ್ಕಾರ ಅವರಿಗೆ ಎಲ್ಲ ರೀತಿಯಲ್ಲೂ ನೆರವಾಗಿ, ಸಂವಿಧಾನದ ಆಶಯಗಳಿಗೆ ಅನುಸಾರವಾಗಿ 5 ಗ್ಯಾರಂಟಿಗಳನ್ನು ನೀಡುವ ಮೂಲಕ ಅವರ ಘನತೆಯ ಬದುಕನ್ನು ಭದ್ರಪಡಿಸುವ ಕೆಲಸ ಮಾಡಿತು. ಬಹುಶಃ ಜನರಿಂದ, ಜನರಿಗಾಗಿ ಎನ್ನುವ ಮಾತು ಈ ಹಂತದಲ್ಲಿ ಸಾಕಾರಗೊಂಡಿತು. ಸರ್ಕಾರದ ಯೋಜನೆಗಳ ಉದ್ದೇಶಗಳಿಗೂ ಪ್ರಜಾಪ್ರಭುತ್ವದ ಆಶಯಗಳಿಗೂ ಸಾಮ್ಯತೆ ಇರುವುದರಿಂದ ಮಾತಿಗೂ ಕೃತಿಗೂ ಸಾಮ್ಯತೆ ಇದೆಯೆಂದೇ ನಾನು ಭಾವಿಸುತ್ತೇನೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಮಾತು ಒಂದು ಹಂತಕ್ಕೆ ಸಾಕಾರಗೊಂಡರೆ, ಮುಂದುವರಿದು ಪ್ರಜಾಪ್ರಭುತ್ವವು ಆಂತರಿಕವಾಗಿ ಸುಭದ್ರವಾಗಿರಬೇಕಾದರೆ, ಅಲ್ಲಿ ಮೌಢ್ಯರಹಿತ ಮತ್ತು ವೈಜ್ಞಾನಿಕ ಮನೋಭಾವದ ವಾತಾವರಣ ಮುಖ್ಯವಾಗಿದ್ದು, ಶಿಕ್ಷಣದ ಮೂಲಕ ಈ ಭಾವನೆಯನ್ನು ಮೂಡಿಸಲು ಪ್ರಯತ್ನಿಸುತ್ತೇವೆ.
ಇಂತಹ ಪ್ರಯತ್ನಗಳು ನಡೆದಾಗಲೆಲ್ಲ ನಮ್ಮೊಳಗೆ ತಣ್ಣಗೆ ಅಸ್ತಿತ್ವದಲ್ಲಿರುವ ಫ್ಯೂಡಲ್ ಮತ್ತು ಜಾತಿವ್ಯವಸ್ಥೆಯು ಇದಕ್ಕೆ ವಿರುದ್ಧವಾಗೇ ಇರುತ್ತದೆ ಮತ್ತು ಅಂಥವರ ವಿರುದ್ಧ ನಿಲುವು ತಳೆಯಲು ನಮಗೆ ಪ್ರಜಾಪ್ರಭುತ್ವದ ಆಶಯಗಳು ಮತ್ತು ಅದನ್ನು ಜಾರಿಗೊಳಿಸುವ ನಿಯಮಗಳ ಗುಚ್ಛವಾದ ಸಂವಿಧಾನವು ಸಾಕಷ್ಟು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ನಾವು ಮತ್ತೆ ಮತ್ತೆ ಪ್ರಜಾಪ್ರಭುತ್ವದ ಆಶಯಗಳನ್ನು ಪುನರುಚ್ಚರಿಸುವ ಕೆಲಸ ಮಾಡಬೇಕು.
ಈಗಾಗಲೇ ಹೇಳಲಾದಂತೆ, ಧಾರ್ವಿುಕ ಮೌಢ್ಯತೆ ಮತ್ತು ಅವೈಜ್ಞಾನಿಕತೆಯ ಮೂಲಕ ಹಲವು ಸುಳ್ಳುಗಳನ್ನು ಪದೇಪದೆ ಹೇಳಿ, ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಕೆಟ್ಟ ಶಕ್ತಿಗಳ ನಡುವೆ, ಇರುವಂತಹ ಪ್ರಜಾಪ್ರಭುತ್ವದ ಸತ್ಯಗಳನ್ನು ನಾವು ಮತ್ತೆ ಮತ್ತೆ ಗಟ್ಟಿಯಾಗಿ ಹೇಳದೆ ಹೋದರೆ ಅದು ನಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಂತೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆ ಅಧಿಕಾರ ನಡೆಸುವ ಯಾವುದೇ ಪಕ್ಷಗಳು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾದ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು ಅದನ್ನು ಎಲ್ಲರೂ ಆಸ್ಥೆವಹಿಸಿ ನಿರ್ವಹಿಸಿದಾಗ, ಪ್ರಜಾಪ್ರಭುತ್ವದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಜಾರಿಗೆ ಹೆಚ್ಚಿನ ಬಲ ಬರುತ್ತದೆ.
(ಲೇಖಕರು ಸಮಾಜ ಕಲ್ಯಾಣ ಸಚಿವರು)