ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ ಮಾನವ ಸರಪಳಿ

1
Published on

ಅಭಿಯಾನಕ್ಕೆ ಡಿಸಿ ಅಕ್ರಂಪಾಷಾ ಚಾಲನೆ | ದಾಖಲೆಯ 55 ಕಿ.ಮೀ.ವರೆಗೂ ಕೈ ಜೋಡಿಸಿದ ಪ್ರಜೆಗಳು

ವಿಜಯವಾಣಿ ಸುದ್ದಿಜಾಲ ಕೋಲಾರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಚರಿಸಲಾಯಿತು. ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯಲ್ಲಿ ಚಿಕ್ಕೊಂಡಹಳ್ಳಿಯಿಂದ ಆರಂಭವಾದ 55 ಕಿ.ಮೀ. ಮಾನವ ಸರಪಳಿ ಕ್ಯಾಲನೂರು, ವೇಮಗಲ್​, ಕೋಲಾರ ನಗರದ ಮೆಕ್ಕ ವೃತ್ತ, ಬಂಗಾರಪೇಟೆ ವೃತ್ತ, ಡೂಂ ಲೈಟ್​ ವೃತ್ತ, ಕ್ಲಾಕ್​ ಟವರ್​, ಕೊಂಡರಾಜನಹಳ್ಳಿ, ನರಸಾಪುರ ಮಾರ್ಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಲಕ್ಷ್ಮೀಸಾಗರ ಗೇಟ್​ತನಕ ಸುಮಾರು 55 ಕಿ.ಮೀ. ಉದ್ದ ರಚನೆಯಾಯಿತು.


ಪ್ರಾರಂಭದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿ.ಪಂ ಉಪ ಕಾರ್ಯದರ್ಶಿ ಬಿ.ಶಿವಕುಮಾರ್​, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಮಾನವ ಸರಪಳಿಗೆ ಚಾಲನೆ ನೀಡಿದರು. ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​, ಎಡಿಸಿ ಮಂಗಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್​ ಕೊನೇ ತುದಿಯಲ್ಲಿ ಮಾನವ ಸರಪಳಿಯ ಕೊಂಡಿ ಕಳಚುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.


ಶಾಲಾ ಕಾಲೇಜು, ವಿವಿಧ ಸಂಟನೆಗಳು, ಸರ್ಕಾರಿ ಇಲಾಖಾಧಿಕಾರಿಗಳು, ಸಿಬ್ಬಂದಿ ಬೃಹತ್​ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು. ಕಲಾ ತಂಡಗಳು ಕಾರ್ಯಕ್ರಮಕ್ಕೆ ಮೆರಗು ನೀಡಿತು. ನಂತರ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಾನವ ಸರಪಳಿಯನ್ನು ವೀಸಿದರು. ವಿದ್ಯಾರ್ಥಿಗಳು ದೇಶದ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸುಮಾರು ಒಂದು ತಾಸಿಗೂ ಅಧಿಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಅನಿಲ್​ ಕುಮಾರ್​, ಎಡಿಸಿ ಮಂಗಳ, ಜಿ.ಪಂ ಉಪ ಕಾರ್ಯದರ್ಶಿ ಬಿ.ಶಿವಕುಮಾರ್​, ಎಸಿ ಡಾ.ಮೈತ್ರಿ, ತಹಶೀಲ್ದಾರ್​ ನಯನ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಕುಮಾರ್​, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್​ ಸದಸ್ಯ ಸೀಸಂದ್ರ ಗೋಪಾಲ್​, ಮುಖಂಡ ಚಂಜಿಮಲೆ ರಮೇಶ್​ ಮತ್ತಿತರರು ಹಾಜರಿದ್ದರು.

ಪ್ರಜಾಸತ್ತಾತ್ಮಕ ದೇಶ ನಿರ್ಮಾಣ: ಜಿಲ್ಲಾಧಿಕಾರಿ ಅಕ್ರಂಪಾಷ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಪ್ರಜಾಪ್ರಭುತ್ವ ದಿನ ಆಚರಣೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಭಾರತವನ್ನು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಸಮಾನ ಅವಕಾಶ ದೊರೆಯುವಂತೆ ಮಾಡುವುದು ಪ್ರಜಾಪ್ರಭತ್ವದ ಆಶಯ, ತತ್ವಗಳನ್ನು ಉತ್ತೇಜಿಸುವ ಉದ್ದೇಶ ಇದೆ ಎಂದರು.

ಅರಿವು ಅಗತ್ಯ: ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಅರಿವನ್ನು ಪಡೆದುಕೊಳ್ಳಬೇಕು. ಆ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ದೇಶದಾದ್ಯಂತ ಸಂವಿಧಾನ ದಿನ ಆಚರಿಸಲಾಗುತ್ತಿದೆಯಾದರೂ ಸಂವಿಧಾನದ ವಿರುದ್ಧ ಮಾತನಾಡುವವರಿಗೆ ಎಚ್ಚರಿಕೆ ನೀಡಲು ರಾಜ್ಯದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ಕೈಗೊಂಡು, ರಾಜ್ಯದ ತುಂದಿಯಿಂದ ಮಾನವ ಸರಪಳಿ ರಚನೆ ಮಾಡಲಾಗಿದೆ. ಇದು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಸಮಾನತೆ ತೊಡೆದು ಹಾಕಿ: ಬಂಗಾರಪೇಟೆ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ, ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡು 2,500 ಕಿಲೋ ಮೀಟರ್​ ಉದ್ದದ ಮಾನವ ಸರಪಳಿ ನಿರ್ಮಿಸಿರುವುದು ಜಗತ್ತಿನಲ್ಲಿಯೇ ಅತಿ ಉದ್ದದ ಮಾನವ ಸರಪಳಿ ಎನಿಸಿಕೊಳ್ಳಲಿದೆ ಎಂದು ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಬಣ್ಣಿಸಿದರು. ಪಟ್ಟಣದಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಅಂಬೇಡ್ಕರ್​ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಪ್ರತಿಜ್ಞಾವಿಧಿ ಸ್ವೀಕರಿಸಿ, ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ಇತರ ದೇಶಗಳಿಗೆ ಮಾದರಿಯಾಗಿದೆ. ವಿಶ್ವ ಪ್ರಜಾಪ್ರಭುತ್ವ ದಿನವನ್ನು ದೇಶದಲ್ಲಿ ಅರ್ಥಪೂರ್ಣ ದಿನವನ್ನಾಗಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮಾನವ ಸರಪಳಿ ಆಯೋಜಿಸಿದೆ. ಈ ಮಾನವ ಸರಪಳಿಯು ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಂಕೇತವಾಗಿದೆ. ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕುವವರೆಗೂ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಿಕ್ಕಿನಲ್ಲಿ, ಎಲ್ಲ ಜಾತಿ, ಧರ್ಮದ ಬಡವರಿಗೆ, ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಿ ಮಾನವ ಸರಪಳಿ ನಿರ್ಮಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net