

ಶಿವಮೊಗ್ಗ: ಭಾರತವು ವಿಶ್ವದ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವವಾಗಿದೆ. ಯುವಜನರು ಪ್ರಜಾಪ್ರಭುತ್ವ ತನಗೆ ನೀಡಿರುವ ಹಕ್ಕು ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ರಾಷ್ಟ್ರ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಟಿ.ತಿರುಮಲೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕಾಚಿಕೊಪ್ಪ ಗ್ರಾಮದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಸೋಮವಾರ ಉಪನ್ಯಾಸ ನೀಡಿದ ಅವರು, ದೇಶದ ಪ್ರತಿಯೊಬ್ಬ ಯುವಕನು ಸರಿಯಾದ ಶಿಕ್ಷಣ ಪಡೆದು ಸಮಾಜದ ಆಗುಹೋಗುಗಳನ್ನು ಅರಿಯಬೇಕು. ಪ್ರತಿಯೊಂದನ್ನೂ ಪ್ರಶ್ನಿಸಿ ಅರ್ಥೈಸಿಕೊಳ್ಳಬೇಕು. ರಾಜಕೀಯ ಕ್ಷೇತ್ರವನ್ನೊಳಗೊಂಡು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.
ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರು ನೂರಕ್ಕೂ ಅಧಿಕ ಜನರಿಗೆ ನೇತ್ರ ತಪಾಸಣೆ ನಡೆಸಿದರು. ಕೃಷಿ ಮತ್ತು ತೋಟಗಾರಿಕಾ ವಿವಿ ತಜ್ಞ ಡಾ. ಸಂತೋಷ್ ಎರೆಹುಳು ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ನೀಡಿದರು. ಮಹಾವಿದ್ಯಾಲಯದ ತಜ್ಞ ಡಾ. ಜಿ.ಯು.ಮಂಜು ರಾಸುಗಳ ಪೋಷಣೆ ಹಾಗೂ ಹಾಲಿನಲ್ಲಿ ಕೊಬ್ಬು ಮತ್ತು ಘನಾಂಶಗಳನ್ನು ಕಾಪಾಡಿಕೊಳ್ಳುವ ತಾಂತ್ರಿಕತರಗಳ ಕುರಿತು ಮಾಹಿತಿ ನೀಡಿದರು.
ಎನ್‌ಎಸ್‌ಎಸ್ ಶಿಬಿರಾಧಿಕಾರಿಗಳಾದ ಡಾ. ಹರೀಶ್, ರವಿಕುಮಾರ್, ನಾಗರಾಜ್, ಪರಮೇಶ್, ಗ್ರಾಮಸ್ಥರಾದ ರೇಣುಕಪ್ಪ, ಸುರೇಶ್, ಯಶೋದಾ, ಮಂಜುಳಾ, ಚಂದ್ರಮ್ಮ, ಗಾಯತ್ರಮ್ಮ, ಉಷಾ, ಶಾಂತಾ ಇದ್ದರು.