ಜನೌಷಧ ಕೇಂದ್ರ ಬಂದ್‌ ಆದೇಶ ಹಿಂಪಡೆಯಲು ಆಗ್ರಹ

12
Published on

ಮೈಸೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವುದಕ್ಕೆ ಆದೇಶ ಹೊರಡಿಸಿರುವುದು ಖಂಡನೀಯ. ಹಾಗಾಗಿ ಸರ್ಕಾರ ತನ್ನ ಈ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ನ ಮೈಸೂರು ಘಟಕದಿಂದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ತಹಸೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಮುಚ್ಚಬಾರದು ಎಂದು ಒತ್ತಾಯಿಸಿದರು.

ಪಂಚಾಯತ್‌ನ ಮಹಿಳಾ ಪ್ರಮುಖ ನಾಗಮಣಿ ಮಾತನಾಡಿ, ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸುವ ದೃಷ್ಟಿಯಡಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನಾ ಯೋಜನೆಯಡಿ ಜನೌಷಧ ಕೇಂದ್ರ ತೆರೆದಿತ್ತು. ಇದರನ್ವಯ ಈಗಾಗಲೇ ದೇಶಾದ್ಯಂತ 16,290 ಜನೌಷಧ ಕೇಂದ್ರ, ಕರ್ನಾಟಕ ರಾಜ್ಯದಲ್ಲಿ 1,459 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದರಲ್ಲಿ ಸುಮಾರು 207ಕ್ಕೂ ಹೆಚ್ಚು ಜನೌಷಧ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಇವುಗಳನ್ನು ಮುಚ್ಚಲು ಆದೇಶಿಸಿರುವುದು ಸರಿಯಲ್ಲ ಎಂದು ದೂರಿದರು.

ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ನಡೆಯುತ್ತಿರುವ ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಈ ರಾಜ್ಯದ ಬಡವರು, ದೀನದಲಿತರ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇದ್ದರೆ ಕೂಡಲೇ ಈ ಆದೇಶವನ್ನು ಹಿಂಪಡೆಯಲಿ’ ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ಪೂರೈಸಲಾಗುತ್ತಿದ್ದು, ಜನೌಷಧ ಕೇಂದ್ರಗಳಲ್ಲಿ ರೋಗಿಗಳು ಹಣ ಕೊಟ್ಟು ಔಷಧ ಖರೀದಿಸುವುದು ಬೇಡ ಎಂದು ಆರೋಗ್ಯ ಸಚಿವ ಸಮಜಾಯಿಷಿ ನೀಡಿದ್ದಾರೆ. ಆದರೆ ಎಷ್ಟು ಆಸ್ಪತ್ರೆಗಳಲ್ಲಿ ಔಷಧ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತಿವೆ ಎಂದು ಪ್ರಶ್ನಿಸಿದ್ದಾರೆ.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್, ಮುಖಂಡರಾದ ಆನಂದ್, ದಯಾನಂದ, ಹರ್ಷ, ರಾಮಚಂದ್ರರಾವ್, ಕಲೀಮ್ ಖಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net