

ಶಿವಮೊಗ್ಗ: ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಡೆಯಬೇಕು. ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸಿ ಮೂಲ ಸೌಕರ್ಯ ಹೆಚ್ಚಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಭದ್ರಾವತಿಯ ಶಶಿಕುಮಾರ್ ಗೌಡ ಬುಧವಾರ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಹೆಚ್ಚಿದ್ದು, ಬಹುತೇಕ ಶಾಲೆಗಳಲ್ಲಿ ಹೆಚ್ಚಿನ ಡೊನೇಷನ್ ಪಡೆಯಲಾಗುತ್ತಿದೆ. ಇದರಿಂದ ಪಾಲಕರಿಗೆ ಆರ್ಥಿಕ ಹೊರೆ ಉಂಟಾಗಿದೆ. ಮಧ್ಯಮ ಹಾಗೂ ಬಡ ಕುಟುಂಬಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಖರ್ಚು ಮಾಡಬೇಕಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ದುರಸ್ತಿಯಾಗಬೇಕಿದೆ. ಅನೇಕ ಶಾಲೆಗಳಲ್ಲಿ ಶೌಚಗೃಹಗಳೇ ಇಲ್ಲ. ಬಹುತೇಕ ಶಾಲೆಗಳಲ್ಲಿ ನೀರಿನ ವ್ಯವಸ್ಥೆ ಇಲ್ಲ. ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಬೇಕು. ಸರ್ಕಾರಿ ಆದೇಶವನ್ನು ಖಾಸಗಿ ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಅಧಿಕ ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ಮಾನ್ಯತೆ ರದ್ದುಪಡಿಸಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಅರುಣ್ ಕಾನಹಳ್ಳಿ, ಗಣೇಶ್ ಬೆಳ್ಳಿ ಪ್ರತಿಭಟನೆಯಲ್ಲಿದ್ದರು.