

ಶಿವಮೊಗ್ಗ: ರೈತರ ಜಮೀನುಗಳ ದಾಖಲೆಗಳನ್ನು ರದ್ದು ಮಾಡುವುದಾಗಿ ನೋಟೀಸ್ ಜಾರಿ ಮಾಡಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶರಾವತಿ ಮುಳುಗಡೆಯಿಂದ ಸ್ಥಳಾಂತರಗೊಂಡ ರೈತರಿಗೆ ಬೇರೆ ಕಡೆ ಜಮೀನು ಮಂಜೂರು ಮಾಡಿದ್ದು, ಕಂದಾಯ ಭೂಮಿ, ಗೋಮಾಳ, ಹುಲ್ಲುಬನ್ನಿ, ಕರಾಬು ಜಮೀನುಗಳಲ್ಲಿ ಇತರೆಯವರಿಗೆ ಜಮೀನು ಮಂಜೂರು ಮಾಡಲಾಗಿದೆ. ಸರ್ಕಾರದಿಂದ ಹಕ್ಕುಪತ್ರ ಪಡೆದು ಖಾತೆ, ಪಹಣಿ, ದಾಖಲಾಗಿ ಪೋಡು ಮಾಡಿಸಿಕೊಂಡು ನೆಮ್ಮದಿಯಿಂದ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಹಲವರು 30-40 ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಅವರಿಗೆ ಸಾಗುವಳಿ ಹಕ್ಕುಪತ್ರ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶರಾವತಿ ಮುಳುಗಡೆ ರೈತರು ಮತ್ತು ಇತರೆಡೆ ಕೃಷಿ ಮಾಡುತ್ತಿರುವ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರ ಹೆಸರಿಗೆ ಇಂಡೀಕರಣ ಮಾಡಿಕೊಳ್ಳಲಾಗಿದೆ. ಸರ್ಕಾರವೇ ಮಂಜೂರು ಮಾಡಿದ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಈ ಜಮೀನುಗಳ ದಾಖಲೆಗಳನ್ನು ವಜಾ ಮಾಡಬೇಕು ಎಂದು ಅರಣ್ಯ ಇಲಾಖೆ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಹೀಗಾಗಿ ಉಪವಿಭಾಗಾಧಿಕಾರಿಗಳು ರೈತರಿಗೆ ನೋಟೀಸ್ ನೀಡುತ್ತಿದ್ದಾರೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೃಷಿಕರು ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ನೋಟೀಸ್‌ನ್ನು ನೋಡಿ ರೈತರು ಸಾಮೂಹಿಕ ಆತ್ಮಹತ್ಯೆ ಚಿಂತನೆ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ನೋಟೀಸ್ ಕೊಡುವುದನ್ನು ನಿಲ್ಲಿಸಬೇಕು. ನೋಟೀಸ್ ಕೊಟ್ಟಿರುವ ರೈತರ ದಾಖಲೆಗಳನ್ನು ಯಾವುದೇ ಕಾರಣಕ್ಕೂ ವಜಾ ಮಾಡಬಾರದು. ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ರೈತ ಸಂಘದ ಪದಾಧಿಕಾರಿಗಳಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಕೆ.ರಾಘವೇಂದ್ರ, ಇ.ಬಿ.ಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು.