

ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲು ಹಂಚಿಕೆಗೆ ಸಂಬಂಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆಗೆ ಸರ್ವರ್ ಡೌನ್ ಕಾರಣದಿಂದ ಹಿನ್ನಡೆಯಾಗಿದೆ. ಹೀಗಾಗಿ ಸಮೀಕ್ಷೆಗೆ ಹೆಚ್ಚುವರಿ ಸಮಯ ನಿಗದಿ ಮಾಡಬೇಕು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಒತ್ತಾಯಿಸಿದರು.
ಜಿಲ್ಲಾ ಭೋವಿ ಸಮಾಜದಿಂದ ಭಾನುವಾರ ಏರ್ಪಡಿಸಿದ್ದ ಸಮೀಕ್ಷೆ ಕುರಿತ ಜಾಗೃತಿ ಸಭೆಯಲ್ಲಿ ಮಾತನಾಡಿ, ದತ್ತಾಂಶ ಸಂಗ್ರಹಕ್ಕೆ ಆಯೋಗವು ತಯಾರಿಸುವ ಆ್ಯಪ್‌ನಲ್ಲಿ ಪ್ರಶ್ನಾವಳಿಗಳಲ್ಲಿ ಉಪ ಜಾತಿ ಕಾಲಂ ಬಿಟ್ಟು ಹೋಗಿದೆ. ಆರಂಭದಲ್ಲಿ ಎಲ್ಲ ಸರ್ವರ್ ಡೌನ್ ಆಗಿತ್ತು. ಈಗಾಗಲೇ ಎಚ್.ಎನ್.ನಾಗಮೋಹನ್ ದಾಸ್ ಅವರನ್ನು ಭೇಟಿಯಾಗಿ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿದೆ ಎಂದರು.
ಭೋವಿ ಸಮಾಜದ ಮುಖಂಡರಾದ ಧೀರರಾಜ್ ಹೊನ್ನವಿಲೆ, ಸಂತೋಷ್ ಹೊಳಲೂರು, ದೇವಿ ಕುಮಾರ್, ದೇಶಾದ್ರಿ ಹೊಸ್ಮನೆ, ಶಿಕಾರಿಪುರದ ಈಶ್ವರ್ ಜಾವಗಟ್ಟಿ, ಸೊರಬದ ಬಸವರಾಜಪ್ಪ ಹಾವಣ್ಣನವರ್, ಭದ್ರಾವತಿಯ ಶಿವು ಪಾಟೀಲ್, ತೀರ್ಥಹಳ್ಳಿಯ ವರಲಕ್ಷ್ಮೀ ಅವರು ಸಮೀಕ್ಷೆ ವೇಳೆ ಸ್ಥಳೀಯವಾಗಿ ಎದುರಾಗುತ್ತಿರುವ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.
ಸಾಗರ ಪ್ರವಾಸದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಸಚಿವ ಶಿವರಾಜ್ ಎಸ್.ತಂಗಡಗಿ ಜಿಲ್ಲಾ ಭೋವಿ ಭವನಕ್ಕೆ ಭೇಟಿ ಕೊಟ್ಟು ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡರು. ಸಮಾಜದ ಅಭಿನಂದನೆ ಸ್ವೀಕರಿಸಿದರು.