

ಸರಗೂರು: ಧರ್ಮಸ್ಥಳದಲ್ಲಿ ದೇವರ ಹೆಸರಿಗೆ ಕಳಂಕ ತರಲು ಕೆಲವರು ಷಡ್ಯಂತ್ರ ನಡೆಸಿದ್ದು ಇದರ ಹಿಂದಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸಂತೆ ಮಾಸ್ತಮ್ಮ ದೇವಸ್ಥಾನದಿಂದ ಪಟ್ಟಣ ಪಂಚಾಯಿತಿ ಮುಂಭಾಗದವರೆಗೂ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಸಂರಕ್ಷಣಾ ಅಭಿಯಾನ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭಗವಾಧ್ವಜ ಹಿಡಿದು ಬಂದ ಕಾರ್ಯಕರ್ತರು ಧರ್ಮ ಉಳಿಸಲು ಧರ್ಮ ಯುದ್ಧ ಎಂದು ಘೋಷಣೆ ಕೂಗಿದರು. ಹಿಂದು ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಮೈ.ಕ.ಪ್ರೇಮ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದು ದೇವರ ದೇವಾಲಯಗಳಿಗೆ ಕನ್ನ ಹಾಕುತ್ತಿದೆ. ಇದೀಗ ಅವರ ಮುಖವಾಡ ಬಯಲಾಗಿದೆ. ಧರ್ಮ ಉಳಿಯಬೇಕಾದರೆ ಹಿಂದುಗಳ ಒಗ್ಗಟ್ಟು ಮುಖ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದು ದೇವಸ್ಥಾನಗಳ ವಿಷಯದಲ್ಲಿವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪ್ರತಿಭಟನೆ: ಧರ್ಮಸ್ಥಳದಲ್ಲಿ ದೇವರ ಹೆಸರಿಗೆ ಕಳಂಕ ತರುವ ಷಡ್ಯಂತ್ರದ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಸರ್ಕಾರ ಹಿಂದು ದೇವಾಲಯಗಳಿಗೆ ಕನ್ನ ಹಾಕುತ್ತಿದೆ ಎಂದು ಆರೋಪಿಸಿ, ಹಿಂದುಗಳ ಒಗ್ಗಟ್ಟಿಗೆ ಕರೆ ನೀಡಿದರು. ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಒದಗಿಸುವ ಬದಲು ಹಿಂದುಗಳ ಮೇಲೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗ ದಳ ಸೇನೆ ಅಧ್ಯಕ್ಷ ಮಂಡ್ಯ ಮಂಜುನಾಥ ಮಾತನಾಡಿ, ಹಿಂದೆ ಬ್ರಿಟಿಷ್ ಹಾಗೂ ಪೋರ್ಚುಗೀಸರು ಹಿಂದು ದೇವಾಲಯಗಳನ್ನು ನಾಶ ಮಾಡಿದ್ದು ಕೇಳಿದ್ದೇವೆ. ಆದರೆ ಇಂದು ನೋಡುವ ಪರಿಸ್ಥಿತಿ ಬಂದಿದೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೊಡಿಸುವ ಬದಲು ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧ್ಯವಾದರೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು. ಅದನ್ನು ಬಿಟ್ಟು ತಾರತಮ್ಯ ಮಾಡಬಾರದು. ಯೂಟ್ಯೂಬರ್‌ಗೆ ಕೆಪಿಸಿಸಿ ಬೆಂಬಲ ಇದೆ. ಷಡ್ಯಂತ್ರದ ಹಿಂದೆ ಇರುವ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ ಮಾತನಾಡಿ, ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಗುವುದು ಎಂದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ನೂರಳಾಸ್ವಾಮಿ, ವಿನಾಯಕ ಪ್ರಸಾದ್, ಮುಖಂಡರಾದ ಎಚ್.ಸಿ.ಲಕ್ಷಣ್, ಮನುಗನಹಳ್ಳಿ ಮಂಜುನಾಥ, ಸಿ.ಕೆ.ಗಿರೀಶ್, ಜೆಡಿಎಸ್ ಮುಖಂಡ ಜಯಪ್ರಕಾಶ್, ರಾಮಚಂದ್ರ, ನವೀನ್, ಚನ್ನಪ್ಪ, ಗೋಬಿ ರಾಮಣ್ಣ, ಆನಂದ ಮೈಲಾರಿ, ಅಭಿ, ಶ್ರೀವತ್ಸ, ಗುರುಸ್ವಾಮಿ, ರಾಕೇಶ್ ಭಟ್, ಉಮೇಶ್, ರಮೇಶ್, ಪೇಂಟ್ ನಾಗರಾಜು, ನಾಗರಾಜು, ರಾಜು, ರಮೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಗುರುಸ್ವಾಮಿ ಇದ್ದರು.