ಗೊರವನಹಳ್ಳಿ ಗ್ರಾಮ ನಗರಸಭೆಯಿಂದ ಕೈಬಿಡಲು ಒತ್ತಾಯ

17M.D.R.7
ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮವನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಗ್ರಾ.ಪಂ. ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಗೊರವನಹಳ್ಳಿ ಪ್ರಸನ್ನ, ಸಂತೋಷ್, ರವಿ, ಶಿವರಾಮು, ಕುಳ್ಳಪ್ಪ, ಚನ್ನಪ್ಪ, ಸಿದ್ದರಾಜು, ಅವಿನಾಶ್ ಇದ್ದರು.
Published on

ಮದ್ದೂರು: ಗೊರವನಹಳ್ಳಿ ಗ್ರಾಮವನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಗೊರವನಹಳ್ಳಿ ಗ್ರಾಪಂ ಕಚೇರಿ ಬಳಿ ಆಗಮಿಸಿದ ನೂರಾರು ಸಂಖ್ಯೆಯ ಸ್ಥಳೀಯ ನಿವಾಸಿಗಳು, ತಾಪಂ ಇಒ, ಗ್ರಾಪಂ ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಗೊರವನಹಳ್ಳಿ ಗ್ರಾಮವನ್ನು ನಗರಸಭೆಗೆ ಸೇರಿಸುವ ನಿರ್ಧಾರವನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿದರು.

ಗೊರವನಹಳ್ಳಿ ಗ್ರಾಮವನ್ನು ನಗರಸಭೆಯನ್ನಾಗಿಸಲು ಮುಂದಾಗಿರುವ ಅಧಿಕಾರಿಗಳು ಹಾಗೂ ಶಾಸಕರು ಸಾರ್ವಜನಿಕರ ಗಮನಕ್ಕೆ ತರದೆ ಏಕಾಏಕಿ ನಗರಸಭೆಯನ್ನಾಗಿಸಲು ಮುಂದಾಗಿದ್ದು, ಇದರಿಂದಾಗಿ ಹಲವಾರು ಸಮಸ್ಯೆಗಳು ತಲೆದೋರಲಿದೆ. ನಮಗೆ ನಗರಸಭೆ ಬೇಡ. ಗ್ರಾಪಂ ಆಗಿಯೇ ಮುಂದುವರಿಯಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ನಗರಸಭೆಯನ್ನಾಗಿಸುವುದರಿಂದ ಗ್ರಾಮೀಣ ಭಾಗದ ರೈತರಿಗೆ ಸಿಗುವ ಹಲವಾರು ಯೋಜನೆಗಳು ಕುಂಠಿತವಾಗಲಿದ್ದು, ನರೇಗಾ ಯೋಜನೆಯಲ್ಲಿ ನೂರಾರು ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ. ಅಲ್ಲದೆ ಮೇಲ್ದರ್ಜೆಗೇರಿಸುವುದರಿಂದ ಈ ಎಲ್ಲ ಸೌಲಭ್ಯಗಳು ವಂಚಿತವಾಗಲಿದೆ. ಆದ್ದರಿಂದ ಗ್ರಾಮೀಣ ಪ್ರದೇಶವನ್ನಾಗಿಯೇ ಉಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕೆಂದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಉಮೇಶ್ ಜೂ. 25ರ ರಂದು ಗ್ರಾಮ ಸಭೆ ಕರೆದಿದ್ದು ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಂಚಾಯಿತಿ ವತಿಯಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಗೊರವನಹಳ್ಳಿ ಪ್ರಸನ್ನ, ಸಂತೋಷ್, ರವಿ, ಶಿವರಾಮು, ಕುಳ್ಳಪ್ಪ, ಚನ್ನಪ್ಪ, ಸಿದ್ಧರಾಜು, ಅವಿನಾಶ್, ರಘು, ರಾಖಿ, ಮಹೇಶ್, ಯಧು, ಸಿರಿ, ಚೇತನ್‌ಕುಮಾರ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net